ಮುಂಬೈ : ಉದ್ಯಮಿ ಅನಿಲ್ ಅಂಬಾನಿ ಮನೆ ಬಳಿ ಸ್ಫೋಟಕ ಪತ್ತೆ ಪ್ರಕರಣದಲ್ಲಿ ಬಂಧಿತನಾಗಿರುವ ಮಹಾರಾಷ್ಟ್ರ ಪೊಲೀಸ್ ಅಧಿಕಾರಿ ಸಚಿನ್ ವಝೆಯನ್ನು ಮಾರ್ಚ್ 25ರವರೆಗೆ ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್‌ಐಎ) ವಶಕ್ಕೆ ನೀಡಲಾಗಿದೆ.
ಶನಿವಾರ ರಾತ್ರಿ 49 ವರ್ಷದ ವಝೆಯನ್ನು ಬಂಧಿಸಿದ ಎನ್‌ಐಎ, ಸ್ಥಳೀಯ ಆಸ್ಪತ್ರೆಯಲ್ಲಿ ವೈದ್ಯಕೀಯ ಪರೀಕ್ಷೆ ನಡೆಸಿ ದಕ್ಷಿಣ ಮುಂಬೈನ ನ್ಯಾಯಾಲಯಕ್ಕೆ ಹಾಜರುಪಡಿಸಿತು. ಬಳಿಕ ಹೆಚ್ಚಿನ ತನಿಖೆಗಾಗಿ ವಶಕ್ಕೆ ಪಡೆದಿದೆ.
ಐಪಿಸಿ ಸೆಕ್ಷನ್ 286 (ಸ್ಫೋಟಕ ವಸ್ತುವಿಗೆ ಸಂಬಂಧಿಸಿದಂತೆ ನಿರ್ಲಕ್ಷ್ಯದ ವರ್ತನೆ ) 465 (ಫೋರ್ಜರಿ ಮಾಡುವುದು), 473 ( ಫೋರ್ಜರಿ ಮಾಡುವ ಉದ್ದೇಶದಿಂದ ನಕಲಿ ಮುದ್ರೆ ತಯಾರಿಸುವುದು ಅಥವಾ ಹೊಂದಿರುವುದು ), 506 (2) (ಕ್ರಿಮಿನಲ್ ಬೆದರಿಕೆಗೆ ಶಿಕ್ಷೆ, 120 ಬಿ ( ಕ್ರಿಮಿನಲ್ ಪಿತೂರಿ) ಮತ್ತು ಸ್ಫೋಟಕ ವಸ್ತುಗಳ ಕಾಯ್ದೆಯಡಿ ವಝೆ ವಿರುದ್ಧ ಪ್ರಕರಣ ದಾಖಲಿಸಲಾಗಿದೆ. ಸ್ಫೋಟಕ ತುಂಬಿದ್ದ ವಾಹನವನ್ನು ಕಾರ್ಮೈಕಲ್ ರಸ್ತೆ ಸಮೀಪ ಇರಿಸಿದ ಆರೋಪದ ಮೇಲೆ ಎನ್‌ಐಎ ವಝೆಯನ್ನು ಬಂಧಿಸಿತ್ತು.
ಓದಿ : ಬಂಧಿತ ಪೊಲೀಸ್ ಅಧಿಕಾರಿ ಸಚಿನ್ ವಝೆ ಇಂದು ನ್ಯಾಯಾಲಯಕ್ಕೆ ಹಾಜರು
ಶನಿವಾರ ಬೆಳಗ್ಗೆ 11:30ಕ್ಕೆ ದಕ್ಷಿಣ ಮುಂಬೈನ ಕುಂಬಲ್ಲಾ ಬೆಟ್ಟದಲ್ಲಿರುವ ಎನ್‌ಐಎ ಕಚೇರಿಗೆ ಹಾಜರಾಗುವಂತೆ ಸಚಿನ್ ವಝೆಗೆ ಸಮನ್ಸ್ ನೀಡಲಾಗಿತ್ತು. ಸುಮಾರು 12 ಗಂಟೆಗಳ ವಿಚಾರಣೆಯ ಬಳಿಕ ರಾತ್ರಿ ವಝೆಯನ್ನು ಬಂಧಿಸಲಾಗಿತ್ತು.
