ವೈಎಸ್ಆರ್ ಕಡಪ(ಆಂಧ್ರಪ್ರದೇಶ): ಕಡಪ ಪಟ್ಟಣದಲ್ಲಿ 23 ವರ್ಷದ ಯುವಕನೊಬ್ಬ ತನ್ನೊಂದಿಗೆ ಲೈಂಗಿಕ ಸಂಬಂಧ ಬೆಳೆಸಲು ಪ್ರಚೋದಿಸಿ ಸುಮಾರು 300 ಕ್ಕೂ ಹೆಚ್ಚು ಮಹಿಳೆಯರಿಗೆ ಬ್ಲ್ಯಾಕ್ಮೇಲ್ ಮಾಡಿ ಹಣ ಪೀಕಿ ಇದೀಗ ಪೊಲೀಸರ ಅತಿಥಿಯಾಗಿದ್ದಾನೆ.
ಆನ್ಲೈನ್ನಲ್ಲಿ ಸಂಪರ್ಕ ಬೆಳೆಸಿಕೊಂಡು, ಮಹಿಳೆಯೆ ನಗ್ನ ಫೋಟೋ ವಿಡಿಯೋಗಳನ್ನಿಟ್ಟುಕೊಂಡು ಬ್ಲ್ಯಾಕ್ ಮೇಲ್ ಮಾಡಿ ಹಣ ವಸೂಲಿ ಮಾಡಿದ್ದ ಹಿನ್ನೆಲೆ ಬಂಧಿಸಲಾಗಿದೆ ಎಂದು ಪೊಲೀಸರು ಸೋಮವಾರ ತಿಳಿಸಿದ್ದಾರೆ. ಇವನಿಂದ ಮೋಸಕ್ಕೊಳಗಾದ ಸಂತ್ರಸ್ತೆಯರಲ್ಲಿ 200 ಯುವತಿಯರು ಮತ್ತು ಆಂಧ್ರಪ್ರದೇಶ ಮತ್ತು ತೆಲಂಗಾಣದ ಸುಮಾರು 100 ವಿವಾಹಿತ ಮಹಿಳೆಯರು ಸೇರಿದ್ದಾರೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ಬಂಧನಕ್ಕೊಳಗಾದ ಆರೋಪಿ ಸಿ.ಪ್ರಸನ್ನ ಕುಮಾರ್ ಎಂದು ತಿಳಿದು ಬಂದಿದೆ. ಈತ ಪ್ರಶಾಂತ್ ರೆಡ್ಡಿ, ರಾಜಾ ರೆಡ್ಡಿ ಮತ್ತು ಟೋನಿ ಎಂದು ಬೇರೆ ಬೇರೆ ಹೆಸರುಗಳಿಂದ ಸಾಮಾಜಿಕ ಜಾಲತಾಣಗಳಲ್ಲಿ ವಿವಾಹಿತ ಮಹಿಳೆಯರು ಮತ್ತು ಯುವತಿಯರೊಂದಿಗೆ ಸ್ನೇಹ ಬೆಳೆಸುತ್ತಿದ್ದ ಎಂದು ಡಿಎಸ್ಪಿ ಬಿ.ಸುನಿಲ್ ಕುಮಾರ್ ಹೇಳಿದ್ದಾರೆ.
ಮಹಿಳೆಯರ ಪರಿಚಯ ಮಾಡಿಕೊಂಡು ಮಾಡುತ್ತಿದ್ದುದ್ದೇನು?
