ಅಹಮದಾಬಾದ್: ಗುಜರಾತ್ ವಿಧಾನಸಭಾ ಚುನಾವಣೆ ಎಂದರೆ ಅದು ಸಾಮಾನ್ಯವಾಗಿ ಬಿಜೆಪಿ ಹಾಗೂ ಕಾಂಗ್ರೆಸ್ ಮಧ್ಯದ ತೀವ್ರ ಹೋರಾಟ. ದೀರ್ಘಾವಧಿಯಿಂದ ಗುಜರಾತ್ ರಾಜಕೀಯ ನಡೆದು ಬಂದಿದ್ದೇ ಹೀಗೆ. ಆದರೆ ಈಗ ಈ ದ್ವಿಮುಖ ಹೋರಾಟದ ಮಧ್ಯೆ ಆಮ್ ಆದ್ಮಿ ಪಾರ್ಟಿ ಕೂಡ ಧುಮುಕಿದ್ದು, ಗುಜರಾತ್ ರಾಜಕೀಯಕ್ಕೆ ಹೊಸ ಸ್ವರೂಪ ಬಂದಿದೆ. ಬಿಜೆಪಿ ಅಧಿಕಾರದಲ್ಲಿರುವ ಪಕ್ಷವಾದರೆ, ಕಾಂಗ್ರೆಸ್ ಇನ್ನೂ ತನ್ನ ಅಸ್ತಿತ್ವ ಉಳಿಸಿಕೊಂಡಿರುವ ಪಕ್ಷವಾಗಿದೆ. ಈ ಮಧ್ಯೆ ಎರಡೂ ಪಕ್ಷಗಳ ಮತದಾದರನ್ನು ಬುಟ್ಟಿಗೆ ಹಾಕಿಕೊಳ್ಳುವತ್ತ ಆಪ್ ಕಾರ್ಯತಂತ್ರ ಹೆಣೆಯುತ್ತಿದೆ.
182 ಸದಸ್ಯ ಬಲದ ರಾಜ್ಯ ವಿಧಾನಸಭೆಗೆ ಡಿಸೆಂಬರ್ 1 ಮತ್ತು 5 ರಂದು ಎರಡು ಹಂತಗಳಲ್ಲಿ ಚುನಾವಣೆ ನಡೆಯಲಿದೆ ಎಂದು ಚುನಾವಣಾ ಆಯೋಗ ಗುರುವಾರ ಘೋಷಿಸಿದೆ. ಇದಕ್ಕೂ ಮುನ್ನ ರಾಜ್ಯದ ಮೋರ್ಬಿ ಸೇತುವೆ ಕುಸಿತ ದುರಂತದಲ್ಲಿ 135 ಜನ ಪ್ರಾಣ ಕಳೆದುಕೊಂಡಿದ್ದಾರೆ. ರಾಜ್ಯದಲ್ಲಿ ಚುನಾವಣಾ ಪ್ರಚಾರ ತೀವ್ರಗೊಂಡಂತೆ ಮೋರ್ಬಿ ದುರಂತ ಪ್ರಕರಣ ಚುನಾವಣಾ ವಿಷಯವಾಗುವ ಸಾಧ್ಯತೆಗಳಿವೆ.
ಇನ್ನು ಅಭಿವೃದ್ಧಿ ಮತ್ತು ಉಚಿತ ಕೊಡುಗೆ ವಿಚಾರದಲ್ಲಿ ಆಪ್ ಮತ್ತು ಬಿಜೆಪಿ ಒಂದಕ್ಕೊಂದು ಸವಾಲೆಸೆಯುತ್ತಿವೆ. ಏನೇ ಆದರೂ ಆಡಳಿತಾರೂಢ ಬಿಜೆಪಿಯ ಪ್ರಮುಖ ಚುನಾವಣಾ ಅಸ್ತ್ರಗಳಾದ ಹಿಂದುತ್ವ, ಡಬಲ್ ಎಂಜಿನ್ ಸರ್ಕಾರ, ಅಭಿವೃದ್ಧಿ ಮತ್ತು ಮತ್ತೊಮ್ಮೆ ಅಧಿಕಾರ ಇವೆಲ್ಲವೂ ಈ ಬಾರಿಯ ಚುನಾವಣೆಯ ಪ್ರಮುಖ ವಿಚಾರಗಳಾಗಿ ಮುಂದುವರಿಯಲಿವೆ.
ಚುನಾವಣೆ ಈಗಷ್ಟೇ ಘೋಷಣೆಯಾಗಿದ್ದರೂ ತ್ರಿಕೋನ ಸ್ಪರ್ಧೆ ಏರ್ಪಡಲಿದೆ ಎಂಬ ಮಾತು ಕಳೆದ ಕೆಲವು ವಾರಗಳಿಂದ ನಿರಂತರವಾಗಿ ಕೇಳಿ ಬರುತ್ತಿದೆ. ಪ್ರಧಾನಿ ನರೇಂದ್ರ ಮೋದಿ ಮತ್ತು ಹಲವು ಕೇಂದ್ರ ಸಚಿವರು ರಾಜ್ಯಕ್ಕೆ ಆಗಾಗ ಭೇಟಿ ನೀಡುತ್ತಿದ್ದಾರೆ. ಪ್ರಧಾನಿ ಮೋದಿ ನವೆಂಬರ್ 1 ರಂದು ಮೊರ್ಬಿಯಲ್ಲಿನ ಪರಿಸ್ಥಿತಿ ಅವಲೋಕಿಸಿದ್ದರು. ಈ ಮಧ್ಯೆ ಆಪ್ ಮುಖ್ಯಸ್ಥ ಅರವಿಂದ್ ಕೇಜ್ರಿವಾಲ್ ಗಮನ ಸೆಳೆದಿದ್ದಾರೆ. ದಶಕಗಳಿಂದ ದ್ವಿಧ್ರುವಿ ರಾಜಕೀಯವನ್ನು ನೋಡಿದ್ದ ರಾಜ್ಯಕ್ಕೆ ಆಪ್ ಮೂರನೇ ಪರ್ಯಾಯ ನೀಡುತ್ತಿದೆ.
