ಕೋಲ್ಕತ್ತಾ (ಪಶ್ಚಿಮಬಂಗಾಳ) : ದೇಶದಲ್ಲಿ ಪೌರತ್ವ ತಿದ್ದುಪಡಿ ಕಾಯ್ದೆ ಜಾರಿ, 2024 ರ ಲೋಕಸಭೆ ಚುನಾವಣೆಯಲ್ಲಿ ಗೆದ್ದು 2ನೇ ಬಾರಿಗೆ ಪ್ರಧಾನಿಯಾಗಿ ನರೇಂದ್ರ ಮೋದಿ ಅಧಿಕಾರ, 2026 ರಲ್ಲಿ ಪಶ್ಚಿಮಬಂಗಾಳದಲ್ಲಿ ಬಿಜೆಪಿ ಸರ್ಕಾರ ರಚನೆಯನ್ನು ಯಾರಿಂದಲೂ ತಡೆಯಲು ಸಾಧ್ಯವಿಲ್ಲ..! ಇವು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರ ವಿಶ್ವಾಸಭರಿತ ಮಾತುಗಳು.
ಲೋಕಸಭೆ ಚುನಾವಣೆಗೆ ಈಗಿನಿಂದಲೇ ಸಿದ್ಧತೆ ನಡೆಸುತ್ತಿರುವ ಬಿಜೆಪಿ, ಪಶ್ಚಿಮಬಂಗಾಳದಲ್ಲಿ ಹಮ್ಮಿಕೊಂಡಿದ್ದ ರ್ಯಾಲಿಯಲ್ಲಿ ಅಮಿತ್ ಶಾ ಅವರು ಭಾಗವಹಿಸಿ ಮಾತನಾಡಿದರು. ಕೇಂದ್ರ ಸರ್ಕಾರ ಪೌರತ್ವ ತಿದ್ದುಪಡಿ ಕಾಯ್ದೆಯನ್ನು ಜಾರಿಗೆ ತರಲಿದೆ. ಅದನ್ನು ತಡೆಯಲು ಯಾರಿಂದಲೂ ಸಾಧ್ಯವಿಲ್ಲ. ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರ ತುಷ್ಟೀಕರಣ, ಭ್ರಷ್ಟಾಚಾರ ಮತ್ತು ರಾಜಕೀಯ ಹಿಂಸಾಚಾರವನ್ನು 2026 ರಲ್ಲಿ ಕೊನೆಗಾಣಿಸಲಾಗುವುದು ಎಂದು ಹೇಳಿದರು.
ಮಮತಾ ಬ್ಯಾನರ್ಜಿ ಅವರು ಸಿಎಎ ಜಾರಿಯನ್ನು ವಿರೋಧಿಸುತ್ತಿದ್ದಾರೆ. ಆದರೆ, ಅದರ ಅನುಷ್ಠಾನವನ್ನು ತಡೆಯಲು ಯಾರಿಂದಲೂ ಸಾಧ್ಯವಿಲ್ಲ. ಇದು ಪ್ರತಿಪಕ್ಷಗಳ ಕಾನೂನಿಗೆ ವಿರುದ್ಧದ ಬಲವಾದ ನಿಲುವನ್ನು ತೋರಿಸುತ್ತದೆ. ಅಕ್ರಮ ವಲಸಿಗರು ದೇಶದಲ್ಲಿ ಹೆಚ್ಚುತ್ತಿದ್ದಾರೆ. ಇದರ ತಡೆಗೆ ಸಿಎಎ ಜಾರಿಯೊಂದೇ ಕಠಿಣ ಕ್ರಮವಾಗಿದೆ. ಇದನ್ನು ವಿರೋಧಿಸುವ ಮಮತಾ ಅವರು ಅಕ್ರಮ ವಲಸಿಗರಿಗೆ ಗುರುತಿನ ಚೀಟಿಗಳನ್ನು ನೀಡುತ್ತಿದ್ದಾರೆ ಎಂದು ಶಾ ಆರೋಪಿಸಿದರು.
ಮೋದಿ ಮತ್ತೆ ಪ್ರಧಾನಿಯಾಗೋದು ಪಕ್ಕಾ: 2024ರಲ್ಲಿ ನಡೆಯುವ ಸಾರ್ವತ್ರಿಕ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ ಗೆಲುವು ಸಾಧಿಸಿ ನರೇಂದ್ರ ಮೋದಿ ಅವರು 3ನೇ ಬಾರಿಗೆ ಪ್ರಧಾನಿಯಾಗುವುದು ಖಂಡಿತ. ಕಳೆದ ಬಾರಿಯೂ ರಾಜ್ಯದಿಂದ ಹೆಚ್ಚಿನ ಸಂಖ್ಯೆಯಲ್ಲಿ ಸಂಸದರು ಆಯ್ಕೆಯಾಗಿದ್ದರು. ಈ ಬಾರಿಯೂ ಬಿಜೆಪಿಗೆ ಜನರು ಆಶೀರ್ವಾದ ಮಾಡಬೇಕು ಎಂದು ಕೋರಿದರು.
