ಮುಂಬೈ(ಮಹಾರಾಷ್ಟ್ರ): ಮಗಳ ಪ್ರೇಮ ಸಂಬಂಧಕ್ಕೆ ಆಕ್ಷೇಪ ವ್ಯಕ್ತಪಡಿಸಿದ್ದ ತಂದೆಯನ್ನು ಸ್ವಂತ ಮಗಳೇ ಅತ್ಯಾಚಾರದಂಥ ಗಂಭೀರ ಆರೋಪ ಹೊರಿಸಿ ಜೈಲಿಗಟ್ಟಿರುವ ಪ್ರಕರಣ ಮಹಾರಾಷ್ಟ್ರದಲ್ಲಿ ಬೆಳಕಿಗೆ ಬಂದಿದೆ. ನಿರಪರಾಧಿ ತಂದೆ ಸುಮಾರು ಐದೂವರೆ ವರ್ಷಗಳ ಕಾಲ ಜೈಲಿನಲ್ಲಿಯೇ ಕಾಲ ಕಳೆದಿದ್ದಾರೆ. ಈ ಪ್ರಕರಣದ ವಿಚಾರಣೆ ನಡೆಸಿದ ಕೋರ್ಟ್ ಇದೀಗ ತಂದೆಯನ್ನು ದೋಷಮುಕ್ತಗೊಳಿಸಿದೆ.
ಪ್ರಕರಣದ ಸಂಪೂರ್ಣ ವಿವರ: 14 ವರ್ಷದ ಬಾಲಕಿ ಸರ್ಕಾರಿ ಶಾಲೆಯಲ್ಲಿ 7ನೇ ತರಗತಿಯಲ್ಲಿ ಓದುತ್ತಿದ್ದಳು. ತಂದೆ, ತಾಯಿ, ಇಬ್ಬರು ಕಿರಿ ಸಹೋದರಿಯರು, ಮತ್ತಿಬ್ಬರು ಸಹೋದರರೊಂದಿಗೆ ವಾಸಿಸುತ್ತಿದ್ದಳು. 2017ರ ಮಾರ್ಚ್ 5ರಂದು ತನ್ನ ಮೇಲೆ ಲೈಂಗಿಕ ದೌರ್ಜನ್ಯ ನಡೆದಿದೆ ಎಂದು ಶಾಲೆಯ ಶಿಕ್ಷಕರ ಮುಂದೆ ಅಳಲು ತೋಡಿಕೊಂಡಿದ್ದಾಳೆ. 2016ರ ಜನವರಿಯಿಂದ 2017ರ ಮಾರ್ಚ್ವರೆಗೂ ತನ್ನ ಮೇಲೆ ಪ್ರತೀ ತಿಂಗಳು ಮೂರ್ನಾಲ್ಕು ಸಲ ತಂದೆಯೇ ಅತ್ಯಾಚಾರ ಮಾಡಿದ್ದಾರೆ ಎಂದು ದೂರಿದ್ದಳು.
ಬಾಲಕಿ ಈ ರೀತಿ ಆರೋಪ ಮಾಡುತ್ತಿದ್ದಂತೆ ಶಿಕ್ಷಕರು ಮಹಿಳಾ ಸ್ವಯಂಸೇವಾ ಸಂಸ್ಥೆಗೆ ಮಾಹಿತಿ ನೀಡಿದ್ದಾರೆ. ಇದಕ್ಕೆ ಸಂಬಂಧಿಸಿದಂತೆ ಅಂಧೇರಿಯಲ್ಲಿರುವ ಡಿ.ಎನ್.ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣವೂ ದಾಖಲಾಗಿತ್ತು. ಮಹಿಳಾ ಪೊಲೀಸ್ ಸಬ್ ಇನ್ಸ್ಪೆಕ್ಟರ್ ಶಾಲೆಗೆ ತೆರಳಿ ಬಾಲಕಿ ಹಾಗೂ ಶಿಕ್ಷಕಿಯ ಹೇಳಿಕೆ ದಾಖಲಿಸಿಕೊಂಡಿದ್ದರು. ಬಾಲಕಿಗೆ ವೈದ್ಯಕೀಯ ಪರೀಕ್ಷೆ ನಡೆಸಿದ ಪೊಲೀಸರು ಮಾರ್ಚ್ 2017ರಲ್ಲಿ ಎಫ್ಐಆರ್ ದಾಖಲಿಸಿ ತಂದೆಯನ್ನು ಬಂಧಿಸಿದ್ದಾರೆ. ಪ್ರಕರಣದ ತನಿಖೆ ನಡೆಸಿ ಕೋರ್ಟ್‌ಗೆ ಚಾರ್ಜ್ಶೀಟ್ ಸಲ್ಲಿಸಲಾಗಿತ್ತು. ಪ್ರಕರಣದ ಸುದೀರ್ಘ ವಿಚಾರಣೆ ನಡೆಸಿದ ಮಹಾರಾಷ್ಟ್ರ ವಿಶೇಷ ಪೋಕ್ಸೊ ನ್ಯಾಯಾಲಯ ಇದೀಗ ಆರೋಪಿ ತಂದೆಯನ್ನು ದೋಷಮುಕ್ತಗೊಳಿಸಿ ಜೈಲಿನಿಂದ ಬಿಡುಗಡೆಗೊಳಿಸಿ ಆದೇಶಿಸಿದೆ.
