ನೆಲ್ಲೂರು (ಆಂಧ್ರ ಪ್ರದೇಶ): ವಿಕೃತ ಮನಸ್ಸಿನ ದುರುಳನೊಬ್ಬ 14 ರ ಹರೆಯದ ಬಾಲಕಿಯ ಕತ್ತು ಸೀಳಿ, ಆಕೆಯ ಮುಖಕ್ಕೆ ಆ್ಯಸಿಡ್ ಎರಚಿದ್ದಾನೆ. ಇಂಥದ್ದೊಂದು ಅತ್ಯಂತ ಹೇಯ ಕೃತ್ಯ ಆಂಧ್ರ ಪ್ರದೇಶದ ನೆಲ್ಲೂರಿನ ವೆಂಕಚಾಲಂ ಗ್ರಾಮದಲ್ಲಿ ಬೆಳಕಿಗೆ ಬಂದಿದೆ. ಘಟನೆ ಬೆಳಕಿಗೆ ಬಂದ ತಕ್ಷಣ ಪೊಲೀಸರು ಆರೋಪಿಯನ್ನು ವಶಕ್ಕೆ ಪಡೆದಿದ್ದಾರೆ. ಆತನ ವಿರುದ್ಧ ಐಪಿಸಿಯ ವಿವಿಧ ಸೆಕ್ಷನ್‌ಗಳಲ್ಲಿ ಕೇಸು ದಾಖಲಿಸಿದ್ದಾರೆ. ಪೋಕ್ಸೋ ಪ್ರಕರಣವನ್ನೂ ಹಾಕಲಾಗಿದೆ ಎಂದು ನೆಲ್ಲೂರು ಪೊಲೀಸ್ ವರಿಷ್ಠಾಧಿಕಾರಿ ವಿಜಯ ರಾವ್ ತಿಳಿಸಿದರು.
ಸಂತ್ರಸ್ತೆಯನ್ನು ಮೊದಲು ನೆಲ್ಲೂರು ಆಸ್ಪತ್ರೆಗೆ ದಾಖಲಿಸಲಾಗಿತ್ತು. ನಂತರ ಹೆಚ್ಚಿನ ಚಿಕಿತ್ಸೆ ಅಲ್ಲಿಂದ ಮಂಗಳವಾರ ಚೆನ್ನೈಗೆ ರವಾನಿಸಲಾಗಿದೆ. ಆಂಧ್ರ ಪ್ರದೇಶ ಸರ್ಕಾರ ಸಂತ್ರಸ್ತೆಯ ಕುಟುಂಬಕ್ಕೆ ಈಗಾಗಲೇ 5 ಲಕ್ಷ ರೂಪಾಯಿ ಪರಿಹಾರ ಘೋಷಿಸಿದೆ ಎಂದು ಗುಂಟೂರು ವಲಯದ ಡೆಪ್ಯೂಟಿ ಜನರಲ್ ಇನ್ಸ್‌ಪೆಕ್ಟರ್ ಆಫ್ ಪೊಲೀಸ್ ತ್ರಿವಿಕ್ರಮ್ ವರ್ಮಾ ಮಾಹಿತಿ ನೀಡಿದರು. ಇದೇ ವೇಳೆ ಅವರು, ಪ್ರಕರಣದ ಬಗ್ಗೆ ಒಂದು ವಾರದೊಳಗೆ ಚಾರ್ಚ್‌ಶೀಟ್ ಸಲ್ಲಿಸುವುದಾಗಿಯೂ ಹೇಳಿದರು.
ಇದನ್ನೂ ಓದಿ: ಆ್ಯಸಿಡ್ ದಾಳಿಗೊಳಗಾದ ಬಾಲಕಿ ಜಾರ್ಖಂಡ್ನಿಂದ ದೆಹಲಿಗೆ ಏರ್ಲಿಫ್ಟ್
ಈ ಅಮಾನವೀಯ ಕೃತ್ಯ ಎಸಗಿದ ಆರೋಪಿ ನಾಗರಾಜುನನ್ನು ವಶಕ್ಕೆ ಪಡೆದಿರುವ ಪೊಲೀಸರು ಇನ್ನಷ್ಟೇ ಆತನನ್ನು ಬಂಧಿಸಬೇಕಿದೆ. ದುಷ್ಕೃತ್ಯಕ್ಕೆ ನಿಖರವಾದ ಕಾರಣ ವಿಚಾರಣೆಯ ನಂತರವಷ್ಟೇ ತಿಳಿದುಬರಬೇಕು.
ಆದರೆ ಪೊಲೀಸರು ನಡೆಸಿದ ಪ್ರಾಥಮಿಕ ತನಿಖೆಯಲ್ಲಿ, ಬಾಲಕಿಯ ಮೇಲೆ ಲೈಂಗಿಕ ದೌರ್ಜನ್ಯ ನಡೆದಿಲ್ಲ ಎಂಬುದು ಖಾತ್ರಿಯಾಗಿದೆ. "ಸದ್ಯಕ್ಕೆ ಆಕೆಯ ಆರೋಗ್ಯ ಸ್ಥಿತಿ ಸ್ಥಿರವಾಗಿದೆ. ಘಟನೆಯ ಸಂದರ್ಭದಲ್ಲಿ ಬಾಲಕಿ ಜೋರಾಗಿ ಕಿರುಚಿಕೊಂಡಿದ್ದು, ಅಕ್ಕಪಕ್ಕದ ಮನೆಯವರು ಧಾವಿಸಿ ಬಂದಿದ್ದರು. ಈ ಸಂದರ್ಭದಲ್ಲಿ ಆಕೆಯ ಮೈಯಿಂದ ರಕ್ತ ಹರಿಯುತ್ತಿತ್ತು. ಇದನ್ನು ನೋಡಿ ದಿಗ್ಭ್ರಾಂತರಾದ ಅವರು ಆಕೆಯ ಪೋಷಕರಿಗೆ ಮಾಹಿತಿ ನೀಡಿ, ಸ್ಥಳೀಯ ಆಸ್ಪತ್ರೆಗೆ ಸೇರಿಸಿದ್ದರು" ಎಂದು ಹಿರಿಯ ಪೊಲೀಸ್ ಅಧಿಕಾರಿ ಘಟನೆಯನ್ನು ವಿವರಿಸಿದರು.