ಮುಂಬೈ: ಐಷಾರಾಮಿ ಹಡಗಿನಲ್ಲಿ ಡ್ರಗ್ಸ್ ಪಾರ್ಟಿ ಮಾಡಿ ಮಾದಕ ವಸ್ತು ನಿಗ್ರಹ ಸಂಸ್ಥೆ (ಎನ್‍ಸಿಬಿ) ಬಲೆಗೆ ಬಿದ್ದಿರುವ ಬಾಲಿವುಡ್ ನಟ ಶಾರೂಕ್ ಖಾನ್ ಪುತ್ರ ಆರ್ಯನ್ ಖಾನ್ ಜಾಮೀನು ಅರ್ಜಿ ಕುರಿತು ಇಂದು ಮುಂಬೈನ ವಿಶೇಷ ಎನ್ಡಿಪಿಎಸ್ ನ್ಯಾಯಾಲಯದಿಂದ ಮಹತ್ವದ ಆದೇಶ ಹೊರಬೀಳಲಿದೆ.
ಅಕ್ಟೋಬರ್ 14 ರಂದು ಅರ್ಜಿ ವಿಚಾರಣೆ ನಡೆಸಿದ ನ್ಯಾಯಾಧೀಶ ವಿ.ವಿ.ಪಾಟೀಲ್, ಆರ್ಯನ್ ಖಾನ್ ಜಾಮೀನು ಅರ್ಜಿ ಆದೇಶವನ್ನು ಕಾಯ್ದಿರಿಸಿ ಅಕ್ಟೋಬರ್ 20ಕ್ಕೆ ವಿಚಾರಣೆಯನ್ನು ಮುಂದೂಡಿದ್ದರು. ಹಾಗಾಗಿ ಇಂದು ಆರ್ಯನ್ ಖಾನ್‍ಗೆ ಜಾಮೀನು ಸಿಗಬಹುದೇ ಅಥವಾ ಇನ್ನಷ್ಟು ದಿನ ಜೈಲುವಾಸ ಮುಂದುವರಿಯುವುದೇ ಎಂಬುದು ತಿಳಿಯಲಿದೆ.
ಅಕ್ಟೋಬರ್ 3 ರಂದು ಮುಂಬೈನ ಐಷಾರಾಮಿ ಕ್ರೂಸ್ ಹಡಗಿನಲ್ಲಿ ರೇವ್ ಪಾರ್ಟಿ ಮಾಡುತ್ತಿದ್ದ ವೇಳೆ ಎನ್ಸಿಬಿ ಅಧಿಕಾರಿಗಳು ದಾಳಿ ನಡೆಸಿ ಆರ್ಯನ್ ಖಾನ್ (23)ನನ್ನು ಬಂಧಿಸಿತ್ತು. ಆರ್ಯನ್ ಜೊತೆಗೆ ಸ್ನೇಹಿತ ಅರ್ಬಾಜ್ ಮರ್ಚೆಂಟ್, ಮುನ್ಮುನ್ ಧಮೇಚ, ನೂಪುರ್ ಸಾರಿಕಾ, ಇಸ್ಮಿತ್ ಸಿಂಗ್, ಮೋಹಕ್ ಜೈಸ್ವಾಲ್, ವಿಕ್ರಾಂತ್ ಚೋಕರ್ ಹಾಗು ಗೋಮಿತ್ ಚೋಪ್ರಾ ಸೇರಿ ಹಲವರನ್ನು ಬಂಧಿಸಲಾಗಿತ್ತು. ಪ್ರಸ್ತುತ ಆರ್ಯನ್ ಖಾನ್ ಮುಂಬೈನ ಆರ್ಥರ್ ರೋಡ್ ಜೈಲಿನಲ್ಲಿದ್ದಾರೆ.
ಆರ್ಯನ್ ಖಾನ್ ಪರ ವಕೀಲರ ವಾದವೇನು?
ಆರ್ಯನ್ ಖಾನ್ ನಿರಪರಾಧಿ. ಆತ ಯಾವುದೇ ಅಪರಾಧ ಮಾಡಿಲ್ಲ. ಎನ್‍ಸಿಬಿ ದಾಳಿ ವೇಳೆ ಆರ್ಯನ್ ಜೊತೆ ಮಾದಕ ವಸ್ತು ಪತ್ತೆಯಾಗಿಲ್ಲ. ದಾಳಿ ವೇಳೆ ಈತ ಡ್ರಗ್ಸ್ ಸೇವನೆ ಮಾಡಿರಲಿಲ್ಲ. ಅವರ ಬಳಿ ಹಣವೂ ಇರಲಿಲ್ಲ. ಹೀಗಾಗಿ ಡ್ರಗ್ ಸೇವನೆ, ಮಾರಾಟ, ಖರೀದಿ ಆರೋಪಗಳೆಲ್ಲವೂ ಸುಳ್ಳು. ಆರ್ಯನ್ ಖಾನ್ ಅತಿಥಿಯಾಗಿ ಮಾತ್ರ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು ಎಂದು ವಾದಿಸಿದ್ದಾರೆ.
ಎನ್‌ಸಿಬಿ ಆರೋಪವೇನು?
ಆರ್ಯನ್ ಖಾನ್ ಜಾಮೀನು ಅರ್ಜಿಗೆ ಎನ್‌ಸಿಬಿ ಆಕ್ಷೇಪ ವ್ಯಕ್ತಪಡಿಸಿದೆ. ಆತ ಡ್ರಗ್ಸ್ ಸೇವಿಸಿದ್ದಾನೆ ಮತ್ತು ಆತನ ವಾಟ್ಆ್ಯಪ್ ಚಾಟ್‌ಗಳನ್ನು ಗಮನಿಸಿದಾಗ ಅಂತಾರಾಷ್ಟ್ರೀಯ ಡ್ರಗ್ಸ್ ಕಳ್ಳಸಾಗಣೆಯಲ್ಲಿ ಆರ್ಯನ್ ಪಾತ್ರ ಕೂಡ ಇದೆ. ಹಾಗಾಗಿ ಜಾಮೀನು ನೀಡಬಾರದು ಎಂದು ನ್ಯಾಯಾಲಯಕ್ಕೆ ಮನವಿ ಮಾಡಿದೆ.