ನವದೆಹಲಿ: ಸೇನಾ ಮುಖ್ಯಸ್ಥ ಜನರಲ್ ಎಂ.ಎಂ. ನರವಾಣೆ ಮೂವರು ಸೇನಾ ಮುಖ್ಯಸ್ಥರನ್ನು ಒಳಗೊಂಡಿರುವ ಸಿಬ್ಬಂದಿ ಮುಖ್ಯಸ್ಥರ ಸಮಿತಿಯ (Chiefs of Staff Committee) ಅಧ್ಯಕ್ಷರಾಗಿ ಅಧಿಕಾರ ವಹಿಸಿಕೊಂಡಿದ್ದಾರೆ ಎಂದು ಉನ್ನತ ಮೂಲಗಳು ಮಾಹಿತಿ ನೀಡಿವೆ.
ಡಿಸೆಂಬರ್ 8ರಂದು ವಾಯುಪಡೆಯ ಹೆಲಿಕಾಪ್ಟರ್ ಅಪಘಾತದಲ್ಲಿ ರಕ್ಷಣಾ ಸಿಬ್ಬಂದಿಯ ಮುಖ್ಯಸ್ಥ ಜನರಲ್ ಬಿಪಿನ್ ರಾವತ್ ಅವರು ನಿಧನರಾದ ನಂತರ ಈ ಹುದ್ದೆಯು ತೆರವಾಗಿತ್ತು. ಮೂರು ಸೇನಾ ಮುಖ್ಯಸ್ಥರ ಪೈಕಿ ಸೇವಾವಧಿಯಲ್ಲಿ ಅತ್ಯಂತ ಹಿರಿಯರಾಗಿರುವ ಜನರಲ್ ನರವಾಣೆ ಅವರಿಗೆ ಈ ಸಮಿತಿಯ ಅಧ್ಯಕ್ಷರ ಜವಾಬ್ದಾರಿ ನೀಡಲಾಗಿದೆ.
ಐಎಎಫ್ ಚೀಫ್ ಏರ್ ಚೀಫ್ ಮಾರ್ಷಲ್ ವಿ ಆರ್ ಚೌಧರಿ ಮತ್ತು ನೌಕಾಪಡೆಯ ಮುಖ್ಯಸ್ಥ ಅಡ್ಮಿರಲ್ ಆರ್.ಹರಿ ಕುಮಾರ್ ಅವರು ಕ್ರಮವಾಗಿ ಸೆಪ್ಟೆಂಬರ್ 30 ಮತ್ತು ನವೆಂಬರ್ 30ರಂದು ಅಧಿಕಾರ ವಹಿಸಿಕೊಂಡಿದ್ದರು. ಇವರಗಿಂತ ಮೊದಲು ನರವಾಣೆ ಅಧಿಕಾರ ವಹಿಸಿಕೊಂಡಿದ್ದ ಕಾರಣದಿಂದ ಅವರಿಗೆ ಈ ಹೊಸ ಜವಾಬ್ದಾರಿ ನೀಡಲಾಗಿದೆ.
ಮಂಗಳವಾರ ಸಿಬ್ಬಂದಿ ಮುಖ್ಯಸ್ಥರ ಸಮಿತಿಯಿಂದ ರಕ್ಷಣಾ ಸಿಬ್ಬಂದಿ ಮುಖ್ಯಸ್ಥ ಜನರಲ್ ರಾವತ್, ಅವರ ಪತ್ನಿ ಮಧುಲಿಕಾ ಮತ್ತು 11 ಸಶಸ್ತ್ರ ಪಡೆಗಳ ಸಿಬ್ಬಂದಿಯ ಸಾವಿಗೆ ಸಂತಾಪ ಸೂಚಿಸಲಾಗಿದೆ. ಅಪಘಾತದಲ್ಲಿ ಬದುಕುಳಿದ ಏಕೈಕ ಗ್ರೂಪ್ ಕ್ಯಾಪ್ಟನ್ ವರುಣ್ ಸಿಂಗ್ ಅವರು ಬೆಂಗಳೂರಿನ ಮಿಲಿಟರಿ ಆಸ್ಪತ್ರೆಯಲ್ಲಿ ಬುಧವಾರ ನಿಧನರಾಗಿದ್ದಾರೆ.
ಇದನ್ನೂ ಓದಿ:1971ರ ಭಾರತ-ಪಾಕ್ ಯುದ್ಧ: ಭಾರತೀಯ ಸೇನೆಯ ಪರಾಕ್ರಮದ ಅನಾವರಣ