ಗುವಾಹಟಿ (ಅಸ್ಸೋಂ): ಮಹಾಮಾರಿ ಕೋವಿಡ್-19 ವಿಚಾರದಲ್ಲಿ ವಿಶ್ವ ಆರೋಗ್ಯ ಸಂಸ್ಥೆ(WHO) ವಿರುದ್ಧ ಅಸ್ಸೋಂನ ಸಚಿವರೊಬ್ಬರು ಆಕ್ರೋಶ ವ್ಯಕ್ತಪಡಿಸುವ ಜೊತೆಗೆ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ. ಕೋವಿಡ್ ತಡೆಯಲು ಕೋಟಿ ಕೋಟಿ ಡಾಲರ್ ಖರ್ಚು ಮಾಡುತ್ತಿದ್ದರೂ ಸೋಂಕು ತಡೆಯಲು ವಿಶ್ವ ಆರೋಗ್ಯ ಸಂಸ್ಥೆ ವಿಫಲವಾಗಿದೆ ಎಂದು ಸಚಿವ ಚಂದ್ರ ಮೋಹನ್ ಪಟೋವರಿ ಆರೋಪಿಸಿದ್ದಾರೆ.
ಶುಕ್ರವಾರ ಸರ್ಕಾರಿ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಕೋವಿಡ್ -19 ನಿಂದಾಗಿ ಮೃತಪಟ್ಟವರ ಪಟ್ಟಿಯನ್ನು ದೇವರೇ ಮಾಡಿದ್ದಾನೆ. ಭಗವಾನ್ ಅಥವಾ ದೇವರು ಅಥವಾ ಅಲ್ಲಾ ತನ್ನ ಕಂಪ್ಯೂಟರ್‌ನಲ್ಲಿ ಈ ಪಟ್ಟಿಯನ್ನು ಮಾಡಿದ್ದಾನೆ. ಜೊತೆಗೆ ಕೋವಿಡ್-19 ವೈರಸ್ ಅನ್ನು ದೇವರು ತನ್ನ ಸೂಪರ್ ಕಂಪ್ಯೂಟರ್ ಮೂಲಕ ಭೂಮಿಗೆ ಕಳುಹಿಸಿದ್ದಾನೆ. ಯಾರಿಗೆಲ್ಲಾ ಈ ವೈರಸ್ ಪರಿಣಾಮ ಬೀರಿ ಕೊಲ್ಲಬೇಕು ಎಂಬುದರ ಪಟ್ಟಿಯನ್ನೂ ದೇವರೇ ಮಾಡಿದ್ದಾನೆ ಎಂದು ಬೇಜವಾಬ್ದಾರಿಯಿಂದ ಕೂಡಿರುವ ಹೇಳಿಕೆ ನೀಡಿದ್ದಾರೆ.
ಎರಡೂ ಕೋವಿಡ್ ಲಸಿಕೆಯ ಡೋಸ್‌ಗಳನ್ನು ಪಡೆದವರೂ ಸಾಯುತ್ತಿರುವುದನ್ನು ನಾವು ನೋಡುತ್ತಿದ್ದೇವೆ. ಎರಡು ಡೋಸ್‌ಗಳು ಒಮ್ಮೆ ಇಮ್ಯೂನಿಟಿಯನ್ನು ಹೆಚ್ಚಿಸುತ್ತವೆ. ಆದರೆ ವಿಶ್ವ ಆರೋಗ್ಯ ಸಂಸ್ಥೆ ಕೊರೊನಾಗೆ ಸೂಕ್ತ ಲಸಿಕೆ ಕಂಡು ಹಿಡಿಯುವಲ್ಲಿ ವಿಫಲವಾಗಿದೆ. ಈ ವಿಚಾರದಲ್ಲಿ ವಿಜ್ಞಾನಿಗಳು ಯಾಕೆ ವಿಫಲವಾದ್ರು ಎಂದು ಪಟೋವರಿ ಪ್ರಶ್ನಿಸಿದ್ದಾರೆ.
ಇದನ್ನೂ ಓದಿ: ಒಂದೇ ದಿನ 1 ಕೋಟಿಗೂ ಹೆಚ್ಚು ಜನರಿಗೆ ಕೋವಿಡ್ ಲಸಿಕೆ: ಹೊಸ ದಾಖಲೆ ಬರೆದ ಭಾರತ
ಪ್ರಕೃತಿಯಿಂದ ಈ ವೈರಸ್ ಬಂದಿದೆ. ಪ್ರಕೃತಿಯಿಂದ ಮಾತ್ರ ಇದನ್ನು ನಿಯಂತ್ರಿಸಲು ಸಾಧ್ಯ. ನಾವು ಪ್ರಕೃತಿಯ ವಿರುದ್ಧ ಆರಂಭಿಸಿದ ಯುದ್ಧದ ವಿರುದ್ಧ ಪ್ರಕೃತಿ ಪ್ರತೀಕಾರ ತೀರಿಸಿಕೊಳ್ಳುತ್ತಿದೆ. ನಮ್ಮ ಮನಸಿಗೆ ಬಂದಂತೆ ನಾವು ಮರಗಳನ್ನು ಕಡಿದಿದ್ದೇವೆ. ಆದ್ದರಿಂದ ಪ್ರಕೃತಿ ಈಗ ಪ್ರತೀಕಾರ ತೀರಿಸಿಕೊಳ್ಳುತ್ತಿದೆ ಎಂದಿದ್ದಾರೆ.
ಮೂರನೇ ಅಲೆ ಅಥವಾ ನಾಲ್ಕನೇ ಅಲೆ (ಕೋವಿಡ್ 19) ನಮ್ಮ ಮೇಲೆ ಪರಿಣಾಮ ಬೀರಿದರು ಪರವಾಗಿಲ್ಲ. ಪ್ರಶ್ನೆ ಏನೆಂದರೆ, ನಿಮಗೆ ಔಷಧವನ್ನು ಏಕೆ ಹೊರತರಲು ಸಾಧ್ಯವಾಗಲಿಲ್ಲ? ವೈಜ್ಞಾನಿಕ ಸಂಶೋಧನೆ ಮಾಡುವುದು ನಿಮ್ಮ ಕೆಲಸ. ಡಬ್ಲ್ಯೂಎಚ್‌ಒ ಇದಕ್ಕಾಗಿ ಕೋಟಿಗಟ್ಟಲೆ ಖರ್ಚು ಮಾಡಿದೆ, ಆದರೆ ಔಷಧ ಸೂಕ್ತ ಪ್ರಮಾಣದಲ್ಲಿ ಸಿಗುತ್ತಿಲ್ಲ ಎಂದು ಹೇಳಿದ್ದಾರೆ.