ನವದೆಹಲಿ : ರಾಜಸ್ಥಾನ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ವಿರುದ್ಧ ಕಾಂಗ್ರೆಸ್ ಪಕ್ಷದ ಮುಖಂಡ ಸಚಿನ್ ಪೈಲಟ್ ತೀವ್ರ ವಾಗ್ದಾಳಿ ನಡೆಸಿದ್ದಾರೆ. 2020ರಲ್ಲಿ ತಮ್ಮ ಸರ್ಕಾರ ಪದಚ್ಯುತಿಯಾಗುವುದರಿಂದ ರಕ್ಷಿಸುವಲ್ಲಿ ಭಾರತೀಯ ಜನತಾ ಪಕ್ಷದ ನಾಯಕಿ ವಸುಂಧರಾ ರಾಜೇ ಪ್ರಮುಖ ಪಾತ್ರ ವಹಿಸಿದ್ದರು ಎಂದು ಸಿಎಂ ಅಶೋಕ್ ಗೆಹ್ಲೋಟ್ ಪ್ರತಿಪಾದಿಸಿದ ನಂತರ ಬಂದಿರುವ ಸಚಿನ್ ಪೈಲಟ್ ಹೇಳಿಕೆ ಬಹಳ ಮಹತ್ವ ಪಡೆದುಕೊಂಡಿದೆ. ಪೈಲಟ್ ಹಾಗೂ ಅವರಿಗೆ ನಿಷ್ಠರಾಗಿರುವ ಕೆಲ ಶಾಸಕರು ಸರ್ಕಾರದ ವಿರುದ್ಧ ಬಂಡಾಯವೆದ್ದಾಗ ಇನ್ನೇನು ಸರ್ಕಾರ ಬಿದ್ದೇ ಹೋಯಿತು ಎನ್ನು ಪರಿಸ್ಥಿತಿ ನಿರ್ಮಾಣವಾದ ಸಂದರ್ಭದ ಬಗ್ಗೆ ಸಿಎಂ ಗೆಹ್ಲೋಟ್ ಈಗ ಮಾತನಾಡಿದ್ದಾರೆ. ಅಶೋಕ್ ಗೆಹ್ಲೋಟ್ ಅವರ ನಾಯಕಿ ಸೋನಿಯಾ ಗಾಂಧಿಯಲ್ಲ, ವಸುಂಧರಾ ರಾಜೇ ಎಂಬುದು ಅವರ ಭಾಷಣದಿಂದ ತಿಳಿಯುತ್ತಿದೆ ಎಂದು ಪೈಲಟ್ ಆರೋಪಿಸಿದ್ದಾರೆ.
"ಬಿಜೆಪಿ ತನ್ನ ಸರ್ಕಾರವನ್ನು ಉರುಳಿಸಲು ಪ್ರಯತ್ನಿಸಿತ್ತು ಎಂದು ಅವರು (ಗೆಹ್ಲೋಟ್) ಆರೋಪಿಸಿದ್ದಾರೆ ... ನಂತರ ಅವರು ಬಿಜೆಪಿ ನಾಯಕರೊಬ್ಬರು ತಮ್ಮ ಸರ್ಕಾರವನ್ನು ಉಳಿಸಲು ಸಹಾಯ ಮಾಡಿದರು ಎಂದು ಹೇಳುತ್ತಾರೆ. ಇದರಲ್ಲಿ ಯಾವುದು ಸತ್ಯ ಎಂಬುದನ್ನು ಅವರು ವಿವರಿಸಬೇಕು" ಎಂದು ಪೈಲಟ್ ಸುದ್ದಿಗಾರರೊಂದಿಗೆ ಮಾತನಾಡುತ್ತ ಆಗ್ರಹಿಸಿದರು. "ಕೆಲವರು ಕಾಂಗ್ರೆಸ್ ಅನ್ನು ದುರ್ಬಲಗೊಳಿಸಲು ಬಯಸುತ್ತಿದ್ದಾರೆ ... ನಾವು ಅವರನ್ನು ಯಶಸ್ವಿಯಾಗಲು ಬಿಡುವುದಿಲ್ಲ. ಗೆಹ್ಲೋಟ್ ಅವರ ಭಾಷಣವನ್ನು ಕೇಳಿದ ನಂತರ, ನಾಲ್ಕೂವರೆ ವರ್ಷಗಳಲ್ಲಿ ನಾವು ಏಕೆ ಭ್ರಷ್ಟಾಚಾರ ಪ್ರಕರಣಗಳಲ್ಲಿ ಕ್ರಮ ಕೈಗೊಳ್ಳಲು ಸಾಧ್ಯವಾಗಲಿಲ್ಲ ಎಂದು ನನಗೆ ಅರ್ಥವಾಗುತ್ತಿದೆ. ಯಾವುದೇ ನಾಯಕ ಜನರಿಗಿಂತ ಮುಖ್ಯವಲ್ಲ" ಎಂದು ಪೈಲಟ್ ಘೋಷಿಸಿದರು. ಪೈಲಟ್ ಅವರ ಕಟುವಾದ ಮಾತುಗಳು ಗೆಹ್ಲೋಟ್‌ನೊಂದಿಗಿನ ಅವರ ಸಂಘರ್ಷ ಉಲ್ಬಣವಾಗಿದ್ದನ್ನು ಸೂಚಿಸುತ್ತವೆ.
