ನವದೆಹಲಿ: 10, 12 ನೇ ತರಗತಿ ವಿದ್ಯಾರ್ಥಿಗಳಿಗೆ ಹೊಸದಾಗಿ ಪರಿಚಯಿಸಲಾಗುರುವ 'ವರ್ಷಕ್ಕೆ ಎರಡು ಬಾರಿ ಪರೀಕ್ಷೆ'ಗೆ ನಿಯಮ ಕಡ್ಡಾಯವಲ್ಲ. ಅವರು 2 ಸಲ ಪರೀಕ್ಷೆ ಬರೆಯಲೇಬೇಕಿಲ್ಲ. ಬೇಕಾದಲ್ಲಿ ಅವರು ಎರಡರ ಪೈಕಿ ಒಂದು ಪರೀಕ್ಷೆಯಲ್ಲಿ ಗಳಿಸಿದ ಹೆಚ್ಚಿನ ಅಂಕಗಳನ್ನೇ ಅವರು ಉಳಿಸಿಕೊಳ್ಳಬಹುದು ಎಂದು ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಹೇಳಿದರು.
ಈ ನಿಯಮವು ಎಂಜಿನಿಯರಿಂಗ್ ಪ್ರವೇಶ ಪರೀಕ್ಷೆಯ ಜೆಇಇ ಇರುವಂತೆ ವರ್ಷಕ್ಕೆ ಎರಡು ಬಾರಿ ಎಕ್ಸಾಂ ತೆಗೆದುಕೊಳ್ಳುವ ಆಯ್ಕೆಯನ್ನು ಹೊಂದಿರುತ್ತಾರೆ. ಅವರು ಉತ್ತಮ ಅಂಕಗಳನ್ನು ಆಯ್ಕೆ ಮಾಡಬಹುದು. ಇದು ಸಂಪೂರ್ಣವಾಗಿ ಐಚ್ಛಿಕವಾಗಿರುತ್ತದೆಯೇ ಹೊರತು ಯಾವುದೇ ಒತ್ತಡ ಇರುವುದಿಲ್ಲ. ಇದು ವಿದ್ಯಾರ್ಥಿಗಳ ಮೇಲೆ ಒಂದು ಪರೀಕ್ಷೆಯ ಒತ್ತಡವನ್ನು ಕಡಿಮೆ ಮಾಡುವ ಸಲುವಾಗಿ ಪರಿಚಯಿಸಲಾಗಿದೆ ಎಂದು ಕೇಂದ್ರ ಶಿಕ್ಷಣ ಸಚಿವರು ತಿಳಿಸಿದರು.
ಎರಡು ಪರೀಕ್ಷೆ ಬೇಡವಾದಲ್ಲಿ ಒಂದೇ ಸಾಕು: ಮಾಧ್ಯಮಕ್ಕೆ ನೀಡಿದ ಸಂದರ್ಶನದಲ್ಲಿ ಈ ಬಗ್ಗೆ ಮಾಹಿತಿ ನೀಡಿರುವ ಅವರು, ಉತ್ತಮ ಶೈಕ್ಷಣಿಕ ಸಾಧನೆ ಮಾಡದ ಶಾಲೆಗಳನ್ನು ನಿರ್ಲಕ್ಷಿಸಲಾಗುವುದಿಲ್ಲ. ಅವುಗಳನ್ನು ಪರಾಮರ್ಶೆ ಮಾಡಿ, ಗಂಭೀರ ಚರ್ಚೆ ನಡೆಸುವ ಸಮಯ ಬಂದಿದೆ. ಯಾವುದೇ ವಿದ್ಯಾರ್ಥಿಯು ತಾನು ಬರೆದ ಮೊದಲ ಪರೀಕ್ಷೆಯಲ್ಲಿ ಉತ್ತಮ ಅಂಕ ಗಳಿಸಿದ್ದೇನೆ. ಮುಂದಿನ ಪರೀಕ್ಷೆಗೆ ಕೂರುವ ಅಗತ್ಯವಿಲ್ಲ ಎಂದಾದಲ್ಲಿ ಅವರು, ಪರೀಕ್ಷೆಯಿಂದ ಹೊರಗುಳಿಯಬಹುದು ಎಂದು ಅವರು ಮಾಹಿತಿ ನೀಡಿದರು.
ವರ್ಷಕ್ಕೆ ಎರಡು ಬಾರಿ ಮುಖ್ಯ ಪರೀಕ್ಷೆಗಳನ್ನು ನಡೆಸುವ ಯೋಜನೆಯ ಬಗ್ಗೆ ವಿದ್ಯಾರ್ಥಿಗಳಿಂದ ಸಕಾರಾತ್ಮಕ ಪ್ರತಿಕ್ರಿಯೆಯನ್ನು ಪಡೆದಿದ್ದೇವೆ. ಹೊಸ ಪಠ್ಯಕ್ರಮ ವಿಧಾನ (ಎನ್‌ಸಿಎಫ್) ಘೋಷಿಸಿದ ನಂತರ ಹಲವು ವಿದ್ಯಾರ್ಥಿಗಳನ್ನು ಭೇಟಿ ಮಾಡಲಾಗಿದೆ. ಅವರು ಇದನ್ನು ಶ್ಲಾಘಿಸಿದ್ದಾರೆ. 2024 ರಿಂದ ವರ್ಷಕ್ಕೆ ಎರಡು ಬಾರಿ ಪರೀಕ್ಷೆಗಳನ್ನು ನಡೆಸಲು ನಾವು ಪ್ರಯತ್ನಿಸುತ್ತಿದ್ದೇವೆ ಎಂದು ಅವರು ಹೇಳಿದರು.
