ಅಮರಾವತಿ(ಆಂಧ್ರಪ್ರದೇಶ): ಮುಸ್ಲಿಮರ ಧಾರ್ಮಿಕ ಹಬ್ಬ ರಂಜಾನ್ ಆಚರಣೆಯ ಉಪವಾಸ ಆರಂಭಗೊಂಡಿದೆ. ಇದರ ಬೆನ್ನಲ್ಲೇ ಆಂಧ್ರಪ್ರದೇಶ ಮುಖ್ಯಮಂತ್ರಿ ವೈ.ಎಸ್.ಜಗನ್ಮೋಹನ್ ರೆಡ್ಡಿ ಮಹತ್ವದ ನಿರ್ಧಾರ ಕೈಗೊಂಡಿದ್ದಾರೆ. ರಂಜಾನ್ ಮಾಸದಲ್ಲಿ ರಾಜ್ಯದಲ್ಲಿ ಕೆಲಸ ಮಾಡುತ್ತಿರುವ ಮುಸ್ಲಿಂ ಉದ್ಯೋಗಿಗಳು ಒಂದು ಗಂಟೆ ಮುಂಚಿತವಾಗಿ ಕಚೇರಿ ಮತ್ತು ಶಾಲೆಗಳಿಂದ ಮನೆಗೆ ತೆರಳಲು ಸರ್ಕಾರ ಅನುಮತಿ ನೀಡಿದೆ.
ರಾಜ್ಯದ ಮುಖ್ಯ ಕಾರ್ಯದರ್ಶಿ ಡಾ. ಸಮೀರ್ ಶರ್ಮಾ ಇಂದು ಆದೇಶ ಹೊರಡಿಸಿದ್ದು, ರಾಜ್ಯದ ಎಲ್ಲ ಸರ್ಕಾರಿ ನೌಕರರು, ಶಿಕ್ಷಕರು, ಗುತ್ತಿಗೆ ಮತ್ತು ಹೊರಗುತ್ತಿಗೆಯಲ್ಲಿ ನೇಮಕಗೊಂಡ ವ್ಯಕ್ತಿಗಳು, ಇಸ್ಲಾಂ ಧರ್ಮ ಅನುಸರಿಸುತ್ತಿರುವವರು, ಸರ್ಕಾರಿ ಕೆಲಸದ ದಿನಗಳಲ್ಲಿ ಸಂಜೆ ಒಂದು ಗಂಟೆ ಮುಂಚಿತವಾಗಿ ತೆರಳಲು ಸರ್ಕಾರ ಅನುಮತಿ ನೀಡಿದೆ. ಈ ಆದೇಶ ಏಪ್ರಿಲ್ 03.04.2022ರಿಂದ 02.05.2022ವರೆಗೆ ಅನ್ವಯವಾಗಲಿದೆ ಎಂದು ತಿಳಿಸಿದ್ದಾರೆ.
ಇದೇ ರೀತಿಯ ನಿರ್ಧಾರವನ್ನು ದೆಹಲಿಯಲ್ಲೂ ಹೊರಡಿಸಲಾಗಿತ್ತು. ಆದರೆ, ತೀವ್ರವಾದ ವಿರೋಧ ವ್ಯಕ್ತವಾದ ಕಾರಣ ಮುಸ್ಲಿಂ ಸಿಬ್ಬಂದಿಗೆ ನೀಡಲಾಗಿದ್ದ 2 ಗಂಟೆಗಳ ವಿರಾಮ ನೀಡುವ ಆದೇಶವನ್ನು ಹಿಂಪಡೆದುಕೊಳ್ಳಲಾಗಿದೆ. ರಂಜಾನ್ ಇಸ್ಲಾಮಿಕ್ ಕ್ಯಾಲೆಂಡರ್‌ನ ಒಂಬತ್ತನೇ ತಿಂಗಳು. ಈ ಸಮಯದಲ್ಲಿ ಇಸ್ಲಾಂ ಧರ್ಮದ ಅನುಯಾಯಿಗಳು ಮುಂಜಾನೆ ಮತ್ತು ಸೂರ್ಯಾಸ್ತದ ನಡುವೆ ಉಪವಾಸ ಮಾಡುತ್ತಾರೆ.