ಅಲ್ಲೂರಿ(ಆಂಧ್ರಪ್ರದೇಶ): ನಿತ್ಯ ಬೆಳಗ್ಗೆಯಿಂದ ಮಧ್ಯರಾತ್ರಿಯವರೆಗೆ ಈ ಮರದ ಕೆಳಗೆ ಜನ ಇರುತ್ತಾರೆ. ಅಲ್ಲೂರಿ ಜಿಲ್ಲೆಯ ಜಿ.ಮಡುಗುಳ ಮಂಡಲದ ವಾಕಪಲ್ಲಿ ಬೆಟ್ಟದ ರಸ್ತೆಯಲ್ಲಿರುವ ಈ ಮರವು ಸೆಲ್ ಟವರ್ ಆಗಿ ಕಾರ್ಯನಿರ್ವಹಿಸುತ್ತದೆ. ಈ ಜಿಲ್ಲೆಯ ಸುತ್ತಮುತ್ತಲಿನ 15 ಕಿಮೀ ವ್ಯಾಪ್ತಿಯಲ್ಲಿ ಮಾತ್ರ ಮೊಬೈಲ್ ಸಿಗ್ನಲ್ ಸಿಗುತ್ತದೆಯಂತೆ. ಹೀಗಾಗಿ ಆನ್‌ಲೈನ್ ತರಗತಿಗಾಗಲಿ, ಮೆಸೇಜ್ ಮಾಡಲು, ಬ್ಯಾಕಿಂಗ್ ವ್ಯವಹಾರ ಮತ್ತಿತರ ಕೆಲಸಗಳಿಗಾಗಿ ಇಲ್ಲಿ ಜನ ಸೇರುತ್ತಾರೆ.
ಪಿಂಚಣಿ ಪಡೆಯಲು ಬೆರಳಚ್ಚು ಬೇಕು. ಗ್ರಾಮದಲ್ಲಿ ಸಿಗ್ನಲ್ ಇಲ್ಲದಿರುವುದರಿಂದ ಬಯೋಮೆಟ್ರಿಕ್ ಕಾರ್ಯದಲ್ಲಿ ವ್ಯತ್ಯಯವಾಗುತ್ತಿದೆ. ಪಿಂಚಣಿಗಾಗಿ ಸುಮಾರು 9 ಕಿಲೋಮೀಟರ್ ಪ್ರಯಾಣಿಸಬೇಕಾಗಿದೆ. ಗ್ರಾಮದಲ್ಲಿರುವ ಫೋನ್‌ಗಳಿಗೂ ಸರಿಯಾಗಿ ಸಿಗ್ನಲ್ ಸಿಗುವುದಿಲ್ಲ. ಈ ಬಗ್ಗೆ ಅಧಿಕಾರಿಗಳಿಗೆ ಹಲವು ಬಾರಿ ಹೇಳಿದರೂ ಯಾವುದೇ ಪ್ರಯೋಜನವಾಗಿಲ್ಲ ಎನ್ನುತ್ತಾರೆ ಅಲ್ಲಿನ ಸ್ಥಳೀಯರು.
ಇಲ್ಲಿನ ಜನರು ದೂರದ ಊರುಗಳಿಂದ ಇಲ್ಲಿಗೆ ಬಂದು ಸ್ನೇಹಿತರು, ಬಂಧುಗಳನ್ನು ಮಾತನಾಡಿಸಿ ಅವರ ಯೋಗಕ್ಷೇಮ ವಿಚಾರಿಸುತ್ತಾರೆ. ಯುಪಿಐ ವಹಿವಾಟು ಮತ್ತಿತರ ಬ್ಯಾಂಕಿಂಗ್ ಸೇವೆಗಳು ಸೇರಿದಂತೆ ಇತರ ಆನ್‌ಲೈನ್ ಕೆಲಸಗಳಿಗಾಗಿ ಈ ಮರದ ಕೆಳಗೆ ಬರಬೇಕಾಗಿದೆ. ಯೂಟ್ಯೂಬ್‌ನಲ್ಲಿ ಟೈಲರಿಂಗ್ನನ್ನು ಕಲಿಯಲು ಮಹಿಳೆಯರೂ ಇಲ್ಲಿಗೆ ಬರುತ್ತಿದ್ದಾರಂತೆ. ಸಿಗ್ನಲ್ ಸಮಸ್ಯೆ ಬಗ್ಗೆ ಸ್ಥಳೀಯರು ಅಧಿಕಾರಿಗಳಿಗೆ ದೂರು ನೀಡಿದರೂ, ಯಾರೂ ಸ್ಪಂದಿಸಿಲ್ಲವಂತೆ.
ಇದನ್ನೂ ಓದಿ: ಕೈಮೇಲೆ ಆರೋಪಿ ಹೆಸರು ಬರೆದುಕೊಂಡು, ಆತ್ಮಹತ್ಯೆಗೆ ಶರಣಾದ ಅತ್ಯಾಚಾರ ಸಂತ್ರಸ್ತೆ