ಅಮರಾವತಿ: 2021-22ರ ಶೈಕ್ಷಣಿಕ ವರ್ಷದಿಂದ ತನ್ನ ಎಲ್ಲ ಶಾಲೆಗಳಲ್ಲಿ 1 ರಿಂದ 7ನೇ ತರಗತಿಗಳಿಗೆ ಸಿಬಿಎಸ್‌ಇ ಪಠ್ಯಕ್ರಮವನ್ನು ಜಾರಿಗೆ ತರಲು ಆಂಧ್ರಪ್ರದೇಶ ಸರ್ಕಾರ ಮುಂದಾಗಿದೆ.
ಈ ವ್ಯವಸ್ಥೆಯನ್ನು ಕ್ರಮೇಣ 8 ನೇ ತರಗತಿಯಿಂದ 10 ಕ್ಕೆ ಹೆಚ್ಚಿಸಲಾಗುವುದು ಎಂದು ತಿಳಿಸಲಾಗಿದೆ. 2024ರ ಹೊತ್ತಿಗೆ 1 ರಿಂದ 10 ನೇ ತರಗತಿಗಳು ಸಿಬಿಎಸ್‌ಇ ಅಡಿಯಲ್ಲಿರುತ್ತವೆ ಎಂದು ಮುಖ್ಯಮಂತ್ರಿಗಳ ಕಚೇರಿಯ ಪ್ರಕಟಣೆಯಲ್ಲಿ ತಿಳಿಸಲಾಗಿದೆ.
ಈ 1 ರಿಂದ 6 ನೇ ತರಗತಿಯವರೆಗಿನ ಎಲ್ಲಾ ಸರ್ಕಾರಿ ಶಾಲೆಗಳನ್ನು ಇಂಗ್ಲಿಷ್ ಮಾಧ್ಯಮಕ್ಕೆ ಪರಿವರ್ತಿಸುವುದರ ವಿರುದ್ಧ ಸುಪ್ರೀಂ ಕೋರ್ಟ್‌ನಲ್ಲಿ ವಿಚಾರಣೆ ನಡೆಯುತ್ತಿರುವ ಮಧ್ಯೆಯೇ ಈ ನಿಯಮ ವ್ಯಾಪಕ ಚರ್ಚೆಗೆ ಗ್ರಾಸವಾಗಿದೆ.
ಜಗನ್ ಮೋಹನ್ ರೆಡ್ಡಿ ಅವರ ನಿರ್ಧಾರವು ತೆಲುಗು ಶಿಕ್ಷಣ ಮಾಧ್ಯಮವನ್ನು ಸಂಪೂರ್ಣವಾಗಿ ತೊಡೆದು ಹಾಕುವ ಕ್ರಮವಾಗಿದೆ ಎಂದು ಟೀಕಿಸಲಾಗುತ್ತಿದೆ.
ಸಿಬಿಎಸ್‌ಇ ಅಡಿಯಲ್ಲಿ ತೆಲುಗು ಭಾಷಾ ವಿಷಯವಾಗಲಿದ್ದು, ಪಠ್ಯಕ್ರಮ ಹಿಂದಿ ಅಥವಾ ಇಂಗ್ಲಿಷ್ ಮಾಧ್ಯಮದಲ್ಲಿರುತ್ತದೆ. ಇನ್ನು ರಾಜ್ಯವು ಪಠ್ಯಕ್ರಮವನ್ನು ಸಂಪೂರ್ಣವಾಗಿ ತೊಡೆದುಹಾಕುತ್ತದೆಯೇ ಅಥವಾ ಅದಕ್ಕೆ ಸಮಾನಾಂತರವಾಗಿ ಸಿಬಿಎಸ್‌ಇ ವ್ಯವಸ್ಥೆಯನ್ನು ಹೊಸದಾಗಿ ಪರಿಚಯಿಸುವುದೇ ಎಂದು ಸರ್ಕಾರ ಈವರೆಗೆ ನಿರ್ದಿಷ್ಟಪಡಿಸಿಲ್ಲ.