ಕೋಲ್ಕತ್ತಾ(ಪಶ್ಚಿಮ ಬಂಗಾಳ): ತೀವ್ರ ಕುತೂಹಲ ಕೆರಳಿಸಿರುವ ಭವಾನಿಪುರ ವಿಧಾನಸಭಾ ಕ್ಷೇತ್ರದ ಉಪಚುನಾವಣೆಯಲ್ಲಿ ಇಂದು ಶೇ. 53.32ರಷ್ಟು ಮತದಾನವಾಗಿದೆ. ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಈ ಕ್ಷೇತ್ರದಿಂದ ಕಣಕ್ಕಿಳಿದಿದ್ದು, ಗೆಲುವು ಸಾಧಿಸಿದರೆ ಮಾತ್ರ ಸಿಎಂ ಆಗಿ ಮುಂದುವರೆಯಲಿದ್ದಾರೆ.
ಪಶ್ಚಿಮ ಬಂಗಾಳ ವಿಧಾನಸಭೆ ಚುನಾವಣೆ ವೇಳೆ ನಂದಿಗ್ರಾಮದಿಂದ ಕಣಕ್ಕಿಳಿದಿದ್ದ ಮಮತಾ ಬಿಜೆಪಿಯ ಸುವೇಂದು ಅಧಿಕಾರಿ ವಿರುದ್ಧ ಸೋಲು ಕಂಡಿದ್ದರು. ಹೀಗಾಗಿ ಭವಾನಿಪುರ ಕ್ಷೇತ್ರದಿಂದ ಕಣಕ್ಕಿಳಿದು, ಅದೃಷ್ಟ ಪರೀಕ್ಷೆಗೆ ಮುಂದಾಗಿದ್ದಾರೆ. ಇವರ ವಿರುದ್ಧ ಬಿಜೆಪಿಯಿಂದ ಪ್ರಿಯಾಂಕಾ ಟಿಬ್ರೇವಾಲ್ ಸ್ಪರ್ಧೆ ಮಾಡಿದ್ದಾರೆ.
ಇದನ್ನೂ ಓದಿ: ಭವಾನಿಪುರ by-polls: ಬೂತ್ ವಶಪಡಿಸಿಕೊಳ್ಳಲು TMC ಯತ್ನಿಸುತ್ತಿದೆ - BJP ಅಭ್ಯರ್ಥಿ ಪ್ರಿಯಾಂಕಾ ಆರೋಪ
ಪಶ್ಚಿಮ ಬಂಗಾಳದಲ್ಲಿ ಒಟ್ಟು 3 ವಿಧಾನಸಭಾ ಕ್ಷೇತ್ರಗಳಿಗೆ ಉಪಚುನಾವಣೆ ನಡೆದಿದ್ದು, ಭವಾನಿಪುರದಲ್ಲಿ ಶೇ. 53.32ರಷ್ಟು, ಸಂಸರ್ಗಂಜ್ನಲ್ಲಿ ಶೇ 78.60 ಹಾಗೂ ಜಂಗೀಪುರ್ದಲ್ಲಿ ಶೇ. 76.12ರಷ್ಟು ವೋಟಿಂಗ್ ಆಗಿದೆ. ಎಲ್ಲ ಕ್ಷೇತ್ರಗಳಲ್ಲೂ ಶಾಂತಿಯುತ ಮತದಾನವಾಗಿದ್ದು, ಯಾವುದೇ ಅಹಿತಕರ ಘಟನೆ ನಡೆದಿಲ್ಲ ಎಂದು ಚುನಾವಣಾ ಆಯೋಗ ಮಾಹಿತಿ ನೀಡಿದೆ. ಮೂರು ಕ್ಷೇತ್ರಗಳ ಮತಎಣಿಕೆ ಅಕ್ಟೋಬರ್ 3ರಂದು ನಡೆಯಲಿದೆ.