ಸತತ ಆರು ಬಾರಿ ಗೆದ್ದಿರುವ ಬಿಜೆಪಿಗೆ ಈ ಚುನಾವಣೆ ನಿರ್ಣಾಯಕವಾಗಿದೆ ಮತ್ತು ಮೋದಿಯವರ ತವರು ರಾಜ್ಯದಲ್ಲಿ ಅಧಿಕಾರ ಉಳಿಸಿಕೊಳ್ಳುವ ಗುರಿಯನ್ನು ಹೊಂದಿದೆ. ಹಾಗೆಯೇ ಎಎಪಿ ಗುಜರಾತ್ನಲ್ಲಿ ಗೆದ್ದು ರಾಷ್ಟ್ರಮಟ್ಟದಲ್ಲಿ ಬಲಾಢ್ಯ ರಾಜಕೀಯ ಪಕ್ಷವಾಗುವ ಯೋಜನೆ ರೂಪಿಸಿದೆ.
ಇನ್ನು ಕಾಂಗ್ರೆಸ್ ಸತತ 27 ವರ್ಷಗಳಿಂದ ಪ್ರತಿಪಕ್ಷದ ಸ್ಥಾನದಲ್ಲೇ ಇದೆ. ಈ ಬಾರಿಯಾದರೂ ಅಧಿಕಾರ ಹಿಡಿಯಬೇಕೆನ್ನುವ ಅದರ ಆಸೆಗೆ ರಾಷ್ಟ್ರೀಯ ನಾಯಕರ ತಣ್ಣನೆಯ ಪ್ರತಿಕ್ರಿಯೆ ನಿರಾಸೆ ಮೂಡಿಸಿದೆ.
ಪ್ರಸ್ತುತ ವಿಧಾನಸಭೆಯಲ್ಲಿ ಬಿಜೆಪಿ 111 ಮತ್ತು ಕಾಂಗ್ರೆಸ್ 62 ಸ್ಥಾನಗಳನ್ನು ಹೊಂದಿದೆ. ಎನ್‌ಸಿಪಿ ಒಂದು, ಬಿಟಿಪಿ ಎರಡು, ಪಕ್ಷೇತರ ಒಂದು ಸ್ಥಾನ ಹೊಂದಿದ್ದು, ಐದು ಸ್ಥಾನ ಖಾಲಿ ಇವೆ. ಇದರಲ್ಲಿ ಮೂರು ಕಾಂಗ್ರೆಸ್ ಶಾಸಕರು ರಾಜೀನಾಮೆ ನೀಡಿದ ನಂತರ ತೆರವಾಗಿವೆ.
ಈ ಬಾರಿ ಲೋಕಸಭೆ ಸಂಸದ ಅಸಾದುದ್ದೀನ್ ಓವೈಸಿ ಅವರ ಎಐಎಂಐಎಂ (ಆಲ್ ಇಂಡಿಯಾ ಮಜ್ಲಿಸ್-ಇ-ಇತ್ತೆಹಾದುಲ್ ಮುಸ್ಲಿಮೀನ್) ಅಲ್ಪಸಂಖ್ಯಾತರ ಪ್ರಾಬಲ್ಯವಿರುವ ಕೆಲವು ಸ್ಥಾನಗಳಲ್ಲಿ ಅಭ್ಯರ್ಥಿಗಳನ್ನು ಘೋಷಿಸಿದ್ದು, ಹೆಚ್ಚಿನ ಅಭ್ಯರ್ಥಿಗಳನ್ನು ಕಣಕ್ಕಿಳಿಸುವ ಸಾಧ್ಯತೆಯಿದೆ.
ಗುಜರಾತಿನಲ್ಲಿ 1962, 1967 ಮತ್ತು 1972ರಲ್ಲಿ ನಡೆದ ಮೊದಲ ಮೂರು ವಿಧಾನಸಭಾ ಚುನಾವಣೆಗಳಲ್ಲಿ ಕಾಂಗ್ರೆಸ್ ಗೆದ್ದಿತ್ತು. 1975 ರಲ್ಲಿ ತುರ್ತು ಪರಿಸ್ಥಿತಿ ಹೇರಿದ ನಂತರ ನಡೆದ ಚುನಾವಣೆಯಲ್ಲಿ ಅದು ಮೊರಾರ್ಜಿ ದೇಸಾಯಿ ನೇತೃತ್ವದ ಪಕ್ಷಗಳ ಮೈತ್ರಿ, ಜನಸಂಘ ಮತ್ತು ಬಂಡಾಯ ಕಾಂಗ್ರೆಸ್ ನಾಯಕ ಚಿಮನ್‌ಭಾಯ್ ಪಟೇಲ್ ಅವರ ಕಿಮ್ಲೋಪ್ ಪಕ್ಷಕ್ಕೆ ಸೋತಿತು.
ಇದನ್ನೂ ಓದಿ: ಗುಜರಾತ್ ವಿಧಾನಸಭೆ ಚುನಾವಣೆ: ಡಿ.1,5 ರಂದು ಮತದಾನ, 8 ರಂದು ಫಲಿತಾಂಶ