ನವದೆಹಲಿ: ಕೇಂದ್ರ ಗೃಹ ಸಚಿವ ಅಮಿತ್ ಶಾ ನೇತೃತ್ವದಲ್ಲಿ ಶನಿವಾರ ಜೈಪುರದಲ್ಲಿ ನಡೆಯಲಿರುವ ಉತ್ತರ ವಲಯ ಕೌನ್ಸಿಲ್ ಸಭೆಯಲ್ಲಿ ಏಳು ರಾಜ್ಯಗಳು ಭಾಗವಹಿಸಲಿವೆ. ಆಂತರಿಕ ಭದ್ರತೆ, ಕಾನೂನು ಮತ್ತು ಸುವ್ಯವಸ್ಥೆ ಮತ್ತು ರಾಜ್ಯಗಳಿಗೆ ಸಂಬಂಧಿಸಿದ ವಿಷಯಗಳನ್ನು ಸಭೆಯಲ್ಲಿ ಚರ್ಚಿಸಲಾಗುವುದು ಎಂದು ಗೃಹ ಸಚಿವಾಲಯದ ಹಿರಿಯ ಅಧಿಕಾರಿಯೊಬ್ಬರು ಶುಕ್ರವಾರ ETV ಭಾರತ್‌ಗೆ ತಿಳಿಸಿದ್ದಾರೆ.
ಗಡಿ ಭದ್ರತೆ, ಸೈಬರ್ ಅಪರಾಧ, ಸಾಮೂಹಿಕ ಕಾರ್ಯಪಡೆಯ ರಚನೆ, ಗಡಿಯಾಚೆಗಿನ ಮಾದಕವಸ್ತು ವ್ಯಾಪಾರ ಹಾಗೂ ಮಹಿಳೆಯರ ಮೇಲಿನ ಅಪರಾಧ ಘಟನೆಗಳ ಬಗ್ಗೆಯೂ ಸಭೆಯಲ್ಲಿ ಚರ್ಚಿಸಲಾಗುವುದು. ಹೆಚ್ಚುತ್ತಿರುವ ಮಾದಕ ದ್ರವ್ಯ ಸೇವನೆ ಮತ್ತು ಮಾದಕ ದ್ರವ್ಯ ಕಳ್ಳಸಾಗಣೆ ಘಟನೆಗಳ ಬಗ್ಗೆಯೂ ಸಭೆಯಲ್ಲಿ ಚರ್ಚಿಸಲಾಗುವುದು ಎಂದು ಗೃಹ ಸಚಿವಾಲಯದ ಅಧಿಕಾರಿಗಳು ಹೇಳಿದರು.
ವಿವಿಧ ಅಂತಾರಾಷ್ಟ್ರೀಯ ಗಡಿಗಳಿಂದ ಭಾರತದೊಳಕ್ಕೆ ಮಾದಕವಸ್ತುಗಳ ಕಳ್ಳಸಾಗಣೆ ಹೆಚ್ಚುತ್ತಿರುವ ಘಟನೆಗಳ ಬಗ್ಗೆ ಗೃಹ ಸಚಿವ ಶಾ ಈಗಾಗಲೇ ತಮ್ಮ ಕಳವಳ ವ್ಯಕ್ತಪಡಿಸಿದ್ದಾರೆ. ವಿವಿಧ ರಾಜ್ಯಗಳಲ್ಲಿ ಚಾಲ್ತಿಯಲ್ಲಿರುವ ಪ್ರಸ್ತುತ ಪರಿಸ್ಥಿತಿ, ವಿಶೇಷವಾಗಿ 'ದ್ವೇಷ ಹತ್ಯೆ' ಘಟನೆಗಳ ಬಗ್ಗೆಯೂ ಸಭೆಯಲ್ಲಿ ಚರ್ಚಿಸುವ ಸಾಧ್ಯತೆಯಿದೆ ಎಂದು ಮೂಲಗಳು ತಿಳಿಸಿವೆ.
