ಬಾರ್ಪೆಟಾ(ಅಸ್ಸೋಂ): ಅಸ್ಸೋಂನಲ್ಲಿ ಮಹಿಳೆಯೊಬ್ಬರು ತಮ್ಮ ಮನೆಯಲ್ಲಿಯೇ ಅವಳಿ ಸಯಾಮಿ ಮಕ್ಕಳಿಗೆ ಜನ್ಮ ನೀಡಿದ್ದಾರೆ. ಬಾರ್ಪೇಟಾ ಜಿಲ್ಲೆಯ ಸರುಕ್ಷೇತ್ರಿ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯ ಪಾಕಾ ಬೆಟ್ಬರಿ ಗ್ರಾಮದಲ್ಲಿ ಈ ಘಟನೆ ನಡೆದಿದೆ.
ಅಕ್ಟೋಬರ್ 27 ರ ರಾತ್ರಿ ತಲೆಗಳು ಕೂಡಿಕೊಂಡಿರುವ ಇಬ್ಬರು ಅವಳಿ ಹೆಣ್ಣುಮಕ್ಕಳು ಜನಿಸಿದ್ದಾರೆ. ಸಯಾಮಿ ಅವಳಿ ಮಕ್ಕಳ ಜನನದಿಂದ ಗೊಂದಲಕ್ಕೊಳಗಾದ ಬಡ ದಂಪತಿ ಸಲಹೆಗಾಗಿ ಬಾರ್ಪೇಟಾ ಜಿಲ್ಲೆಯ ಜಂಟಿ ನಿರ್ದೇಶಕ ಆರೋಗ್ಯ ಇಲಾಖೆಯ ಜಂಟಿ ನಿರ್ದೇಶಕರನ್ನು ಸಂಪರ್ಕಿಸಿದ್ದಾರೆ.
ಜಿಲ್ಲೆಯ ವೈದ್ಯರು ಗುವಾಹಟಿಯಲ್ಲಿರುವ ಗುವಾಹಟಿ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯ (GMCH) ತಜ್ಞರೊಂದಿಗೆ ಈ ವಿಚಾರವಾಗಿ ಚರ್ಚೆ ನಡೆಸಿದ್ದಾರೆ. ಈ ಬಗ್ಗೆ ಪ್ರತಿಕ್ರಿಯಿಸಿದ ಆರೋಗ್ಯ ಇಲಾಖೆಯ ಜಂಟಿ ನಿರ್ದೇಶಕ (ಬಾರ್ಪೇಟಾ ಜಿಲ್ಲೆ) ಡಾ.ತೀರ್ಥನಾಥ ಶರ್ಮಾ, ಅವಳಿ ಮಕ್ಕಳನ್ನು ಬೇರ್ಪಡಿಸಲು ಶಸ್ತ್ರಚಿಕಿತ್ಸೆ ಅನಿವಾರ್ಯವಾಗಿದೆ. ಇದರಿಂದ ಅವರು ಬದುಕಬಹುದು. ಆದರೆ, ಇದೊಂದು ಅಪರೂಪದ ಪ್ರಕರಣವಾಗಿರುವುದರಿಂದ ಶಸ್ತ್ರ ಚಿಕಿತ್ಸೆ ಕುರಿತು ಇತರೆ ಆಸ್ಪತ್ರೆಗಳ ವೈದ್ಯರೊಂದಿಗೆ ಸಂಪರ್ಕದಲ್ಲಿರುವುದಾಗಿ ತಿಳಿಸಿದರು