ಹೈದರಾಬಾದ್: ಆಂಧ್ರಪ್ರದೇಶದ ಹೈಕೋರ್ಟ್ ಶುಕ್ರವಾರ ಮೂವರು ಐಎಎಸ್ ಅಧಿಕಾರಿಗಳಿಗೆ ಒಂದು ತಿಂಗಳ ಜೈಲು ಶಿಕ್ಷೆಯನ್ನು ವಿಧಿಸಿದೆ ಮತ್ತು ನ್ಯಾಯಾಲಯದ ಆದೇಶವನ್ನು ಉಲ್ಲಂಘಿಸಿದ್ದನ್ನು ಪರಿಗಣಿಸಿ ತಲಾ 2,000 ರೂ. ದಂಡ ವಿಧಿಸಿ ತೀರ್ಪು ನೀಡಿದೆ.
ನ್ಯಾಯಾಲಯದ ಆದೇಶವನ್ನು ಉಲ್ಲಂಘಿಸಿದ್ದಕ್ಕಾಗಿ ವಿಶೇಷ ಮುಖ್ಯ ಕಾರ್ಯದರ್ಶಿ (ಕೃಷಿ) ಪೂನಂ ಮಾಲಕೊಂಡಯ್ಯ, ಆಗಿನ ವಿಶೇಷ ಕೃಷಿ ಆಯುಕ್ತ ಹೆಚ್.ಅರುಣ್ ಕುಮಾರ್ ಮತ್ತು ಕರ್ನೂಲ್ನ ಆಗಿನ ಜಿಲ್ಲಾಧಿಕಾರಿ ಜಿ.ವೀರಪಾಂಡಿಯನ್ ವಿರುದ್ಧ ನ್ಯಾಯಮೂರ್ತಿ ಬಿ.ದೇವಾನಂದ್ ಅವರು ಆದೇಶ ಹೊರಡಿಸಿದ್ದಾರೆ.
ಓದಿ: ಕೆಲಸದ ವೇಳೆ ಅಪಘಾತದಿಂದ ಸಾವು-ನೋವು.. ಕನಿಷ್ಠ ವೇತನ ಪರಿಗಣಿಸಿ ಪರಿಹಾರ ನೀಡಲು ಹೈಕೋರ್ಟ್ ಆದೇಶ
ನ್ಯಾಯಾಧೀಶರು ಅಕ್ಟೋಬರ್ 2019 ರಲ್ಲಿ ಗ್ರಾಮ ಕೃಷಿ ಸಹಾಯಕ (ಗ್ರೇಡ್ -2) ಹುದ್ದೆಗೆ ಅರ್ಜಿದಾರರ ಉಮೇದುವಾರಿಕೆಯನ್ನು ಪರಿಗಣಿಸಲು ಮತ್ತು ಎರಡು ವಾರಗಳಲ್ಲಿ ಸೂಕ್ತ ಆದೇಶವನ್ನು ನೀಡುವಂತೆ ಸರ್ಕಾರಿ ಅಧಿಕಾರಿಗಳಿಗೆ ನಿರ್ದೇಶನ ನೀಡಿದ್ದರು. ನ್ಯಾಯಾಂಗ ನಿಂದನೆ ಪ್ರಕರಣದಲ್ಲಿ ಪ್ರತಿವಾದಿಗಳು ಸಲ್ಲಿಸಿದ ಅರ್ಜಿಗಳನ್ನು ಉಲ್ಲೇಖಿಸಿದ ನ್ಯಾಯಾಧೀಶರು, ಅವರು ಅಕ್ಟೋಬರ್ 22, 2019 ರಂದು ಈ ನ್ಯಾಯಾಲಯವು ನೀಡಿದ ಆದೇಶಗಳನ್ನು ಉಲ್ಲಂಘಿಸಿದ್ದಾರೆ ಎಂದು ಟೀಕಿಸಿದರು. ಹೈಕೋರ್ಟ್ ಆದೇಶವನ್ನು ಜಾರಿಗೊಳಿಸಲು ವಿಫಲರಾದ ಸಂಬಂಧಿತ ಅಧಿಕಾರಿಗಳ ವಿರುದ್ಧ ಅರ್ಜಿದಾರರು ನ್ಯಾಯಾಂಗ ನಿಂದನೆ ಪ್ರಕರಣ ದಾಖಲಿಸಿದ್ದರು.
ನ್ಯಾಯಾಲಯದ ಆದೇಶಗಳನ್ನು ಸಕಾಲದಲ್ಲಿ ಜಾರಿಗೊಳಿಸುವಲ್ಲಿ ಮೂವರು ಅಧಿಕಾರಿಗಳು ನಿರ್ಲಕ್ಷ್ಯ ವಹಿಸಿದ್ದಾರೆ ಎಂದು ನ್ಯಾಯಾಧೀಶರು ಅಭಿಪ್ರಾಯಪಟ್ಟರು. ನ್ಯಾಯಾಲಯದ ಆದೇಶಗಳನ್ನು ಪಾಲಿಸಲು ಏನಾದರೂ ತೊಂದರೆಯಾದಲ್ಲಿ ಅಧಿಕಾರಿಗಳು ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಬಹುದು. ಆದ್ರೆ ಪ್ರಸ್ತುತ ಪ್ರಕರಣದಲ್ಲಿ ಅಂತಹ ಯಾವುದೇ ಪ್ರಯತ್ನ ನಡೆದಿಲ್ಲ ಎಂದು ಅವರು ಸ್ಪಷ್ಟಪಡಿಸಿದರು.