ನವದೆಹಲಿ : ಕೇಂದ್ರದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದಲ್ಲಿ ಜಮ್ಮು ಮತ್ತು ಕಾಶ್ಮೀರದಲ್ಲಿ ಆರ್ಟಿಕಲ್ 370 ರದ್ದತಿಯ ನಿರ್ಣಯವನ್ನು ಮರುಪರಿಶೀಲನೆ ಮಾಡುವುದಾಗಿ ಕೈ ಮುಖಂಡ ದಿಗ್ವಿಜಯ ಸಿಂಗ್ ಅವರ ಹೇಳಿಕೆಗೆ ಕಾಂಗ್ರೆಸ್ ಸ್ಪಷ್ಟನೆ ನೀಡಬೇಕೆಂದು ಕೇಂದ್ರ ಸಚಿವ ರವಿಶಂಕರ ಪ್ರಸಾದ ಆಗ್ರಹಿಸಿದ್ದಾರೆ. ಕಾಂಗ್ರೆಸ್ನ ಮೌನವಾಗಿರುವ ಅವಧಿ ಮುಗಿದು ಹೋಗಿದೆ ಎಂದು ಅವರು ಹೇಳಿದ್ದಾರೆ.
ತಮ್ಮ ಪಕ್ಷ ಅಧಿಕಾರಕ್ಕೆ ಬಂದಲ್ಲಿ ಜಮ್ಮು ಮತ್ತು ಕಾಶ್ಮೀರದಲ್ಲಿ 370ನೇ ವಿಧಿ ರದ್ದುಗೊಳಿಸಿದ ನಿರ್ಣಯವನ್ನು ಮರುಪರಿಶೀಲನೆ ಮಾಡಲಾಗುವುದು ಹಾಗೂ ಜಮ್ಮು ಮತ್ತು ಕಾಶ್ಮೀರಕ್ಕೆ ಮತ್ತೆ ರಾಜ್ಯದ ಸ್ಥಾನಮಾನ ನೀಡಲಾಗುವುದು ಎಂದು ದಿಗ್ವಿಜಯ ಸಿಂಗ್ ಪಾಕಿಸ್ತಾನ ಪತ್ರಕರ್ತನೊಬ್ಬನೊಂದಿಗೆ ಚಾಟ್ ಮಾಡಿರುವ ಆಡಿಯೋ ಬಹಿರಂಗಗೊಂಡ ನಂತರ ರಾಜಕೀಯ ವಲಯದಲ್ಲಿ ಈ ವಿಷಯ ಸಾಕಷ್ಟು ಚರ್ಚೆಗಳನ್ನು ಹುಟ್ಟು ಹಾಕಿದೆ.
"ಒಂದು ದಿನ ಪೂರ್ಣಗೊಂಡರೂ 370ನೇ ವಿಧಿಯ ಬಗ್ಗೆ ಏನೂ ಮಾತನಾಡದ ಕಾಂಗ್ರೆಸ್ ವಿಚಿತ್ರ ಮೌನವನ್ನು ಪಾಲಿಸುತ್ತಿದೆ. ದಿಗ್ವಿಜಯ ಸಿಂಗ್ ಹೇಳಿದಂತೆ 370ನೇ ವಿಧಿಯನ್ನು ಮರುಸ್ಥಾಪಿಸಲು ಕಾಂಗ್ರೆಸ್ ಬಯಸುತ್ತದೆಯೇ? ಮೌನವಾಗಿರುವ ಸಮಯ ಆಗಿಹೋಗಿದೆ. ನಿಮ್ಮ ನಿಲುವನ್ನು ತಕ್ಷಣ ಬಹಿರಂಗ ಪಡಿಸಿ " ಎಂದು ರವಿಶಂಕರ ಪ್ರಸಾದ ಟ್ವಿಟರ್ನಲ್ಲಿ ಬರೆದಿದ್ದಾರೆ.