ಕಾಕಿನಾಡ (ಆಂಧ್ರಪ್ರದೇಶ): ಆಂಧ್ರಪ್ರದೇಶದ ಪೂರ್ವ ಗೋದಾವರಿ ಜಿಲ್ಲೆಯ ಕಾಕಿನಾಡದಲ್ಲಿರುವ ಜವಾಹರಲಾಲ್ ನೆಹರು ತಾಂತ್ರಿಕ ವಿಶ್ವವಿದ್ಯಾಲಯ (JNTU-K)ದ ಅತಿಥಿಗೃಹದಲ್ಲಿ ಹನಿಮೂನ್ ಏರ್ಪಾಡು ಮಾಡಲಾಗಿದ್ದು, ವಿದ್ಯಾರ್ಥಿಗಳು ಮತ್ತು ಸಾರ್ವಜನಿಕರಿಂದ ವ್ಯಾಪಕ ಟೀಕೆಗೆ ಒಳಗಾಗಿದೆ.
ಸಾಮಾನ್ಯವಾಗಿ ಯಾವುದೇ ವಿಶ್ವವಿದ್ಯಾನಿಲಯದ ಆವರಣದಲ್ಲಿರುವ ಅತಿಥಿಗೃಹವನ್ನು ಅಧಿಕೃತ ಉದ್ದೇಶಗಳಿಗಾಗಿ ಮಾತ್ರ ಬಳಸಿಕೊಳ್ಳಲಾಗುತ್ತದೆ ಮತ್ತು ಬೋಧಕ ಅಥವಾ ಬೋಧಕೇತರ ಸಿಬ್ಬಂದಿ ಇದರ ಸದುಪಯೋಗ ಪಡೆದುಕೊಳ್ಳುತ್ತಾರೆ. ಹೀಗಿರುವಾಗ ಜವಾಹರಲಾಲ್ ನೆಹರು ತಾಂತ್ರಿಕ ವಿವಿಯ ಅತಿಥಿಗೃಹದ ಒಂದು ಕೋಣೆಯನ್ನ ಮಲ್ಲಿಗೆ - ಗುಲಾಬಿ ಹೂವುಗಳಿಂದ ಅಲಂಕರಿಸಲಾಗಿದೆ.
ಇದನ್ನೂ ಓದಿ: SUICIDE: ನಾನು ಕೆಟ್ಟ ಮಗಳು, ಮಿಸ್ ಯೂ ಡ್ಯಾಡಿ, ಮಮ್ಮಿ!
ಕೊಠಡಿಯನ್ನು ಅಲಂಕರಿಸಿರುವ ದೃಶ್ಯಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಈ ಸಂಬಂಧ ತನಿಖೆ ನಡೆಸಲು ವಿಶ್ವವಿದ್ಯಾನಿಲಯದ ಆಡಳಿತ ಮಂಡಳಿಯು ಐದು ಸದಸ್ಯರ ಸಮಿತಿಯೊಂದನ್ನು ರಚಿಸಿದೆ. ಪ್ರಾಥಮಿಕ ಮಾಹಿತಿಯ ಪ್ರಕಾರ, ವಿಶ್ವವಿದ್ಯಾಲಯದ ಮಹಿಳಾ ಸಬಲೀಕರಣ ವಿಭಾಗದ ನಿರ್ದೇಶಕಿ ಸ್ವರ್ಣ ಕುಮಾರಿ ಅವರು ಮೂರು ದಿನಗಳ ಕಾಲ (ಆಗಸ್ಟ್ 18 ರಿಂದ 20 ರವರೆಗೆ) ಬುಕ್ ಮಾಡಿದ್ದಾರೆ.
ಇನ್ನು, ಘಟನೆ ಬೆನ್ನಲ್ಲೇ ವಿವಿ ಉಪ ಕುಲಪತಿ ರಾಮಲಿಂಗ ರಾಜು ಅವರು ಪ್ರೊ. ಎಲ್. ಸುಮಲತಾ ಅವರನ್ನು ನೂತನ ರಿಜಿಸ್ಟ್ರಾರ್ ಆಗಿ ನೇಮಕ ಮಾಡಿದ್ದಾರೆ. ಈ ಹಿಂದೆ ರಿಜಿಸ್ಟ್ರಾರ್ ಆಗಿದ್ದ ಸತ್ಯನಾರಾಯಣ ಅವರ ನಿಧನದ ಬಳಿಕ ಈ ಹುದ್ದೆ ಖಾಲಿ ಬಿದ್ದಿತ್ತು.