ನವದೆಹಲಿ: ಮುಂಬರುವ ಪ್ರಮುಖ ರಾಜ್ಯ ಚುನಾವಣೆಗಳು ಮತ್ತು 2024ರ ಲೋಕಸಭೆ ಚುನಾವಣೆಗೆ ಆಡಳಿತಾರೂಢ ಬಿಜೆಪಿ ಸಜ್ಜಾಗುತ್ತಿದೆ. ಇದಕ್ಕೂ ಮುನ್ನ ಪಕ್ಷದ ಸಂಘಟನೆಯಲ್ಲಿ ಸಂಭವನೀಯ ಬದಲಾವಣೆಗಳು ತರುವ ನಿಟ್ಟಿನಲ್ಲಿ ಕೇಂದ್ರ ಗೃಹ ಸಚಿವ ಅಮಿತ್ ಶಾ, ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಮತ್ತು ಪಕ್ಷದ ಸಂಘಟನಾ ಪ್ರಧಾನ ಕಾರ್ಯದರ್ಶಿ ಬಿ.ಎಲ್.ಸಂತೋಷ್ ಸೇರಿ ಹಿರಿಯ ನಾಯಕರು ಸರಣಿ ಸಭೆಗಳನ್ನು ನಡೆಸಿದ್ದಾರೆ ಎಂದು ವರದಿಯಾಗಿದೆ.
ಈ ಮೂವರು ಪ್ರಮುಖ ನಾಯಕರು ಸಂಘ ಪರಿವಾರದ ಸದಸ್ಯರೊಂದಿಗೆ ಮಹತ್ವದ ಸಭೆಗಳನ್ನೂ ನಡೆಸಿದ್ದಾರೆ. ಜೊತೆಗೆ ವಿಶ್ವ ಹಿಂದೂ ಪರಿಷತ್, ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್, ಬಜರಂಗದಳ, ಸಂಘ ಪರಿವಾರಕ್ಕೆ ಸಂಬಂಧಿಸಿದ ಎಲ್ಲ ಘಟಕಗಳು ಹಾಗೂ ರೈತರು, ಕಾರ್ಮಿಕರು ಮತ್ತು ಅರಣ್ಯವಾಸಿಗಳಿಗೆ ಸಂಬಂಧಿಸಿದ ಸಂಘಟನೆಗಳು ದೇಶದ ವಿವಿಧ ಭಾಗಗಳಲ್ಲಿ ನಿರಂತರವಾಗಿ ಸಭೆಗಳನ್ನು ನಡೆಸುತ್ತಿವೆ.
ಇದನ್ನೂ ಓದಿ: ವೀರ್ ಸಾವರ್ಕರ್ ಜೀವನಚರಿತ್ರೆಯನ್ನು ಪಠ್ಯದಲ್ಲಿ ಕಡ್ಡಾಯಗೊಳಿಸಿದ ಯುಪಿ ಸರ್ಕಾರ
ಮತ್ತೊಂದೆಡೆ, ರಾಷ್ಟ್ರೀಯ ಸ್ವಯಂಸೇವಕ ಸಂಘ (ಆರ್‌ಎಸ್‌ಎಸ್)ದ ಮುಖ್ಯಸ್ಥ ಮೋಹನ್ ಭಾಗವತ್ ಮತ್ತು ಸಂಘದ ಹಿರಿಯ ನಾಯಕರು ನಿರಂತರವಾಗಿ ದೇಶದ ವಿವಿಧ ರಾಜ್ಯಗಳಿಗೆ ಭೇಟಿ ನೀಡಿ, ಸಭೆಗಳನ್ನು ನಡೆಸುತ್ತಿದ್ದಾರೆ. ಇದೇ ವೇಳೆ ಜನರೊಂದಿಗೆ ಸಂವಾದ ನಡೆಸುತ್ತಿದ್ದಾರೆ. ಇದರ ನಡುವೆ ಮೋಹನ್ ಭಾಗವತ್ ಜುಲೈನಲ್ಲಿ ಉತ್ತರ ಪ್ರದೇಶಕ್ಕೆ ಐದು ದಿನಗಳ ಪ್ರವಾಸ ಕೈಗೊಳ್ಳಲಿದ್ದಾರೆ.