ಮಹತ್ವ ಪಡೆದುಕೊಂಡ ಸಭೆ.. ಕಾರಣ? ಪಕ್ಷದಿಂದ ಅಮಾನತುಗೊಂಡಿರುವ ಬಿಜೆಪಿ ವಕ್ತಾರೆ ನೂಪುರ್ ಶರ್ಮಾ ಅವರನ್ನು ಬೆಂಬಲಿಸಿ ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಮಾಡಿದ ಆರೋಪದ ಮೇಲೆ ಇಬ್ಬರನ್ನು ಹತ್ಯೆಗೈದ ಎರಡು ಭಯಾನಕ ಘಟನೆಗಳ ಹಿನ್ನೆಲೆಯಲ್ಲಿ ಈ ಸಭೆ ಮಹತ್ವ ಪಡೆದುಕೊಂಡಿದೆ. ಉದಯಪುರದಲ್ಲಿ ಕನ್ಹಯ್ಯ ಲಾಲ್ ಎಂಬ ಟೈಲರ್ನನ್ನು ಶಿರಚ್ಛೇದ ಮಾಡಲಾಗಿದ್ದು, ಅಮರಾವತಿಯಲ್ಲಿ ಫಾರ್ಮಾಸಿಸ್ಟ್ ಆಗಿದ್ದ ಉಮೇಶ್ ಕೊಲ್ಹೆ ಎಂಬುವರ ಕೊಲೆ ಮಾಡಲಾಗಿದ್ದನ್ನು ಇಲ್ಲಿ ಸ್ಮರಿಸಬಹುದು.
"ರಾಜಸ್ಥಾನ ಮುಖ್ಯಮಂತ್ರಿಗಳು ಮತ್ತು ಜಮ್ಮು ಮತ್ತು ಕಾಶ್ಮೀರ ಗವರ್ನರ್ ಲೆಫ್ಟಿನೆಂಟ್ ಜನರಲ್ ಮನೋಜ್ ಸಿನ್ಹಾ ಇಬ್ಬರೂ ತಮ್ಮ ರಾಜ್ಯಗಳಲ್ಲಿನ ಕಾನೂನು ಮತ್ತು ಸುವ್ಯವಸ್ಥೆ ಪರಿಸ್ಥಿತಿಯ ಬಗ್ಗೆ ವರದಿ ನೀಡುವ ಸಾಧ್ಯತೆಯಿದೆ" ಎಂದು ಗೃಹ ಸಚಿವಾಲಯದ ಅಧಿಕಾರಿಗಳು ತಿಳಿಸಿದ್ದಾರೆ.
ಜೈಪುರದ ರಾಮ್ ಬಾಗ್ ಅರಮನೆಯಲ್ಲಿ ನಡೆಯಲಿರುವ ಸಭೆಯಲ್ಲಿ ರಾಜಸ್ಥಾನ, ಹರಿಯಾಣ, ಹಿಮಾಚಲ ಪ್ರದೇಶ, ಪಂಜಾಬ್, ದೆಹಲಿ ಮುಖ್ಯಮಂತ್ರಿಗಳು ಮತ್ತು ಜಮ್ಮು ಮತ್ತು ಕಾಶ್ಮೀರ ಹಾಗೂ ಲಡಾಖ್‌ನ ಲೆಫ್ಟಿನೆಂಟ್ ಗವರ್ನರ್ಗಳು ಭಾಗವಹಿಸಲಿದ್ದಾರೆ.
ಇದನ್ನು ಓದಿ:PUBG ಆಟಕ್ಕೆ ಅಡ್ಡಿಯಾಗುತ್ತಿದ್ದ ಅಜ್ಜ- ಅಜ್ಜಿಯನ್ನು ಜೈಲಿಗೆ ಕಳುಹಿಸುವ ಪ್ಲಾನ್: ಬಾಲಕನನ್ನು ಕೊಂದ ಕಿರಾತಕ