ವಿಜಯನಗರಂ : ಆಂಧ್ರಪ್ರದೇಶದ ವಿಜಯನಗರಂ ಜಿಲ್ಲೆಯ ವಿಕಲಚೇತನ ಯುವಕನೊಬ್ಬ ಇ-ಕಾಮರ್ಸ್ ದೈತ್ಯ ಅಮೆಜಾನ್‌ನಲ್ಲಿ ಉದ್ಯೋಗವನ್ನು ಪಡೆದು ತನ್ನ ದೈಹಿಕ ಅಂಗವೈಕಲ್ಯಕ್ಕೆ ಸಂಬಂಧಿಸಿದ ವಿಲಕ್ಷಣಗಳ ವಿರುದ್ಧ ಹೋರಾಡಿ ಜಯಗಳಿಸಿದ್ದಾನೆ. ವಿಜಯನಗರ ಜಿಲ್ಲೆಯ ಚೀಪುರುಪಲ್ಲಿ ಮೂಲದ ಅಮೃತ್ ಅಪರೂಪದ ಅನುವಂಶಿಕ ಕಾಯಿಲೆಯಿಂದ ಬಳಲುತ್ತಿದ್ದು ಅವರ ತಲೆ ಮತ್ತು ಕೈಗಳ ಎರಡು ತೋರು ಬೆರಳುಗಳನ್ನು ಹೊರತುಪಡಿಸಿ ದೇಹದ ಬೇರೆ ಭಾಗಗಳು ಚಲನೆ ಇಲ್ಲದಂತಾಗಿದೆ.
ಆದಾಗ್ಯೂ, ಅಮೃತ್ ಎಲ್ಲಾ ಸವಾಲುಗಳನ್ನು ಧೈರ್ಯದಿಂದ ಎದುರಿಸಿದ್ದು, ಪ್ರಸ್ತುತ ಇ-ಕಾಮರ್ಸ್ ದೈತ್ಯ ಅಮೆಜಾನ್‌ನಲ್ಲಿ ವಾರ್ಷಿಕವಾಗಿ ರೂ 3 ಲಕ್ಷ ರೂ ಸಂಪಾದಿಸುತ್ತಿದ್ದಾರೆ. ಅಮೃತ್ ಅವರ ತಂದೆ-ತಾಯಿ ಗಂಡು ಮಗು ಹುಟ್ಟಿತೆಂದು ಸಂತೋಷದಲ್ಲಿ ಮುಳುಗಿದ್ದರು. ಆದರೆ, ಐದು ವರ್ಷ ಕಳೆದರೂ ಸಹ ಅಮೃತ್ ದೇಹದ ಚಲನವಲನ ಕಾಣದ ಹಿನ್ನೆಲೆಯಲ್ಲಿ ಪೋಷಕರು ಆತಂಕಗೊಂಡು ಚಿಕಿತ್ಸೆಗಾಗಿ ಲಕ್ಷಾಂತರ ರೂ.ಗಳನ್ನು ಖರ್ಚು ಮಾಡಿದರು ಯಾವುದೇ ಪ್ರಯೋಜನವಾಗಲಿಲ್ಲ.
ಸ್ವಂತ ಬಲದಿಂದ ಚಲಿಸಲು ಸಾಧ್ಯವಾಗದ ಅಮೃತ್ ತನ್ನ ತಲೆ ಮತ್ತು ಎರಡೂ ಕೈಗಳ ತೋರು ಬೆರಳುಗಳಿಂದ ಮಾತ್ರ ಕಾರ್ಯನಿರ್ವಹಿಸುತ್ತಾನೆ. ಬೇರೆಯವರ ಸಹಾಯವಿಲ್ಲದೇ ಕಾಲುಗಳನ್ನು ಮತ್ತು ಕೈಗಳನ್ನು ಚಲಿಸಲು ಸಾಧ್ಯವಿಲ್ಲ. ಆದರೆ ಅಮೃತ್ ಅವರ ದೈಹಿಕ ಅಂಗವೈಕಲ್ಯವು ಅವನ ಕನಸುಗಳನ್ನು ನನಸಾಗಿಸಲು ತಡೆಯಲಿಲ್ಲ. ಹತ್ತನೇ ತರಗತಿಯವರೆಗೂ ಅಮೃತ್ ಅವರ ತಾಯಿಯೇ ಗಾಲಿ ಕುರ್ಚಿಯಲ್ಲಿ ಶಾಲೆಗೆ ಕರೆದುಕೊಂಡು ಹೋಗುತ್ತಿದ್ದರು.
ಇದನ್ನೂ ಓದಿ: ಶ್ರದ್ಧಾ ಮರ್ಡರ್ ರೀತಿಯ ಮತ್ತೊಂದು ಘಟನೆ: ಪ್ರೇಯಸಿ ಕೊಲೆ ಮಾಡಿ ಫ್ರಿಜ್ನಲ್ಲಿ ಶವ ಬಚ್ಚಿಟ್ಟ ಯುವಕ!
