ಗಾಜಿಯಾಬಾದ್/ನವದೆಹಲಿ: ಅಫ್ಘಾನಿಸ್ತಾನವನ್ನು ಕಪಿಮುಷ್ಠಿಗೆ ತೆಗೆದುಕೊಂಡಿರುವ ತಾಲಿಬಾನ್ ಉಗ್ರರಿಂದ ಅಲ್ಲಿ ಸಿಲುಕಿದ್ದ 107 ಭಾರತೀಯ ಪ್ರಜೆಗಳು ಸೇರಿದಂತೆ 168 ಮಂದಿಯನ್ನು ಇಂದು ಭಾರತಕ್ಕೆ ಕರೆತರಲಾಗಿದೆ. ಈ ಪೈಕಿ ಪುಟ್ಟ ಮಗುವೊಂದನ್ನು ಪಾಸ್‌ಪೋರ್ಟ್ ಇಲ್ಲದೆಯೇ ಕರೆ ತರಲಾಗಿದೆ ಎಂದು ವಿಮಾನಯಾನ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಈ ಕಂದಮ್ಮಳ ವಿಡಿಯೋ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ.
ಕಾಬೂಲ್ನಿಂದ ಭಾರತೀಯ ವಾಯುಪಡೆಯ (ಐಎಎಫ್) ಸಿ -17 ವಿಮಾನದಲ್ಲಿ 168 ಮಂದಿ ಗಾಜಿಯಾಬಾದ್ನ ಹಿಂಡನ್ ವಿಮಾನ ನಿಲ್ದಾಣಕ್ಕೆ ಬಂದಿಳಿದಿದ್ದಾರೆ. ಇವರನ್ನು ಬೇರೆಡೆಗೆ ಸ್ಥಳಾಂತರಿಸುವ ಮೊದಲು ಎಲ್ಲರನ್ನೂ ಏರ್ಪೋರ್ಟ್ನಲ್ಲೇ ಕೋವಿಡ್ ಆರ್‌ಟಿಪಿಸಿಆರ್ ಪರೀಕ್ಷೆಗೆ ಒಳಪಡಿಸಲಾಗುತ್ತಿದೆ.
ಇದನ್ನೂ ಓದಿ: Watch - 'ಈಗೆಲ್ಲಾ ಬರೀ ಶೂನ್ಯ'.. ಭಾರತಕ್ಕೆ ಬಂದಿಳಿದ ಅಫ್ಘಾನಿಸ್ತಾನ ಸಂಸದನ ಕಣ್ಣೀರು
ಅಲ್ಲದೇ ಮುಂಜಾಗ್ರತ ಕ್ರಮವಾಗಿ ಅಫ್ಘಾನಿಸ್ತಾನದಿಂದ ಈಗಾಗಲೇ ಬಂದ ಹಾಗೂ ಬರುತ್ತಿರುವ ಪ್ರತಿಯೊಬ್ಬರಿಗೂ ಉಚಿತವಾಗಿ ಪೋಲಿಯೋ ಲಸಿಕೆ ಹಾಕಲಾಗುತ್ತಿದೆ ಎಂದು ಟ್ವೀಟ್ ,ಆಡಿರುವ ಕೇಂದ್ರ ಆರೋಗ್ಯ ಸಚಿವ ಮನ್ಸುಖ್ ಮಾಂಡವಿಯಾ, ದೆಹಲಿಯ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಪೋಲಿಯೋ ಲಸಿಕೆ ಹಾಕುತ್ತಿರುವ ಫೋಟೋವೊಂದನ್ನು ಹಂಚಿಕೊಂಡಿದ್ದಾರೆ.