ನವದೆಹಲಿ: ರಾಷ್ಟ್ರ ರಾಜಧಾನಿಯ ಜಹಾಂಗೀರ್ಪುರಿ ಪ್ರದೇಶದಲ್ಲಿ ಇಬ್ಬರು ಶಂಕಿತ ಉಗ್ರರನ್ನು ಬಂಧಿಸಲಾಗಿದೆ. ಮುಂಬರುವ ಗಣರಾಜ್ಯೋತ್ಸವದಂದು ನಡೆಯಬಹುದಾಗಿದ್ದ ಭಯೋತ್ಪಾದಕ ಕೃತ್ಯವನ್ನು ಈ ಮೂಲಕ ವಿಫಲಗೊಳಿಸಿರುವುದಾಗಿ ದೆಹಲಿ ಪೊಲೀಸರ ವಿಶೇಷ ಸೆಲ್ ಹೇಳಿಕೊಂಡಿದೆ. ಈ ಇಬ್ಬರು ಬಂಧಿತ ಶಂಕಿತ ಭಯೋತ್ಪಾದಕರ ಪೈಕಿ ಓರ್ವ ಅರ್ಶದೀಪ್ ಡಲ್ಲಾ ಕೆನಡಾದಲ್ಲಿ ನಡೆಸುತ್ತಿರುವ ಖಲಿಸ್ತಾನಿ ಸಂಘಟನೆಗೆ ನಿಷ್ಠನಾಗಿದ್ದಾನೆ ಎಂದು ಮೂಲಗಳು ತಿಳಿಸಿವೆ. ಮತ್ತೋರ್ವ ಶಂಕಿತ ಉಗ್ರವಾದಿ ಹರ್ಕತ್ ಉಲ್ ಅನ್ಸಾರ್ ಎಂಬ ಭಯೋತ್ಪಾದಕ ಸಂಘಟನೆಯೊಂದಿಗೆ ಸಂಬಂಧ ಹೊಂದಿದ್ದಾನೆ ಎನ್ನಲಾಗಿದೆ. ಇವರನ್ನು ಬಂಧಿಸುವ ಮೂಲಕ ಗಣರಾಜ್ಯೋತ್ಸವ ಸಮಾರಂಭದಲ್ಲಿ ಭಯೋತ್ಪಾದಕರು ಯೋಜಿಸಿದ್ದ ದೊಡ್ಡ ಭಯೋತ್ಪಾದಕ ದಾಳಿಯನ್ನು ವಿಫಲಗೊಳಿಸಿದ್ದೇವೆ ಎಂದು ದೆಹಲಿ ಪೊಲೀಸರು ಹೇಳಿದ್ದಾರೆ.
ಇಬ್ಬರು ಶಂಕಿತ ಉಗ್ರರನ್ನು ಜಗಜೀತ್ ಸಿಂಗ್ ಮತ್ತು ನೌಶಾದ್ ಎಂದು ಗುರುತಿಸಲಾಗಿದೆ. ಜಗಜೀತ್ ಸಿಂಗ್ ಮೂಲತಃ ಉತ್ತರಾಖಂಡದ ಉಧಮ್ ಸಿಂಗ್ ನಗರದವನಾಗಿದ್ದು, ನೌಶಾದ್ ದೆಹಲಿಯ ಜಹಾಂಗೀರ್ ಪುರಿ ಪ್ರದೇಶಕ್ಕೆ ಸೇರಿದವನಾಗಿದ್ದಾನೆ. ಇವರಿಬ್ಬರೂ ದೇಶವಿರೋಧಿ ಚಟುವಟಿಕೆಗಳಲ್ಲಿ ಭಾಗಿಯಾಗಿರುವುದು ಪೊಲೀಸರಿಗೆ ಕಂಡುಬಂದಿದೆ. ಇವರ ಬಳಿಯಿಂದ ಮೂರು ಪಿಸ್ತೂಲ್‌ಗಳು ಮತ್ತು ಇಪ್ಪತ್ತೆರಡು ಜೀವಂತ ಕಾಟ್ರಿಡ್ಜ್‌ಗಳನ್ನು ಸಹ ವಶಪಡಿಸಿಕೊಳ್ಳಲಾಗಿದೆ. ಅಲ್ಲದೆ, ವಿಧ್ವಂಸಕ ಚಟುವಟಿಕೆಗಳ ನೀಲನಕ್ಷೆಯನ್ನೂ ಪೊಲೀಸರು ವಶಪಡಿಸಿಕೊಂಡಿದ್ದಾರೆ.
ಹರ್ಕತ್ ಉಲ್ ಅನ್ಸಾರ್ ಭಯೋತ್ಪಾದಕ ಸಂಘಟನೆಯೊಂದಿಗೆ ಸಂಬಂಧ ಹೊಂದಿದ್ದ ನೌಶಾದ್ ಎರಡು ಕೊಲೆ ಪ್ರಕರಣಗಳಲ್ಲಿ ಜೀವಾವಧಿ ಶಿಕ್ಷೆಗೆ ಗುರಿಯಾಗಿದ್ದ. ಮತ್ತೊಬ್ಬ ಬಂಧಿತ ವ್ಯಕ್ತಿ ಜಗಜೀತ್ ಖಲಿಸ್ತಾನಿ ಟೈಗರ್ ಫೋರ್ಸ್ (ಕೆಟಿಎಫ್) ನೊಂದಿಗೆ ಸಂಪರ್ಕ ಹೊಂದಿದ್ದಾನೆ. ಕೆನಡಾ ಮೂಲದ ಖಲಿಸ್ತಾನಿ ಭಯೋತ್ಪಾದಕ ಅರ್ಶದೀಪ್ ಡಲ್ಲಾ ಈ ಸಂಘಟನೆಯ ನೇತೃತ್ವ ವಹಿಸಿದ್ದಾನೆ.
