ಜಮ್ಮು: ದೇಶದ ಸಶಸ್ತ್ರ ಪಡೆಗಳು ಮತ್ತು ಭದ್ರತಾ ಪಡೆಗಳಿಂದ ಆದೇಶ ಪಡೆದುಕೊಂಡು ಡಿಆರ್‌ಡಿಒ ಕೌಂಟರ್-ಡ್ರೋನ್ ತಂತ್ರಜ್ಞಾನವನ್ನು ಅಭಿವೃದ್ಧಿಪಡಿಸಿ ಅದನ್ನು ಕೈಗಾರಿಕೆಗಳಿಗೆ ವರ್ಗಾಯಿಸಿದೆ ಎಂದು ಸಂಸ್ಥೆಯ ಅಧಿಕಾರಿ ಮಾಹಿತಿ ನೀಡಿದ್ದಾರೆ.
ಡಿಆರ್‌ಡಿಒ ಡ್ರೋನ್ ವಿರೋಧಿ ತಂತ್ರಜ್ಞಾನವನ್ನು ಅಭಿವೃದ್ಧಿಪಡಿಸಿದೆ. ಡ್ರೋನ್‌ಗಳನ್ನು ಎದುರಿಸಲು ಅಗತ್ಯವಿರುವ ಎಲ್ಲ ಅಂಶಗಳನ್ನು ಇದು ಹೊಂದಿದೆ. ಪತ್ತೆ ಹಚ್ಚುವಿಕೆ, ಟ್ರ್ಯಾಕಿಂಗ್ ಅಥವಾ ಕಣ್ಗಾವಲು ಮತ್ತು ಸಾಫ್ಟ್‌ವೇರ್ ಮತ್ತು ಹಾರ್ಡ್‌ವೇರ್ ವ್ಯವಸ್ಥೆಯನ್ನು ಹೊಂದಿದೆ ಎಂದು ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆ (ಡಿಆರ್‌ಡಿಒ) ಮುಖ್ಯಸ್ಥ ಜಿ.ಸತೀಶ್ ರೆಡ್ಡಿ ತಿಳಿಸಿದರು.
ಅವರು ಸಾಂಬಾದ ಜಮ್ಮುವಿನ ಕೇಂದ್ರೀಯ ವಿಶ್ವವಿದ್ಯಾಲಯದಲ್ಲಿ ಡಿಆರ್‌ಡಿಒ ಪ್ರಾಯೋಜಿತ ಕಲಾಂ ಸೆಂಟರ್ ಫಾರ್ ಸೈನ್ಸ್ ಅಂಡ್ ಟೆಕ್ನಾಲಜಿ (ಕೆಸಿಎಸ್‌ಟಿ)ಯ ಶಂಕುಸ್ಥಾಪನೆ ಸಮಾರಂಭದಲ್ಲಿ ಸುದ್ದಿಗಾರರಿಗೆ ಈ ಕುರಿತಂತೆ ಮಾಹಿತಿ ನೀಡಿದರು.
ಈ ತಂತ್ರಜ್ಞಾನವನ್ನು ಬಹು ಕೈಗಾರಿಕೆಗಳಿಗೆ ವರ್ಗಾಯಿಸಲಾಗಿದ್ದು, ಇದು ದೇಶದ ಸಶಸ್ತ್ರ ಪಡೆ ಮತ್ತು ಭದ್ರತಾ ಪಡೆಗಳಿಂದ ಆದೇಶವನ್ನು ಪಡೆದುಕೊಂಡಿದೆ. ಗಡಿಯಾಚೆಯಿಂದ ಬರುತ್ತಿರುವ ಡ್ರೋನ್‌ಗಳನ್ನು ಹೊಡೆದುರುಳಿಸಲು ಈ ತಂತ್ರಜ್ಞಾನ ಸಹಾಯಕವಾಗಲಿದೆ ಎಂದರು.
ಡ್ರೋನ್ ವಿರೋಧಿ ವ್ಯವಸ್ಥೆಯ ಸಾಮರ್ಥ್ಯವನ್ನು ಅನೇಕ ಬಾರಿ ಪ್ರದರ್ಶಿಸಲಾಗಿದ್ದು, ಇದನ್ನು ಸ್ವಾತಂತ್ರ್ಯ ದಿನಾಚರಣೆ ಮತ್ತು ಗಣರಾಜ್ಯೋತ್ಸವದಂದು ಕೂಡ ನಿಯೋಜಿಸಲಾಗಿತ್ತು ಎಂದು ಹೇಳಿದರು.
ಇದನ್ನೂ ಓದಿ: ಮೋದಿ ಹೆಸರಿನಲ್ಲಿ ಹರಿಯಾಣದಲ್ಲಿ 45 ಸ್ಥಾನ ಗೆಲ್ಲಲು ಸಾಧ್ಯವೇ?: ಕೇಂದ್ರ ಸಚಿವರ ಪ್ರಶ್ನೆ