2023 ರಲ್ಲಿ ನಡೆಯಲಿರುವ ಮೊದಲ ಪ್ರಮುಖ ವಿಧಾನಸಭಾ ಚುನಾವಣೆಯ ಪೈಕಿ ಇನ್ನೇನು ಒಂದು ದಿನದಲ್ಲಿ ಕರ್ನಾಟಕ ಚುನಾವಣೆ ನಡೆಯಲಿದೆ. ಕರ್ನಾಟಕದಲ್ಲಿ ಕಾಂಗ್ರೆಸ್ ಬಿಜೆಪಿಯನ್ನು ಸೋಲಿಸುವ ಉತ್ಸಾಹದಲ್ಲಿರುವಾಗ ಕಾಂಗ್ರೆಸ್ ನಾಯಕನಿಂದಲೇ ಕಾಂಗ್ರೆಸ್ ಸರ್ಕಾದ ಸಿಎಂ ವಿರುದ್ಧ ವಾಗ್ದಾಳಿ ನಡೆದಿರುವುದು ಗಮನಾರ್ಹವಾಗಿದೆ. ರಾಜೇ ಮತ್ತು ಇತರ ಇಬ್ಬರು ಬಿಜೆಪಿ ನಾಯಕರಾದ ಶೋಭಾ ರಾಣಿ ಮತ್ತು ಕೈಲಾಶ್ ಮೇಘವಾಲ್ ಕಾಂಗ್ರೆಸ್‌ನ ಒಳ ಜಗಳದ ಲಾಭ ಪಡೆಯಲು ನಿರಾಕರಿಸುವ ಮೂಲಕ ನಮ್ಮ ಸರ್ಕಾರವನ್ನು 'ಉಳಿಸಿದ್ದರು' ಎಂದು ಸಿಎಂ ಅಶೋಕ್ ಗೆಹ್ಲೋಟ್ ಭಾನುವಾರ ರಾಜಸ್ಥಾನದ ಧೋಲ್‌ಪುರದಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಮಾತನಾಡುತ್ತ ಹೇಳಿದ್ದರು.
ಹಣದ ಆಧಾರದಲ್ಲಿ ಚುನಾಯಿತ ಸರ್ಕಾರವನ್ನು ಉರುಳಿಸುವುದು ನಮ್ಮ ಸಂಪ್ರದಾಯವಲ್ಲ ಎಂದು ವಸುಂಧರಾ ರಾಜೇ ಸಿಂಧಿಯಾ ಹೇಳಿದ್ದರು. ನಮ್ಮ ಸರ್ಕಾರವನ್ನು ಉರುಳಿಸಲು ಬಯಸಿದವರಿಗೆ ಅವರು ಯಾವುದೇ ಬೆಂಬಲ ನೀಡಿರಲಿಲ್ಲ. ಹೀಗಾಗಿ ನಮ್ಮ ಸರ್ಕಾರ ಉಳಿದುಕೊಂಡಿತು ಎಂದು ಗೆಹ್ಲೋಟ್ ಹೇಳಿದ್ದರು. ಗೆಹ್ಲೋಟ್ ಮತ್ತು ಪೈಲಟ್ ಕಳೆದ ಕೆಲವು ವರ್ಷಗಳಿಂದ ರಾಜಕೀಯ ಭಿನ್ನಾಭಿಪ್ರಾಯ ಹೊಂದಿದ್ದಾರೆ. ಗೆಹ್ಲೋಟ್ ಅವರನ್ನು ಕೆಳಗಿಳಿಸಿ ತಾವು ಸಿಎಂ ಆಗುವ ಬಯಕೆಯನ್ನು ಸಚಿನ್ ಪೈಲಟ್ ಹೊಂದಿದ್ದಾರೆ. ಮೂರು ವರ್ಷಗಳ ಹಿಂದೆ ಸಚಿನ್ ಪೈಲಟ್ ಮತ್ತು 18 ಶಾಸಕರು ನೆರೆಯ ಹರಿಯಾಣಕ್ಕೆ ತೆರಳಿ ಬಂಡಾಯದ ಕಹಳೆ ಮೊಳಗಿಸಿದ್ದರು. ಹರಿಯಾಣದಲ್ಲಿ ಬಿಜೆಪಿ ಸರ್ಕಾರವಿದ್ದು, ರಾಜಸ್ಥಾನದ ಬಂಡಾಯ ಶಾಸಕರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಗೆಹ್ಲೋಟ್ ಸರ್ಕಾರವನ್ನು ಉರುಳಿಸಲು ಬಿಜೆಪಿ ಸಂಚು ರೂಪಿಸಿತ್ತು ಎಂದು ಆರೋಪಿಸಲಾಗಿದೆ.
ಇದನ್ನೂ ಓದಿ : ಮುಸ್ಲಿಂ ಕೋಟಾ ಬಗ್ಗೆ ರಾಜಕೀಯ ಹೇಳಿಕೆ ನೀಡದಂತೆ ಸುಪ್ರೀಂ ಕೋರ್ಟ್ ಆದೇಶ