ಯುವ ನಾಯಕರ ಪಡೆ ಕಟ್ಟಲು ಸಿದ್ಧತೆ: ಈ ಎಲ್ಲ ಸಭೆಗಳು ಮತ್ತು ಪ್ರವಾಸಗಳ ಉದ್ದೇಶವೆಂದರೆ ಚುನಾವಣೆಗಳಿಗೆ ತಯಾರಿ ಮಾಡುವುದೇ ಆಗಿದೆ. ಆದರೆ, ಈ ಎಲ್ಲ ಕಸರತ್ತುಗಳ ಪ್ರಮುಖ ಉದ್ದೇಶವೆಂದರೆ ಹೊಸ ಬಿಜೆಪಿಯನ್ನು ರಚಿಸುವುದು. ಹೊಸ ಬಿಜೆಪಿಯ ಅರ್ಥವೇನೆಂದರೆ, ಭವಿಷ್ಯದಲ್ಲಿ ಪಕ್ಷವನ್ನು ನಿಭಾಯಿಸುವ ಮತ್ತು ಮುನ್ನಡೆಸುವ ನಾಯಕರು, ವಿಶೇಷವಾಗಿ ಯುವ ನಾಯಕರ ಪಡೆಯನ್ನು ಸಿದ್ಧಪಡಿಸುವುದು ಎಂದು ಮೂಲಗಳು ತಿಳಿಸಿವೆ.
ಇದನ್ನೂ ಓದಿ: ನೀವು ಮದುವೆ ಮಾಡಿಕೊಳ್ಳಿ, ಈಗಲೂ ಸಮಯ ಮೀರಿಲ್ಲ, ನಮ್ಮ ಮಾತು ಕೇಳಿ..: ರಾಹುಲ್‌ಗೆ ಲಾಲು ಪ್ರಸಾದ್ ಸಲಹೆ- ವಿಡಿಯೋ
ಕೆಲವು ಹೊಸ ಮತ್ತು ಯುವ ಪದಾಧಿಕಾರಿಗಳನ್ನು ರಾಷ್ಟ್ರೀಯ ತಂಡಕ್ಕೆ ಸೇರ್ಪಡೆಗೊಳಿಸುವ ಬಗ್ಗೆ ಪಕ್ಷವು ಪರಿಗಣಿಸುತ್ತಿದೆ. ಅದರ ಬಗ್ಗೆಯೂ ಚರ್ಚೆ ನಡೆಯುತ್ತಿದೆ. 2024ರ ಲೋಕಸಭಾ ಚುನಾವಣೆಯ ಸಿದ್ಧತೆಗಳ ದೃಷ್ಟಿಯಿಂದ ನಡ್ಡಾ ಅವರ ಅಧಿಕಾರಾವಧಿಯು 2024ರ ಜೂನ್ನವರೆಗೆ ಪಕ್ಷದ ರಾಷ್ಟ್ರೀಯ ಅಧ್ಯಕ್ಷರಾಗಿ ಇರಲಿದೆ. ಅದರ ನಂತರ ಪಕ್ಷವು ಹೊಸ ರಾಷ್ಟ್ರೀಯ ಅಧ್ಯಕ್ಷರನ್ನು ಆಯ್ಕೆ ಮಾಡಲಿದೆ.
ಮೂಲಗಳ ಪ್ರಕಾರ, ಶಾ ಮತ್ತು ನಡ್ಡಾ ಲೋಕಸಭಾ ಚುನಾವಣೆಯ ಸಿದ್ಧತೆಗಾಗಿ ಪಕ್ಷ ಸಂಘಟನೆಯನ್ನು ಬದಲಾಯಿಸುವ ಯೋಜನೆಯಲ್ಲಿದ್ದಾರೆ. ಅವರು ಪಕ್ಷಕ್ಕೆ ಹೊಸ ರೂಪವನ್ನು ನೀಡುವ ಗುರಿಯನ್ನು ಹೊಂದಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಮತ್ತು ಅಮಿತ್ ಶಾ ಪಕ್ಷದಲ್ಲಿ ಬದಲಾವಣೆಗೆ ಸದಾ ಪ್ರಾಮುಖ್ಯತೆ ನೀಡುತ್ತಿದ್ದಾರೆ ಎಂದು ತಿಳಿದು ಬಂದಿದೆ.