ಹೀಗೆ ಪರಿಚಯ ಮಾಡಿಕೊಂಡವರನ್ನು ಲೈಂಗಿಕ ಸಂಪರ್ಕಕ್ಕೆ ಪ್ರಚೋದಿಸಿ, ಅವರ ನಗ್ನ ಮತ್ತು ಅರೆ - ನಗ್ನ ಫೋಟೋಗಳನ್ನು ತೆಗೆದು, ನಂತರ ಆ ವಿಡಿಯೋಗಳನ್ನು ಸಾಮಾಜಿಕ ಮಾಧ್ಯಮಗಳಲ್ಲಿ ಅಪ್ಲೋಡ್ ಮಾಡುವ ಬೆದರಿಕೆಯೊಡ್ಡಿ ಅವರಿಂದ ಹಣ ಮತ್ತು ಆಭರಣಗಳನ್ನು ವಸೂಲಿ ಮಾಡಿಕೊಳ್ಳುತ್ತಿದ್ದ.
ಈ ಕಿರಾತಕ ಸಿಕ್ಕು ಬಿದ್ದಿದ್ದು ಹೇಗೆ?
ಶನಿವಾರ ಈತನನ್ನು ಬಂಧಿಸಿದ ಪೊಲೀಸರು, ಅವನಿಂದ 1.26 ಲಕ್ಷ ಹಣ ಮತ್ತು 30 ಗ್ರಾಂ ಚಿನ್ನವನ್ನು ವಶಪಡಿಸಿಕೊಂಡಿದ್ದಾರೆ. ಮಾನ ಮರ್ಯಾದೆಗೆ ಅಂಜಿ ಯಾವುದೇ ಸಂತ್ರಸ್ತೆಯರು ಆತನ ವಿರುದ್ಧ ಪೊಲೀಸರಿಗೆ ದೂರು ನೀಡಲು ಮುಂದಾಗಿರಲಿಲ್ಲ. ಆದರೆ, ತೆಲಂಗಾಣ ಸೆಕ್ರೆಟರಿಯೇಟ್ನಲ್ಲಿ ಕೆಲಸ ಕೊಡಿಸುವುದಾಗಿ ಶ್ರೀನಿವಾಸ್ ಎಂಬುವವರಿಗೆ ಭರವಸೆ ನೀಡಿ ವಂಚಿಸಿದ್ದ.
ಈ ಶ್ರೀನಿವಾಸ್ ದಾಖಲಿಸಿದ ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಆತನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ಪ್ರಸನ್ನ ಕುಮಾರನ ದುಷ್ಕೃತ್ಯಗಳು ಬೆಳಕಿಗೆ ಬಂದಿವೆ.
ವಿಚಾರಣೆ ವೇಳೆ ವಂಚಕ ಬಿಚ್ಚಿಟ್ಟ ಸತ್ಯ ಏನು?
ವಿಚಾರಣೆ ವೇಳೆ ಪೊಲೀಸರು ಪ್ರಸನ್ನ ಕುಮಾರ್ ಅವರ ಮೊಬೈಲ್ ಫೋನಿನಲ್ಲಿ ಸಂತ್ರಸ್ತ ಯುವತಿಯರ ಫೋಟೋಗಳು ಮತ್ತು ವಿಡಿಯೋಗಳು ಇರುವುದು ಪತ್ತೆಯಾಗಿದೆ ಎಂದು ತಿಳಿಸಿದ್ದಾರೆ.
ಈ ಆರೋಪಿ ಪ್ರಸನ್ನ ಕುಮಾರ, ಪ್ರದ್ದಟೂರು ಪಟ್ಟಣದ ನಿವಾಸಿಯಾಗಿದ್ದು ಈ ಹಿಂದೆ ಸರಗಳ್ಳತನ ಮತ್ತು ಇನ್ನಿತರ ಕಳ್ಳತನ ಪ್ರಕರಣಗಳಲ್ಲಿ ಜೈಲು ಸೇರಿದ್ದ. 2017ರಲ್ಲಿ ಜೈಲಿನಿಂದ ಬಿಡುಗಡೆಯಾದ ನಂತರ, ಮಹಿಳೆಯರನ್ನು ಟಾರ್ಗೆಟ್ ಮಾಡಿ ಇಂಥ ನೀಚ ಕೆಲಸಕ್ಕೆ ಇಳಿದಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.