ಇದನ್ನೂ ಓದಿ: ಜೈಲೊಳಗೆ ಗಂಡ, ಪತ್ನಿ ಮಡಿಲಲ್ಲಿ ಅಸುನೀಗಿದ ಕಂದ: ಜೈಲಿನ ಮುಂದೆ 7 ಗಂಟೆ ಆಕ್ರಂದನ
ಬಾಲಕಿ ಓರ್ವ ಯುವಕನೊಂದಿಗೆ ಅಕ್ರಮ ಸಂಬಂಧ ಹೊಂದಿದ್ದಳಂತೆ. ಇದಕ್ಕೆ ತಂದೆ ತೀವ್ರ ವಿರೋಧ ವ್ಯಕ್ತಪಡಿಸಿದ್ದರು. ಹೀಗಾಗಿ, ತಂದೆಯ ಮೇಲೆಯೇ ಅತ್ಯಾಚಾರದಂಥ ಸುಳ್ಳು ಆರೋಪ ಹೊರಿಸಿರುವುದು ಕೋರ್ಟ್ ವಿಚಾರಣೆಯ ವೇಳೆ ಸಾಬೀತಾಗಿದೆ. ಬಾಲಕಿಯ ಮಾನಸಿಕ ಪರಿಸ್ಥಿತಿ ಚೆನ್ನಾಗಿಲ್ಲ ಎಂಬ ಅಂಶವೂ ಈ ಸಂದರ್ಭದಲ್ಲಿ ಬೆಳಕಿಗೆ ಬಂದಿದೆ. ಮುಖ್ಯವಾಗಿ, ದೈಹಿಕ ಪರೀಕ್ಷೆಯ ವೇಳೆ ಅಧಿಕಾರಿಗಳು, ಬಾಲಕಿಯ ಮೇಲೆ ತಂದೆಯಿಂದಲೇ ಲೈಂಗಿಕ ಸಂಭೋಗ ನಡೆದಿದೆ ಎಂದು ಸಾಬೀತುಪಡಿಸಲು ಅಗತ್ಯ ಪುರಾವೆಗಳು ಸಿಕ್ಕಿಲ್ಲ ಎಂದು ಕೋರ್ಟ್‌ಗೆ ತಿಳಿಸಿದ್ದಾರೆ.
ಪೋಕ್ಸೋ ಕೋರ್ಟ್ ನ್ಯಾಯಾಧೀಶ ಶ್ರೀಕಾಂತ್ ಭೋಸ್ಲೆ ತಮ್ಮ ಆದೇಶದಲ್ಲಿ, ಬಾಲಕಿ ಮೇಲೆ ತಂದೆಯಿಂದಲೇ ಅತ್ಯಾಚಾರ ನಡೆದಿದೆ ಎಂಬುದಕ್ಕೆ ಅಗತ್ಯ ದಾಖಲೆಗಳಿಲ್ಲ. ಹಾಗಾಗಿ, ಆರೋಪಿ ತಂದೆ ದೋಷಮುಕ್ತರಾಗಲು ಅರ್ಹರು ಎಂದು ಉಲ್ಲೇಖಿಸಿದ್ದಾರೆ. ಇದರ ಜೊತೆಗೆ, ತಕ್ಷಣವೇ ಅವರನ್ನು ಜೈಲಿನಿಂದ ಬಿಡುಗಡೆ ಮಾಡಲು ಆದೇಶಿಸಿದ್ದಾರೆ.