ಮುಖೇಶ್ ಅಂಬಾನಿ ಮನೆ ಮುಂದೆ ಸ್ಫೋಟಕ ತುಂಬಿಸಿ ನಿಲ್ಲಿಸಲಾಗಿದ್ದ ವಾಹನ ಮಾಲೀಕ ಉದ್ಯಮಿ ಮನ್ಸುಖ್ ಹಿರಾನ್ ಅವರ ಮೃತದೇಹ ಮಾರ್ಚ್ 5 ರಂದು ಥಾಣೆಯ ಕೊಲ್ಲಿನಲ್ಲಿಯಲ್ಲಿ ಪತ್ತೆಯಾಗಿತ್ತು. ಶವವಾಗಿ ಪತ್ತೆಯಾಗುವುದಕ್ಕೂ ಮುನ್ನ ತನ್ನ ವಾಹನ ಒಂದು ವಾರಕ್ಕಿಂತ ಮುಂಚೆಯೇ ಕಳುವಾಗಿತ್ತು ಎಂದು ಮನ್ಸುಖ್ ಹಿರಾನ್ ಹೇಳಿಕೊಂಡಿದ್ದ. ಹೀಗಾಗಿ, ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ ಎನ್‌ಐಎ ತನಿಖೆ ಮುಂದುವರೆಸಿದೆ.
ಯಾರಿದು ಸಚಿನ್ ವಝೆ?: 1990ರ ಬ್ಯಾಚ್ನ ಪೊಲೀಸ್ ಅಧಿಕಾರಿಯಾಗಿರುವ ಸಚಿನ್ ವಝೆ, 63 ಅಪರಾಧಿಗಳನ್ನು ಎನ್ಕೌಂಟರ್ ಮಾಡಿ 'ಎನ್ಕೌಂಟರ್ ಸ್ಪೆಷಲಿಸ್ಟ್' ಎಂದೇ ಖ್ಯಾತಿ ಪಡೆದಿದ್ದರು. 2002ರ ಘಟ್ಕೋಪರ್ ಸ್ಫೋಟದ ಶಂಕಿತ ಆರೋಪಿ ಖ್ವಾಜಾ ಯೂನುಸ್ನ ಕಸ್ಟೋಡಿಯಲ್ ಡೆತ್ ಪ್ರಕರಣದಲ್ಲಿ 2004ರಲ್ಲಿ ವಝೆಯನ್ನು ಕರ್ತವ್ಯದಿಂದ ಅಮಾನತು ಮಾಡಲಾಗಿತ್ತು. ಇದಾದ ಬಳಿಕ, ಕಳೆದ ವರ್ಷ ಅವರು ಮರಳಿ ಕರ್ತವ್ಯಕ್ಕೆ ಸೇರಿದ್ದರು.
ಅರ್ನಾಬ್ ಗೋಸ್ವಾಮಿಯನ್ನು ಬಂಧಿಸಿದ್ದ ಅಧಿಕಾರಿ : ಕಾರ್ಮಿಕನ ಆತ್ಮಹತ್ಯೆ ಪ್ರಕರಣದಲ್ಲಿ ಕಳೆದ ವರ್ಷ ನವೆಂಬರ್‌ನಲ್ಲಿ ಪತ್ರಕರ್ತ ಅರ್ನಾಬ್ ಗೋಸ್ವಾಮಿ ಬಂಧಿಸಿದ್ದ ತಂಡದ ನೇತೃತ್ವವನ್ನು ವಝೆ ವಹಿಸಿಕೊಂಡಿದ್ದರು. ಕರ್ತವ್ಯದಿಂದ ಅಮಾನತಾಗಿದ್ದ ವಝೆ, 2008ರವರೆಗೆ ಶಿವಸೇನೆಯ ಸದಸ್ಯರಾಗಿದ್ದರು ಎಂದು ಸಿಎಂ ಉದ್ಧವ್ ಠಾಕ್ರೆ ಇತ್ತೀಚೆಗೆ ಹೇಳಿದ್ದರು.