ಇಂತಹ ಸ್ಥಿತಿಯಲ್ಲಿ ಓದಿದ ಅಮೃತ್ ಹತ್ತನೇ ತರಗತಿಯಲ್ಲಿ 9.1 ಗ್ರೇಡ್ ಅಂಕಗಳನ್ನು ಗಳಿಸಿದ್ದರು. ಮತ್ತು ಇಂಟರ್ ಮೀಡಿಯೇಟ್ ನಲ್ಲಿ 940 ಅಂಕ ಗಳಿಸಿದ್ದಾರೆ. ನಂತರ, 2021ರಲ್ಲಿ ಬಿ ಕಾಮ್ ಪದವಿಯನ್ನು ಸಹ ಪೂರ್ಣಗೊಳಿಸಿದರು. ಅಮೃತ್ ಅವರು ಇಂಟರ್ ಮೀಡಿಯೇಟ್ ಪರೀಕ್ಷೆಯ ಸಮಯದಲ್ಲಿ ಹಾಸಿಗೆಯಿಂದ ಇಳಿಯುವಾಗ ಜಾರಿ ಬಿದ್ದು ಕಾಲು ಮುರಿದುಕೊಂಡಿದ್ದರು. ಆದರೂ ಸಹ ಸ್ಟ್ರೆಚರ್ ಮೇಲೆ ಪರೀಕ್ಷೆ ಕೊಠಡಿಗೆ ತೆರಳಿ ಪರೀಕ್ಷೆ ಬರೆದು ಉತ್ತೀರ್ಣರಾದರು.
ಅವರ ಇಡೀ ದೇಹವು ಪಾರ್ಶ್ವವಾಯುವಿಗೆ ತುತ್ತಾಗಿದ್ದರೂ, ಅಮೃತ್ ಚಲ ಬಿಡದೇ ತನ್ನ ಎರಡೂ ತೋರು ಬೆರಳುಗಳ ಲಾಭವನ್ನು ಪಡೆದುಕೊಂಡು ತಮ್ಮ ವಿದ್ಯಾಭ್ಯಾಸವನ್ನು ಮುಗಿಸಿದರು. ಇತ್ತೀಚಿಗೆ ಅಮೆಜಾನ್‌ನಲ್ಲಿ ಸಾಫ್ಟ್‌ವೇರ್ ಉದ್ಯೋಗಕ್ಕಾಗಿ ಸಾಮಾಜಿಕ ಜಾಲತಾಣಗಳ ಮೂಲಕ ಅರ್ಜಿ ಸಲ್ಲಿಸಿದ್ದರು. ಆಯ್ಕೆ ಪ್ರಕ್ರಿಯೆಯಲ್ಲಿ ನಡೆಸಿದ ಮೂರು ಸುತ್ತಿನ ಪರೀಕ್ಷೆಗಳಲ್ಲಿ ಯಶಸ್ವಿಯಾದ ಅಮೃತ್ ವರ್ಷಕ್ಕೆ ಮೂರು ಲಕ್ಷ ರೂಪಾಯಿಗಳನ್ನು ಪ್ಯಾಕೆಜ್ ಅನ್ನು ಹೊಂದಿದ್ದಾರೆ.
ಇತ್ತೀಚೆಗೆ, ಅಮೆಜಾನ್ ಕಂಪನಿಯವರು ಅಮೃತ್ ಅವರ ಅಂಗವೈಕಲ್ಯದ ಮಟ್ಟವನ್ನು ಪರಿಗಣಿಸಿ ಶಾಶ್ವತವಾಗಿ ಮನೆಯಿಂದಲೇ ಕೆಲಸ ಮಾಡುವ ಅವಕಾಶವನ್ನು ಒದಗಿಸಿದೆ. ವಿಕಲಚೇತನರು ಆತ್ಮಸ್ಥೈರ್ಯ ಕಳೆದುಕೊಳ್ಳದಿದ್ದಲ್ಲಿ ಯಾವುದೇ ಕ್ಷೇತ್ರದಲ್ಲಿ ಯಶಸ್ಸು ಸಾಧಿಸಬಹುದು ಎಂಬುದು ಅಮೃತ್ ನಂಬಿಕೆಯಾಗಿದೆ.
ಇದನ್ನೂ ಓದಿ: ಆಂಧ್ರ ಸಿಎಂ ನಿವಾಸದ ಕೂಗಳತೆಯಲ್ಲಿ ದೃಷ್ಟಿವಿಕಲಚೇತನ ಬಾಲಕಿಗೆ ಚಾಕು ಇರಿತ,ಸಾವು: ಆರೋಪಿ ಬಂಧಿಸದ ಪೊಲೀಸರ ವಿರುದ್ಧ ಆಕ್ರೋಶ