ಬಂಗಾಳದಲ್ಲಿ ಬಿಜೆಪಿ ಸರ್ಕಾರ: ಕೇಂದ್ರದಲ್ಲಿ ಮತ್ತೆ ಎನ್ಡಿಎ ಸರ್ಕಾರ ರಚನೆಯಾಗುವುದು ಎಷ್ಟು ನಿಶ್ಚಿತವೋ, 2026 ರಲ್ಲಿ ಬಂಗಾಳದಲ್ಲಿ ಸಿಎಂ ಮಮತಾ ಅವರು ಹುದ್ದೆ ಕಳೆದುಕೊಳ್ಳುವುದು ಕೂಡ ಅಷ್ಟೇ ಸತ್ಯ. ನೀವು (ಮಮತಾ) ಬಿಜೆಪಿ ನಾಯಕ ಸುವೇಂದು ಅಧಿಕಾರಿಯನ್ನು ವಿಧಾನಸಭೆಯಿಂದ ವಜಾ ಮಾಡಬಹುದು. ಆದರೆ, ಬಂಗಾಳದ ಜನರಿಗೆ ಮೋಸ ಮಾಡಲು ಸಾಧ್ಯವಿಲ್ಲ. ದೀದಿ, ನಿಮ್ಮ ಸಮಯ ಮುಗಿದಿದೆ. ಮುಂದಿನ ಚುನಾವಣೆಯಲ್ಲಿ ನೀವು ಅಧಿಕಾರ ತ್ಯಾಗ ಮಾಡುವುದು ಖಂಡಿತ ಎಂದು ಅಮಿತ್ ಶಾ ಗುಡುಗಿದರು.
ರಾಜ್ಯದಲ್ಲಿ ಭ್ರಷ್ಟಾಚಾರ ತಾಂಡವವಾಡುತ್ತಿದೆ. ಟಿಎಂಸಿ ನಾಯಕರ ಮನೆಗಳಲ್ಲಿ ಹಣದ ರಾಶಿಯೇ ಕಾಣಿಸುತ್ತಿದೆ. ಇದಕ್ಕೆಲ್ಲಾ ಕಡಿವಾಣ ಹಾಕಬೇಕಾದರೆ, ಮುಂದಿನ ಚುನಾವಣೆಯಲ್ಲಿ ಬಿಜೆಪಿ ಅಧಿಕಾರ ಹಿಡಿಯಬೇಕು. ಇಲ್ಲವಾದಲ್ಲಿ ಭ್ರಷ್ಟತೆ ಮುಂದುವರಿಯಲಿದೆ ಎಂದು ಶಾ ಹೇಳಿದರು.
ಬಂಗಾಳದಲ್ಲಿ ಚುನಾವಣೆಯ ವೇಳೆ ಹಿಂಸಾಚಾರದ ಕುರಿತು ವಾಗ್ದಾಳಿ ನಡೆಸಿದ ಕೇಂದ್ರ ಗೃಹ ಸಚಿವರು, ಚುನಾವಣೆ ವೇಳೆ ಅತಿ ಹೆಚ್ಚು ಹಿಂಸಾಚಾರ ನಡೆದಿದ್ದು ಬಂಗಾಳದಲ್ಲಿ. ಬಿಜೆಪಿ ಕಾರ್ಯಕರ್ತರ ಹತ್ಯೆಯಾಗಿದೆ. ಮತಗಳನ್ನು ಪಡೆಯುವ ಮೂಲಕ ಬಿಜೆಪಿ ಕಾರ್ಯಕರ್ತರು ರಾಜಕೀಯ ಕೊಲೆಗಳಿಗೆ ಪ್ರತೀಕಾರ ತೀರಿಸಿಕೊಳ್ಳುತ್ತಾರೆ ಎಂದರು.
ಇದನ್ನೂ ಓದಿ: ಕತ್ತಲೆಯಿಂದ ಬೆಳಕಿನೆಡೆಗೆ: 41 ಕಾರ್ಮಿಕರ ಕುಟುಂಬ ನಿರಾಳ; ಪಟಾಕಿ ಸಿಡಿಸಿ ಸಿಹಿ ಹಂಚಿ ಸಂಭ್ರಮ