ಥಾಣೆ(ಮಹಾರಾಷ್ಟ್ರ): ಉಪಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಅವರ ಪತ್ನಿ ಅಮೃತಾ ಫಡ್ನವೀಸ್‌ಗೆ ಲಂಚ ನೀಡಿ ಬ್ಲಾಕ್‌ಮೇಲ್ ಮಾಡಲು ಯತ್ನಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಫ್ಯಾಷನ್ ಡಿಸೈನರ್ ಅನಿಕ್ಷಾ ಜಯಸಿಘಾನಿ ಅವರನ್ನು ಉಲ್ಲಾಸನಗರದಲ್ಲಿ ಮುಂಬೈ ಪೊಲೀಸರ ತಂಡ ಬಂಧಿಸಿ ವಿಚಾರಣೆಗೆ ಒಳಪಡಿಸಿದೆ. ಅಲ್ಲದೇ ಅಂತಾರಾಷ್ಟ್ರೀಯ ಕ್ರಿಕೆಟ್ ಬುಕ್ಕಿ ಅನಿಲ್ ಜಯಸಿಘಾನಿ ಅವರ ಮನೆ ಮೇಲೆ ಕೂಡ ದಾಳಿ ನಡೆಸಿದೆ.
![amrita-fadnavis-threat-and-blackmail-case-accused-fashion-designer-arrested](https://etvbharatimages.akamaized.net/etvbharat/prod-images/18005589_thumb.png)
ಬುಕ್ಕಿ ಅನಿಲ್ ಪುತ್ರಿಯಾದ ಫ್ಯಾಷನ್ ಡಿಸೈನರ್ ಅನಿಕ್ಷಾ ಜಯಸಿಘಾನಿ, ಅಮೃತ ಫಡ್ನವೀಸ್ ಅವರಿಗೆ, ತನ್ನ ತಂದೆ ಮೇಲೆ ಇರುವ ಪೊಲೀಸ್ ಪ್ರಕರಣಕ್ಕೆ ಸಂಬಂಧಿಸಿದಂತೆ ಮಧ್ಯ ಪ್ರವೇಶಿಸುವಂತೆ ಬ್ಲಾಕ್‌ಮೇಲ್ ಮಾಡಿದ ಆರೋಪ ಎದುರಿಸುತ್ತಿದ್ದಾರೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಮುಂಬೈ ಪೊಲೀಸರು, ಅನಿಕ್ಷಾಳನ್ನು ಬಂಧಿಸಿದ್ದಾರೆ.
ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಅಮೃತ ಫಡ್ನವೀಸ್, ಫ್ಯಾಷನ್ ಡಿಸೈನರ್ ಅನಿಕ್ಷಾ ವಿರುದ್ದ ಬ್ಲಾಕ್ ಮೇಲ್ ಮಾಡುತ್ತಿದ್ದಾರೆ ಎಂದು ಆರೋಪಿಸಿ ದೂರು ನೀಡಿದ್ದರು. ಈ ದೂರಿನ ಮೇರೆಗೆ ಕಳೆದ ತಿಂಗಳ ಫೆಬ್ರವರಿ 20 ರಂದು ಮಲಬಾರ್ ಹಿಲ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ತಂದೆ ಹಾಗೂ ಮಗಳ ವಿರುದ್ದ ಪ್ರಕರಣ ದಾಖಲಾಗಿತ್ತು. ಆದರೆ ಇದುವರೆಗೂ ಯಾರನ್ನು ಬಂಧಿಸಿಲ್ಲ ಎಂದು ಪೋಲಿಸ್ ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ.
ಪ್ರಕರಣ ಹಿನ್ನೆಲೆ ಏನು? ಎಫ್ ಐಆರ್ನಲ್ಲಿ ಹೇಳಿರುವುದೇನು?: ’’ಮೂಲತಃ ಫ್ಯಾಷನ್ ಡಿಸೈನರ್ ಆಗಿರುವ ಅನಿಕ್ಷಾ ಜಯಸಿಘಾನಿ ನಾನು ಡಿಸೈನ್ ಮಾಡಿರುವ ಉಡುಗೆ, ಆಭರಣ, ಪಾದರಕ್ಷೆಗಳನ್ನು ಧರಿಸಿ ಆ ಮೂಲಕ ತಮ್ಮ ಉತ್ಪನ್ನಗಳನ್ನು ಪ್ರಚಾರ ಮಾಡಬೇಕು ಎಂದು ಅಮೃತಾ ಫಡ್ನವೀಸ್‌ಗೆ ಮನವಿ ಮಾಡಿದ್ದರು. ಹಾಗೂ ತಾನು ತಾಯಿಯನ್ನು ಕಳೆದುಕೊಂಡಿದ್ದು, ಕುಟುಂಬದ ಹಣಕಾಸು ನಿರ್ವಹಣೆಯನ್ನು ನಾನೇ ನಿಭಾಯಿಸುತ್ತಿರುವುದಾಗಿ ಹೇಳಿಕೊಂಡಿದ್ದರು. ಇನ್ನು ಗಾಯಕಿ, ಸಾಮಾಜಿಕ ಕಾರ್ಯಕರ್ತೆ ಹಾಗೂ ಭಾರತೀಯ ಬ್ಯಾಂಕರ್ ಆಗಿರುವ ಅಮೃತಾ ಫಡ್ನವೀಸ್, ಸಾಮಾಜಿಕ ಜಾಲತಾಣದಲ್ಲಿ ಜನಪ್ರಿಯತೆ ಗಳಿಸಿರುವ ಕಾರಣದಿಂದಾಗಿ ಅಮೃತಾ ಅವರ ವಿಶ್ವಾಸವನ್ನು ಅನಿಕ್ಷಾ ಗಳಿಸಿದ್ದರು‘‘ ಎಂದು ಪಡ್ನವಿಸ್ ಪತ್ನಿ ಅಮೃತಾ ತಾವು ನೀಡಿದ ದೂರಿನಲ್ಲಿ ವಿವರಿಸಿದ್ದಾರೆ.
ಹೀಗೆ ವಿಶ್ವಾಸ ಗಳಿಸಿಕೊಂಡಿದ್ದ ಅನಿಕ್ಷಾ, ಬಳಿಕ ಕೆಲ ಬುಕ್ಕಿಗಳ ಬಗ್ಗೆ ಮಾಹಿತಿಗಳನ್ನು ನೀಡಿ ಆ ಮೂಲಕ ಹಣ ಗಳಿಸಬಹುದು ಎಂದು ಅಮೃತಾ ಅವರ ಬಳಿ ಮಾಹಿತಿ ಹಂಚಿಕೊಂಡಿದ್ದರು. ಅಷ್ಟಕ್ಕೆ ಸುಮ್ಮನಾಗದ ಅನಿಕ್ಷಾ, ಅಮೃತಾ ಅವರಿಗೆ 1 ಕೋಟಿ ರೂಪಾಯಿ ಹಣದ ಆಮಿಷವೊಡ್ಡಿದ್ದರು. ಈ ಮೂಲಕ ತನ್ನ ತಂದೆಯನ್ನು ಪೊಲೀಸ್ ಪ್ರಕರಣಗಳಿಂದ ಪಾರು ಮಾಡಲು ಸಹಾಯ ಮಾಡುವಂತೆ ಅನಿಕ್ಷಾ ಅಮೃತಾ ಅವರನ್ನು ಒತ್ತಾಯಿಸಿದ್ದರು. ಅನಿಕ್ಷಾಳ ನಡೆಯಿಂದ ಬೇಸರಗೊಂಡ ಅಮೃತಾ ಫಡ್ನವಿಸ್ ಆಕೆಯ ನಂಬರ್ ಬ್ಲಾಕ್ ಕೂಡಾ ಮಾಡಿದ್ದರು. ಆದರೆ ಅನಿಕ್ಷಾ ಮತ್ತು ಆಕೆಯ ತಂದೆ ಅಮೃತಾ ಫಡ್ನವಿಸ್‌ಗೆ ಮತ್ತೊಂದು ನಂಬರ್‌ನಿಂದ ಧ್ವನಿ ಸಂದೇಶಗಳು ಮತ್ತು ವಿಡಿಯೊ ಕ್ಲಿಪ್‌ಗಳ ಮೂಲಕ ಬೆದರಿಕೆ ಹಾಕಿದ್ದರು ಎಂದು ಎಫ್‌ಐಆರ್‌ನಲ್ಲಿ ಹೇಳಲಾಗಿದೆ.
ಡಿಸಿಎಂ ಪತ್ನಿ ನೀಡಿದ ದೂರಿನ ಆಧಾರದ ಮೇಲೆ ಥಾಣೆ ಪೊಲೀಸರು, ಆರೋಪಿಯನ್ನು ಬಂಧಿಸಿ ತನಿಖೆ ನಡೆಸುತ್ತಿದ್ದಾರೆ. ವಿಚಾರಣೆ ಬಳಿಕವೇ ಪ್ರಕರಣದ ಸಂಪೂರ್ಣ ಸತ್ಯಾಂಶ ಹೊರ ಬರಬೇಕಿದೆ.
ಇದನ್ನೂ ಓದಿ : ವಿಧಾನಸೌಧದಲ್ಲಿ ಅಜಿತ್ ಪವಾರ್ ಕ್ಷಮೆ ಕೇಳಿದ ದೇವೇಂದ್ರ ಫಡ್ನವೀಸ್: ಕಾರಣವೇನು ಗೊತ್ತಾ?