ಈ ವರ್ಷ ರಾಜಸ್ಥಾನದ ಕೋಟಾದಲ್ಲಿ ವಿದ್ಯಾರ್ಥಿಗಳ ಆತ್ಮಹತ್ಯೆ ಕುರಿತ ಪ್ರಶ್ನೆಗೆ ಉತ್ತರಿಸಿದ ಸಚಿವರು, ಇದು ಅತ್ಯಂತ ಸೂಕ್ಷ್ಮ ವಿಷಯವಾಗಿದೆ. ಯಾವುದೇ ವಿದ್ಯಾರ್ಥಿ ಪ್ರಾಣ ಕಳೆದುಕೊಳ್ಳಬಾರದು. ವಿದ್ಯಾರ್ಥಿಗಳು ಒತ್ತಡ ಮುಕ್ತರಾಗಿ ಶಿಕ್ಷಣ ಕಲಿಯಬೇಕು. ಎಂಜಿನಿಯರಿಂಗ್‌ಗಾಗಿ ಜಂಟಿ ಪ್ರವೇಶ ಪರೀಕ್ಷೆ (ಜೆಇಇ) ಮತ್ತು ವೈದ್ಯಕೀಯ ಕಾಲೇಜುಗಳಿಗೆ ಪ್ರವೇಶಕ್ಕಾಗಿ ರಾಷ್ಟ್ರೀಯ ಅರ್ಹತೆ ಮತ್ತು ಪ್ರವೇಶ ಪರೀಕ್ಷೆ (ಎನ್‌ಇಇಟಿ) ಯಂತಹ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತಯಾರಾಗಲು ವಾರ್ಷಿಕವಾಗಿ 2 ಲಕ್ಷ ವಿದ್ಯಾರ್ಥಿಗಳು ಕೋಟಾಕ್ಕೆ ತೆರಳುತ್ತಾರೆ. ಅವರ ಮೇಲೆ ಹೆಚ್ಚಿನ ನಿಗಾ ವಹಿಸಬೇಕಿದೆ ಎಂದರು.
ಕಡಿಮೆ ಸಾಮರ್ಥ್ಯದ ಶಾಲೆಗಳು: ಶೈಕ್ಷಣಿಕವಾಗಿ ಕಡಿಮೆ ಸಾಧನೆ ಮಾಡುವ ಶಾಲೆಗಳ ಬಗ್ಗೆಯೂ ಗಂಭೀರ ಚರ್ಚೆ ನಡೆಸುವ ಕಾಲ ಬಂದಿದೆ. ಸಮಸ್ಯೆಯನ್ನು ನಿರ್ಲಕ್ಷಿಸುವಂತಿಲ್ಲ. ಕಳಪೆ ಶಿಕ್ಷಣ ಪಡೆಯುತ್ತಿರುವ ವಿದ್ಯಾರ್ಥಿಗಳ ಸಂಖ್ಯೆಯೂ ಕಡಿಮೆ ಇದೆ ಎಂದು ಶಿಕ್ಷಣ ಸಚಿವರು ತಿಳಿಸಿದರು.
ಶಿಕ್ಷಣ ಸಚಿವಾಲಯವು ಆಗಸ್ಟ್‌ನಲ್ಲಿ ಪ್ರಕಟಿಸಿದ ಹೊಸ ಪಠ್ಯಕ್ರಮದ (ಎನ್‌ಸಿಎಫ್) ಪ್ರಕಾರ, ವಿದ್ಯಾರ್ಥಿಗಳು ಉತ್ತಮ ಶೈಕ್ಷಣಿಕ ಪ್ರಗತಿ ಸಾಧಿಸಲು ಮತ್ತು ಉತ್ತಮ ಸ್ಕೋರ್ ಗಳಿಸಲು ವರ್ಷಕ್ಕೆ ಎರಡು ಬಾರಿ ಬೋರ್ಡ್ ಪರೀಕ್ಷೆಗಳನ್ನು ನಡೆಸುವ ಮಾದರಿಯನ್ನು ಪರಿಚಯಿಸಿತು.
ಇದನ್ನೂ ಓದಿ: ಎಸ್ಎಸ್ಎಲ್ಸಿ, ದ್ವಿತೀಯ ಪಿಯುಸಿಗೆ 3 ವಾರ್ಷಿಕ ಪರೀಕ್ಷೆ: ಮಾರ್ಗಸೂಚಿಗಳು ಹೀಗಿವೆ..