ಫರಿದಾಬಾದ್ (ಹರಿಯಾಣ): ಭಯೋತ್ಪಾದನೆ ಚಟುವಟಿಕೆಗಳ ಮೇಲೆ ಹದ್ದಿನ ಕಣ್ಣಿಟ್ಟಿರುವ ರಾಷ್ಟ್ರೀಯ ತನಿಖಾ ದಳಕ್ಕೆ ಹೆಚ್ಚಿನ ಅಧಿಕಾರ ನೀಡಲಾಗಿದೆ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಹೇಳಿದರು. ಹರಿಯಾಣದ ಫರಿದಾಬಾದ್ನಲ್ಲಿ ಗುರುವಾರದಿಂದ ಶುರುವಾದ ಮುಖ್ಯಮಂತ್ರಿಗಳು ಮತ್ತು ರಾಜ್ಯಗಳ ಗೃಹ ಮಂತ್ರಿಗಳ 2 ದಿನಗಳ ಚಿಂತನಾ ಶಿಬಿರದಲ್ಲಿ ಅವರು ಮಾತನಾಡಿದರು.
ಭಾರತದ ಆಂತರಿಕ ಭದ್ರತೆಯ ಬಗ್ಗೆ ಎಳೆಎಳೆಯಾಗಿ ಮಾತನಾಡಿದ ಅಮಿತ್ ಶಾ, ಎಲ್ಲಾ ರಾಜ್ಯಗಳು ಒಗ್ಗೂಡಿ ಉಗ್ರ ಚಟುವಟಿಕೆಗಳ ವಿರುದ್ಧ ಹೋರಾಡಬೇಕಿದೆ. ಎನ್ಐಎ ಭಯೋತ್ಪಾದಕ ಪ್ರಕರಣಗಳನ್ನು ಚೆಂಡಾಡುತ್ತಿದೆ. ಆ ಸಂಸ್ಥೆಗೆ ಹೆಚ್ಚಿನ ಅಧಿಕಾರವನ್ನು ನೀಡಲಾಗಿದೆ. ಉಗ್ರವಾದದ ನಾಶಕ್ಕಾಗಿ 2024 ರ ವೇಳೆಗೆ ಎಲ್ಲ ರಾಜ್ಯಗಳಲ್ಲಿ ತನಿಖಾ ಸಂಸ್ಥೆಯ ಕಚೇರಿಗಳನ್ನು ಸ್ಥಾಪಿಸಲಾಗುವುದು ಎಂದು ಗೃಹ ಸಚಿವರು ಹೇಳಿದರು.
ಅಭಿವೃದ್ಧಿಗೆ ಅಕ್ರಮ ಎನ್ಜಿಒಗಳು ಅಡ್ಡಿ: ದೇಶದ ಬೆಳವಣಿಗೆಗೆ ಅಡೆತಡೆ ಒಡ್ಡುತ್ತಿರುವ ಎನ್‌ಜಿಒಗಳ ವಿರುದ್ಧ ಸರ್ಕಾರ ಕಠಿಣ ಕ್ರಮಗಳನ್ನು ತೆಗೆದುಕೊಂಡಿದೆ. ಹಲವು ಎನ್‌ಜಿಒಗಳ ಎಫ್‌ಸಿಆರ್‌ಎ ನೋಂದಣಿಯನ್ನು ರದ್ದುಗೊಳಿಸಲಾಗಿದೆ. ಇವುಗಳು ಧಾರ್ಮಿಕ ಮತಾಂತರದಲ್ಲಿ ತೊಡಗಿವೆ. ಈ ನಡೆ ರಾಷ್ಟ್ರದ ಬೆಳವಣಿಗೆಗೆ ಅಡ್ಡಿಯಾಗುತ್ತಿದೆ ಎಂದರು.
ಸಿಆರ್‌ಪಿಸಿ, ಐಪಿಸಿಯಲ್ಲಿ ಬದಲಾವಣೆ: ಭಾರತದ ಕಾನೂನುಗಳಾದ ಸಿಆರ್‌ಪಿಸಿ ಮತ್ತು ಐಪಿಸಿಯಲ್ಲಿ ಮಹತ್ತರ ಬದಲಾವಣೆ ತಂದ ಬಗ್ಗೆ ಅಮಿತ್ ಶಾ ತಿಳಿಸಿದರು. ಕಾನೂನುಗಳ ಸುಧಾರಣೆಗೆ ಸಂಬಂಧಿಸಿದಂತೆ ಬಂದ ಸಲಹೆಗಳನ್ನು ಸ್ವೀಕರಿಸಲಾಗಿದೆ. ಅವುಗಳ ಸಮಗ್ರ ಪರಿಶೀಲನೆ ನಡೆಸಲಾಗುತ್ತಿದೆ. ಶೀಘ್ರದಲ್ಲೇ ಸಂಸತ್ತಿನಲ್ಲಿ ಹೊಸ ಸಿಆರ್‌ಪಿಸಿ, ಐಪಿಸಿ ಕರಡುಗಳನ್ನು ಮಂಡಿಸುತ್ತೇವೆ ಎಂದು ಗೃಹ ಸಚಿವರು ಮಾಹಿತಿ ನೀಡಿದರು.
ಹಲ್ಲು ಕಿತ್ತ ಹಾವಿನಂತಾದ ಉಗ್ರರು: ಜಮ್ಮು ಮತ್ತು ಕಾಶ್ಮೀರದಲ್ಲಿ 370 ನೇ ವಿಧಿ ರದ್ದತಿಯ ನಂತರ ಭಯೋತ್ಪಾದಕ ಚಟುವಟಿಕೆಗಳ ಸದ್ದು ಅಡಗಿದೆ. ಉಗ್ರವಾದವು ಅಲ್ಲಿ ಈಗ ಶೇ.34 ಕ್ಕೆ ಇಳಿದಿದೆ. ನಮ್ಮ ಸೈನಿಕರ ಸಾವಿನ ಪ್ರಮಾಣ ಶೇ.64 ಮತ್ತು ನಾಗರಿಕರ ಬಲಿ 90 ಪ್ರತಿಶತ ಕಡಿತವಾಗಿದೆ ಎಂದು ಸಚಿವರು ಅಂಕಿಅಂಶ ನೀಡಿದರು.
ಸೈಬರ್ ಅಪರಾಧಗಳು, ಮಾದಕ ದ್ರವ್ಯಗಳ ಸಾಗಣೆ, ಗಡಿಯಾಚೆಗಿನ ಭಯೋತ್ಪಾದನೆ, ದೇಶದ್ರೋಹ ಮತ್ತು ಇತರ ಅಪರಾಧಗಳನ್ನು ಎದುರಿಸಲು ಜಂಟಿ ಯೋಜನೆಯನ್ನು ಯೋಜಿಸಲು ಈ ಚಿಂತನಾ ಶಿಬಿರ ನೆರವು ನೀಡಲಿದೆ ಎಂದು ಹೇಳಿದರು.
ಇದನ್ನೂ ಓದಿ: ಗಿಲ್ಗಿಟ್, ಬಾಲ್ಟಿಸ್ತಾನ್ ನಮಗೆ ಸೇರಿದಾಗಲೇ ಸಮಗ್ರ ಅಭಿವೃದ್ಧಿ: ಪಿಓಕೆ ಮರುವಶದ ಸುಳಿವು ನೀಡಿದ ರಾಜನಾಥ್