ಹೊಸ ನಾಯಕತ್ವಕ್ಕೆ ಆದ್ಯತೆ: ಕಳೆದ ಒಂಬತ್ತು ವರ್ಷಗಳಲ್ಲಿ ಮೋದಿ - ಶಾ ಜೋಡಿಯು ಹರಿಯಾಣ, ದೆಹಲಿ, ಉತ್ತರ ಪ್ರದೇಶ, ಉತ್ತರಾಖಂಡ, ಬಿಹಾರ, ಕರ್ನಾಟಕ ಮತ್ತು ಗುಜರಾತ್ ಸೇರಿದಂತೆ ಹಲವು ರಾಜ್ಯಗಳಲ್ಲಿ ಹೊಸ ನಾಯಕತ್ವವನ್ನು ಸೃಷ್ಟಿಸಿದೆ. ಮಧ್ಯಪ್ರದೇಶ, ರಾಜಸ್ಥಾನ, ಛತ್ತೀಸ್‌ಗಢದಂತಹ ಇತರ ರಾಜ್ಯಗಳಲ್ಲಿಯೂ ಪಕ್ಷವು ಅದೇ ರೀತಿಯಲ್ಲಿ ಪ್ರಯತ್ನಿಸುತ್ತಿದೆ.
ಪಕ್ಷದ ನಿಯಮಗಳ ಪ್ರಕಾರ, ರಾಷ್ಟ್ರೀಯ ಅಧ್ಯಕ್ಷರು 13 ಉಪಾಧ್ಯಕ್ಷರನ್ನು ನಾಮನಿರ್ದೇಶನ ಮಾಡಬಹುದು. ಆದರೆ, ಪ್ರಸ್ತುತ 12 ರಾಷ್ಟ್ರೀಯ ಉಪಾಧ್ಯಕ್ಷರು ಇದ್ದಾರೆ. ಮತ್ತೊಬ್ಬ ರಾಷ್ಟ್ರೀಯ ಉಪಾಧ್ಯಕ್ಷರನ್ನೂ ನೇಮಿಸುವ ಉದ್ದೇಶ ಇದೆ. ಪ್ರಸ್ತುತ ಒಂಬತ್ತು ನಾಯಕರನ್ನು ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿಗಳು ಇದ್ದು, ಇವರಲ್ಲಿ ಬದಲಾವಣೆ ಮಾಡುವ ಸಾಧ್ಯತೆ ಇದೆ. 15 ಜನ ಕಾರ್ಯದರ್ಶಿಗಳ ಪೈಕಿ 13 ಜನ ಮಾತ್ರ ಇದ್ದು, ಇನ್ನೂ ಇಬ್ಬರನ್ನು ರಾಷ್ಟ್ರೀಯ ಕಾರ್ಯದರ್ಶಿಗಳಾಗಿ ನೇಮಿಸುವ ಲೆಕ್ಕಾಚಾರವೂ ಇದೆ. ಹಲವು ರಾಜ್ಯಗಳ ಉಸ್ತುವಾರಿಗಳನ್ನೂ ಬದಲಾಯಿಸಲು ಪಕ್ಷ ನಿರ್ಧರಿಸಿದೆ ಎಂದು ವರದಿಯಾಗಿದೆ.
ಇದನ್ನೂ ಓದಿ: ಲೋಕಸಭೆ ಚುನಾವಣೆಯಲ್ಲಿ ಒಟ್ಟಿಗೆ ಹೋರಾಡಲು ಪ್ರತಿಪಕ್ಷ ನಾಯಕರ ನಿರ್ಧಾರ, ಮುಂದಿನ ಸಭೆ ಶಿಮ್ಲಾದಲ್ಲಿ