ತೇಜಪುರ(ಅಸ್ಸೋಂ): ಪರೀಕ್ಷೆ ಬರೆಯಲು ಶಾರ್ಟ್ಸ್ (ಚಡ್ಡಿ) ಧರಿಸಿ ಬಂದಿದ್ದ ಯುವತಿಗೆ ಸಂಕಷ್ಟ ಎದುರಾಗಿದೆ. ಅಸ್ಸೋಂ ಕೃಷಿ ವಿಶ್ವವಿದ್ಯಾಲಯಕ್ಕೆ ಪ್ರವೇಶಕ್ಕಾಗಿ ಪ್ರವೇಶ ಪರೀಕ್ಷೆಗೆ ಹಾಜರಾಗಿದ್ದ ಯುವತಿಗೆ ಅಲ್ಲಿನ ಅಧಿಕಾರಿಗಳು ಪರೀಕ್ಷೆಯ ಹಾಲ್ ಹೊರಗೆ ಕಾಯುವಂತೆ ಮಾಡಿದ್ದಾರೆ.
ಉತ್ತರ ಅಸ್ಸೋಂ ತೇಜ್ ಪುರ್ ಪಟ್ಟಣದಲ್ಲಿ ಘಟನೆ ನಡೆದಿದ್ದು, ಆಕೆಯ ಬಳಿ ಎಲ್ಲ ದಾಖಲೆಗಳಿದ್ದರೂ, ಶಾರ್ಟ್ಸ್ ಧರಿಸಿದ್ದ ಕಾರಣದಿಂದ ಆಕೆಗೆ ಪರೀಕ್ಷೆಯ ಕೊಠಡಿಯೊಳಗೆ ಆಕೆಗೆ ಅವಕಾಶ ನೀಡಿರಲಿಲ್ಲ. ಈ ರೀತಿಯ ಬಟ್ಟೆಗಳನ್ನು ಧರಿಸಿ, ಬರುವವರಿಗೆ ಪರೀಕ್ಷೆಗೆ ಅನುಮತಿ ನೀಡಲಾಗುವುದಿಲ್ಲ ಎಂದು ಅಧಿಕಾರಿಗಳು ಹೇಳಿದ್ದಾರೆ.
ಪ್ರವೇಶ ಪತ್ರದಲ್ಲಿ ಈ ಬಗ್ಗೆ ಉಲ್ಲೇಖವಿಲ್ಲ. ನಾನು ಹಾಫ್ ಪ್ಯಾಂಟ್ ಧರಿಸಿದ್ದೇನೆ ಎಂದು ಯುವತಿ ಹೇಳಿದ್ದು, ಈ ರೀತಿಯ ಬಟ್ಟೆಗಳನ್ನು ಧರಿಸಬಾರದೆಂಬುದು ಸಾಮಾನ್ಯ ಜ್ಞಾನ ಎಂದು ಅಧಿಕಾರಿಗಳು ಯುವತಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದು, ಪ್ಯಾಂಟ್ ಧರಿಸಿ, ಪರೀಕ್ಷೆಗೆ ಹಾಜರಾಗಲು ಸೂಚನೆ ನೀಡಿದ್ದಾರೆ.
ಕೊನೆಗೆ ತುಂಬಾ ಸಮಯದವರೆಗೆ ಕಾದಿದ್ದ ಯುವತಿ, ತನ್ನ ತಂದೆಯಿಂದ ಬಟ್ಟೆಯೊಂದನ್ನು ತರಿಸಿ, ಅದನ್ನು ಹಾಕಿಕೊಂಡು ಪರೀಕ್ಷೆ ಬರೆದಿದ್ದಾಳೆ. ಸಾಮಾಜಿಕ ಜಾಲತಾಣಗಳಲ್ಲಿ ಈ ಘಟನೆ ಪರ ವಿರೋಧಗಳಿಗೂ ಕಾರಣವಾಗಿದೆ.
ಇದನ್ನೂ ಓದಿ: ತಿರುವಿನಲ್ಲಿ ಅಪಾಯಕಾರಿ ಓವರ್‌ಟೇಕ್: ಬಸ್‌ನಡಿ ಬಿದ್ದೆದ್ದು, ಬದುಕಿಬಂದ ಬೈಕ್ ಸವಾರ! ವಿಡಿಯೋ