ಮುಂಬೈ: ಬಾಲಿವುಡ್ ಸೂಪರ್ ಸ್ಟಾರ್ ಶಾರೂಕ್ ಖಾನ್ ಪುತ್ರ ಆರ್ಯನ್ ಖಾನ್ ಸಲ್ಲಿಸಿದ್ದ ಜಾಮೀನು ಅರ್ಜಿ ವಿಚಾರಣೆ ನಡೆಸಿದ ನ್ಯಾಯಾಲಯ ತೀರ್ಪಅನ್ನು ಅ. 20ಕ್ಕೆ ಮುಂದೂಡಿ ಆದೇಶ ನೀಡಿದೆ. ಇದರಿಂದ ಇನ್ನೂ ಆರು ದಿನಗಳ ಕಾಲ ಆರ್ಯನ್ ಜೈಲಿನಲ್ಲೇ ಇರಬೇಕಾದ ಪರಿಸ್ಥಿತಿ ಉಂಟಾಗಿದೆ.
ಈ ಬಗ್ಗೆ ಇಂದು (ಗುರುವಾರ) ವಿಚಾರಣೆ ನಡೆಸಿದ ಇಲ್ಲಿನ ಎನ್ಡಿಪಿಎಸ್ ನ್ಯಾಯಾಲಯ ಜಾಮೀನು ನೀಡಿದರೆ ಪ್ರಕರಣದ ಮೇಲೆ ಪರಿಣಾಮ ಬೀರುವ ಸಾಧ್ಯತೆ ಇದೆ ಎಂದು ಅಭಿಪ್ರಾಯಪಟ್ಟಿದೆ. ಹಾಗಾಗಿ ಪ್ರಕರಣ ಜಾಮೀನು ಅರ್ಜಿಯ ವಿಚಾರಣೆಯನ್ನು ಮುಂದೂಡಿ ಆದೇಶ ಕೊಟ್ಟಿದೆ. ಇನ್ನು ಸಹಜವಾಗಿ ಜಾಮೀನು ಸಿಗಬಹುದು ಎಂಬ ಮಹಾದಾಸೆಯಲ್ಲಿದ್ದ ಆರ್ಯನ್ ಖಾನ್ಗೆ ಮತ್ತೆ ಹಿನ್ನೆಡೆಯಾಗಿದೆ. ಕಾರಣ ನಾಳೆಯಿಂದ 19ರ ವರೆಗೆ ಮುಂಬೈ ಕೋರ್ಟ್ಗಳಿಗೆ ರಜೆ ಇದೆ. ಹಾಗಾಗಿ ಮುಂದಿನ ಆದೇಶದವರೆಗೆ ಆರ್ಯನ್ ಜೈಲಿನಲ್ಲೆ ಕಾಲ ಕಳೆಯಬೇಕಾಗಿದೆ.
ಮುಂಬೈ ಕ್ರೂಸ್ ಹಡಗು ಮೇಲೆ ರೇವ್ ಪಾರ್ಟಿ ನಡೆಸುತ್ತಿದ್ದ ವೇಳೆ ಮಾದಕ ವಸ್ತುವಿನೊಂದಿಗೆ ಸಿಕ್ಕಿಬಿದ್ದ ಹಿನ್ನೆಲೆ ಆರ್ಯನ್ ಖಾನ್ ಸೇರಿದಂತೆ ಇತರರನ್ನು ಕಳೆದ ಅ. 2ರಂದು ಎನ್ಸಿಬಿ ಬಂಧಿಸಿತ್ತು. ಮುಂಬೈಯ ಎನ್ಡಿಪಿಎಸ್ ಕೋರ್ಟ್ ಆರ್ಯನ್ ಖಾನ್, ಅರ್ಬಾಸ್ ಮರ್ಚೆಂಟ್ ಮತ್ತು ಮುನ್ಮುನ್ ಧಮೆಚ್ ಅವರ ಜಾಮೀನು ಅರ್ಜಿಯನ್ನು ಆಲಿಸುತ್ತಿದ್ದು ಪ್ರಕರಣದಲ್ಲಿ ಇದುವರೆಗೆ ಒಟ್ಟು 20 ಮಂದಿಯನ್ನು ಎನ್ಸಿಬಿ ಅಧಿಕಾರಿಗಳು ಬಂಧಿಸಿದ್ದಾರೆ. ಅಕ್ಟೋಬರ್ 20 ರಂದು ಈ ಬಗ್ಗೆ ತೀರ್ಪು ಹೊರಬೀಳುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ.