ಹೈದರಾಬಾದ್ (ತೆಲಂಗಾಣ): ಕೇಂದ್ರ ಗೃಹ ಸಚಿವ ಅಮಿತ್ ಶಾ ಇದೇ 15 ರಂದು ತೆಲಂಗಾಣ ರಾಜ್ಯದ ಪ್ರವಾಸ ಕೈಗೊಳ್ಳಲಿದ್ದಾರೆ. ಖಮ್ಮಂ ಪಟ್ಟಣದಲ್ಲಿ ಮಹಾಜನ ಸಂಪರ್ಕ ಅಭಿಯಾನ ಕಾರ್ಯಕ್ರಮ ಹಮ್ಮಿಕೊಂಡಿದ್ದು ಬೃಹತ್ ಸಾರ್ವಜನಿಕ ಸಭೆಯಲ್ಲಿ ಭಾಗವಹಿಸಿ ಭಾಷಣ ಮಾಡಲಿದ್ದಾರೆ. ಈ ಭೇಟಿಗೂ ಮುನ್ನ ಅವರು ಖ್ಯಾತ ಟಾಲಿವುಡ್ ಚಿತ್ರ ನಿರ್ದೇಶಕ ಎಸ್.ಎಸ್.ರಾಜಮೌಳಿ ಅವರನ್ನು ಕಾಣಲಿದ್ದಾರೆ ಎಂಬ ಸುದ್ದಿ ಇದೆ.
14 ರಂದು ಮಧ್ಯಾಹ್ನ 12 ಗಂಟೆಗೆ ವಿಶೇಷ ವಿಮಾನದ ಮೂಲಕ ನವದೆಹಲಿಯಿಂದ ನೇರವಾಗಿ ಶಂಶಾಬಾದ್ ವಿಮಾನ ನಿಲ್ದಾಣಕ್ಕೆ ಆಗಮಿಸಲಿರುವ ಅಮಿತ್ ಶಾ, ಅದೇ ದಿನ ಶಂಶಾಬಾದ್ನ ನೊವಾಟೆಲ್ ಹೋಟೆಲ್ನಲ್ಲಿ ವಾಸ್ತವ್ಯ ಹೂಡಲಿದ್ದಾರೆ. ಮರುದಿನ 15 ರಂದು ಮಹಾಜನ ಸಂಪರ್ಕ ಅಭಿಯಾನದ ಅಂಗವಾಗಿ ಖಮ್ಮಂ ಜಿಲ್ಲಾ ಕೇಂದ್ರದಲ್ಲಿ ಸಾರ್ವಜನಿಕ ಸಭೆ ನಡೆಯಲಿದ್ದು ಈ ಕಾರ್ಯಕ್ರಮದಲ್ಲಿ ಭಾಗಿಯಾಗಲಿದ್ದಾರೆ.
ಇದನ್ನೂ ಓದಿ: ಆರ್ಆರ್ಆರ್ ಖ್ಯಾತಿಯ ನಟ ರಾಮ್ ಚರಣ್,ಚಿರಂಜೀವಿ ಭೇಟಿ ಮಾಡಿದ ಅಮಿತ್ ಶಾ
ಅದಕ್ಕೂ ಮುನ್ನ, ಬೆಳಗ್ಗೆ 10 ಗಂಟೆಗೆ ಪಕ್ಷದ ಮುಖಂಡರೊಂದಿಗೆ ಮಹತ್ವದ ಸಭೆ ನಡೆಸಲಿದ್ದಾರೆ. ಈ ಸಭೆಯಲ್ಲಿ ತೆಲಂಗಾಣ ರಾಜ್ಯದ ಇತ್ತೀಚಿನ ರಾಜಕೀಯ ಚಟುವಟಿಕೆ ಹಾಗೂ ಬೆಳವಣಿಗೆಗಳ ಬಗ್ಗೆ ಚರ್ಚೆ ಮಾಡಲಿದ್ದಾರೆ. ಬಳಿಕ ನಿರ್ದೇಶಕ ರಾಜಮೌಳಿ ಅವರೊಂದಿಗೆ ವಿಶೇಷ ಸಭೆ ಕೂಡ ನಡೆಸಲಿದ್ದಾರಂತೆ. ಅಮಿತ್ ಶಾ ಅವರೇ ರಾಜಮೌಳಿ ಅವರ ನಿವಾಸಕ್ಕೆ ತೆರಳಿ ಭೇಟಿ ಮಾಡಲಿದ್ದಾರಂತೆ. ಹಾಗಾಗಿ ಈ ಸಭೆ ರಾಜಕೀಯ ವಲಯ ಹಾಗೂ ಟಾಲಿವುಡ್ನಲ್ಲಿ ಚರ್ಚೆಗೆ ದಾರಿ ಮಾಡಿಕೊಟ್ಟಿದೆ. ಆಂಧ್ರ ಜ್ಯೋತಿ ಪತ್ರಿಕೆಯ ಎಂಡಿ ವೇಮುರಿ ರಾಧಾಕೃಷ್ಣ ಅವರನ್ನೂ ಶಾ ಭೇಟಿ ಮಾಡಲಿದ್ದಾರೆ.
ಅಂದು ಮಧ್ಯಾಹ್ನ 12.45 ರಿಂದ 2 ಗಂಟೆಯವರೆಗೆ ಶಂಶಾಬಾದ್ ಜೆಡಿಯು ಕನ್ವೆನ್ಷನ್ ಹಾಲ್‌ನಲ್ಲಿ ಬಿಜೆಪಿ ಮುಖಂಡರೊಂದಿಗೆ ಸಭೆ ನಡೆಯಲಿದೆ. ಬರುವ ದಿನಗಳಲ್ಲಿ ತೆಲಂಗಾಣದಲ್ಲಿ ಬಿಜೆಪಿ ಪಕ್ಷವನ್ನು ಅಧಿಕಾರಕ್ಕೆ ತರುವ ಬಗ್ಗೆ ಚರ್ಚೆ ಮಾಡಲಿದ್ದಾರೆ. ಪಕ್ಷ ಅಧಿಕಾರಕ್ಕೆ ಬರಲು ಏನೆಲ್ಲ ಸಿದ್ಧತೆ ಮಾಡಿಕೊಳ್ಳಬೇಕು ಎಂಬುದರ ಕುರಿತು ಕೂಡ ನಿರ್ದೇಶನ ನೀಡಲಾಗುತ್ತದೆ ಎಂದು ಹೇಳಲಾಗುತ್ತಿದೆ.
ಈ ಸಭೆಯ ಬಳಿಕ ಅಮಿತ್ ಶಾ ವಿಶೇಷ ಹೆಲಿಕಾಪ್ಟರ್‌ನಲ್ಲಿ ಭದ್ರಾಚಲಂಗೆ ತೆರಳಲಿದ್ದು ಅಲ್ಲಿ ಭದ್ರಾದ್ರಿ ಸೀತಾರಾಮರ ದರ್ಶನ ಪಡೆದು ವಿಶೇಷ ಪೂಜೆ ಸಲ್ಲಿಸುವರು. ಸಂಜೆ 6ರಿಂದ 7ರ ವರೆಗೆ ಖಮ್ಮಂ ಪಟ್ಟಣದಲ್ಲಿ ಬೃಹತ್ ಬಹಿರಂಗ ಸಭೆ ನಡೆಯಲಿದ್ದು ಅಮಿತ್ ಶಾ ಮುಖ್ಯ ಅತಿಥಿಯಾಗಿ ಭಾಗವಹಿಲಿದ್ದಾರೆ. ಸಭೆಯಲ್ಲಿ ಪಕ್ಷದ ಮುಂದಿನ ಗುರಿಗಳ ಬಗ್ಗೆ ಮಾತನಾಡಲಿದ್ದಾರೆ. ಬಳಿಕ ರಸ್ತೆ ಮಾರ್ಗವಾಗಿ ವಿಜಯವಾಡ ವಿಮಾನ ನಿಲ್ದಾಣ ತಲುಪಲಿರುವ ಕೇಂದ್ರ ಗೃಹ ಸಚಿವರು ಅಲ್ಲಿಂದ ವಿಶೇಷ ವಿಮಾನದಲ್ಲಿ ಅಹಮದಾಬಾದ್ಗೆ ತೆರಳಲಿದ್ದಾರೆ.
ಇದನ್ನೂ ಓದಿ: Amit Shah.. ಭವಿಷ್ಯದಲ್ಲಿ ತಮಿಳರನ್ನು ಪ್ರಧಾನಿಯಾಗಿಸುವ ಸಂಕಲ್ಪ ಮಾಡಬೇಕು : ಚೆನ್ನೈನಲ್ಲಿ ಅಮಿತ್ ಶಾ ಕರೆ
ರಾಜಮೌಳಿ ನಿರ್ದೇಶನದಲ್ಲಿ ಇತ್ತೀಚೆಗೆ ತೆರೆಕಂಡ ಆರ್ಆರ್ಆರ್ ಚಿತ್ರ ಹಣ ಗಳಿಕೆಯಲ್ಲಿ ದಾಖಲೆ ಬರೆಯಿತು. ಚಿತ್ರದ 'ನಾಟು ನಾಟು' ಸಾಂಗ್ಗೆ ಆಸ್ಕರ್ ಪ್ರಶಸ್ತಿ ಕೂಡ ಅಭಿಸಿತು. ರಾಜಮೌಳಿ ಅವರು ಭಾರತ ಚಿತ್ರರಂಗದ ಖ್ಯಾತ ನಿರ್ದೇಶಕರದಲ್ಲಿ ಒಬ್ಬರಾಗಿದ್ದು ತಮ್ಮದೇ ಅಭಿಮಾನಿ ಬಳಗ ಹೊಂದಿದ್ದಾರೆ. ಆಸ್ಕರ್ ಪ್ರಶಸ್ತಿ ಲಭಿಸಿದ ಬಳಿಕ ಇತ್ತೀಚೆಗೆ ಅಮಿತ್ ಶಾ ನವದೆಹಲಿಯಲ್ಲಿ RRR ಖ್ಯಾತಿಯ ನಟ ರಾಮ್ ಚರಣ್ ಮತ್ತು ಅವರ ತಂದೆ ಚಿರಂಜೀವಿ ಅವರನ್ನು ಭೇಟಿಯಾಗಿದ್ದರು. 'ನಾಟು ನಾಟು' ಸಾಂಗ್ಗೆ ಆಸ್ಕರ್ ಪ್ರಶಸ್ತಿ ಸಿಕ್ಕಿರುವುದರಿಂದ ಅಭಿನಂದನೆ ಕೂಡ ಸಲ್ಲಿಸಿದ್ದರು.