ಕೆನಡಾ ಮೂಲದ ಗ್ಯಾಂಗ್ಸ್ಟರ್ ಮತ್ತು ಖಲಿಸ್ತಾನ್ ಟೈಗರ್ ಫೋರ್ಸ್ (ಕೆಟಿಎಫ್) ಮುಖ್ಯಸ್ಥ ಅರ್ಶ್‌ದೀಪ್ ಸಿಂಗ್ ಗಿಲ್, ಅಲಿಯಾಸ್ ಅರ್ಶ್ ಡಲ್ಲಾ ಈತನನ್ನು ಕೇಂದ್ರ ಗೃಹ ಸಚಿವಾಲಯ ಸೋಮವಾರ ಭಯೋತ್ಪಾದಕ ಎಂದು ಘೋಷಿಸಿದೆ. ಕೊಲೆ, ಸುಲಿಗೆ ಮತ್ತು ಘೋರ ಅಪರಾಧ, ಭಯೋತ್ಪಾದಕ ಚಟುವಟಿಕೆಗಳ ಜೊತೆಗೆ ಗುರಿಪಡಿಸಿ ನಡೆಸಲಾದ ಹತ್ಯೆಗಳಲ್ಲಿ ಈತ ಭಾಗಿಯಾಗಿರುವುದು ಕಂಡು ಬಂದ ನಂತರ ಈತನನ್ನು ಭಯೋತ್ಪಾದಕ ಎಂದು ಘೋಷಿಸಲಾಗಿದೆ.
ಅಧಿಸೂಚನೆಯ ಪ್ರಕಾರ, ಪ್ರಸ್ತುತ ಕೆನಡಾದಲ್ಲಿ ನೆಲೆಸಿರುವ ಅರ್ಶದೀಪ್ ಕೆಟಿಎಫ್ನೊಂದಿಗೆ ಸಂಬಂಧ ಹೊಂದಿದ್ದಾನೆ. ರಾಷ್ಟ್ರೀಯ ತನಿಖಾ ಸಂಸ್ಥೆ ದಾಖಲಿಸಿರುವ ಮತ್ತು ತನಿಖೆ ನಡೆಸುತ್ತಿರುವ ಉದ್ದೇಶಿತ ಹತ್ಯೆ, ಭಯೋತ್ಪಾದಕ ನಿಧಿಗಾಗಿ ಹಣ ಸುಲಿಗೆ, ಕೊಲೆ ಯತ್ನ, ಕೋಮು ಸೌಹಾರ್ದತೆಗೆ ಭಂಗ ಉಂಟು ಮಾಡುವ ಯತ್ನ, ಪಂಜಾಬ್‌ನಲ್ಲಿ ಭಯೋತ್ಪಾದನೆ ಸೃಷ್ಟಿಸುವುದು ಸೇರಿದಂತೆ ವಿವಿಧ ಪ್ರಕರಣಗಳಲ್ಲಿ ಅರ್ಶದೀಪ್ ಆರೋಪಿಯಾಗಿದ್ದಾನೆ ಎಂದು ಅಧಿಸೂಚನೆಯಲ್ಲಿ ತಿಳಿಸಲಾಗಿದೆ.
ಅರ್ಶದೀಪ್ ಈತ ಯುಎಪಿಎ ಅಡಿಯಲ್ಲಿ ಘೋಷಿತನಾದ ಭಯೋತ್ಪಾದಕ ಹರ್ದೀಪ್ ಸಿಂಗ್ ನಿಜ್ಜರ್ಗೆ ತುಂಬಾ ಹತ್ತಿರವಾಗಿದ್ದಾನೆ ಮತ್ತು ಅವನ ಪರವಾಗಿ ಭಯೋತ್ಪಾದಕ ಘಟಕಗಳನ್ನು ನಡೆಸುತ್ತಿದ್ದಾನೆ. ಈತ ಭಯೋತ್ಪಾದನಾ ಚಟುವಟಿಕೆಗಳಲ್ಲದೆ ಕೊಲೆ, ಸುಲಿಗೆ ಮತ್ತು ಉದ್ದೇಶಿತ ಹತ್ಯೆಗಳಂಥ ಘೋರ ಅಪರಾಧಗಳಲ್ಲಿ ಭಾಗಿಯಾಗಿದ್ದಾನೆ ಮತ್ತು ಭಯೋತ್ಪಾದನೆಗೆ ಹಣಕಾಸು ನೆರವು, ಡ್ರಗ್ಸ್ ಅಥವಾ ಗಡಿಯಾಚೆ ಶಸ್ತ್ರಾಸ್ತ್ರಗಳ ಕಳ್ಳಸಾಗಣೆಯಲ್ಲಿ ತೊಡಗಿಸಿಕೊಂಡಿದ್ದಾನೆ ಎಂದು ಅದು ಹೇಳಿದೆ.
ಇದನ್ನೂ ಓದಿ: ಕೇಂದ್ರದಿಂದ ಮತ್ತೊಂದು ದಿಟ್ಟ ನಿರ್ಧಾರ.. ಪೀಪಲ್ಸ್ ಆ್ಯಂಟಿ ಫ್ಯಾಸಿಸ್ಟ್ ಫ್ರಂಟ್ ಸಂಘಟನೆ ನಿಷೇಧ