ನವದೆಹಲಿ: ಪೂರ್ವ ಲಡಾಖ್ ಪ್ಯಾಂಗಾಂಗ್ ಸರೋವರದ ದಕ್ಷಿಣ ಮತ್ತು ಉತ್ತರ ಭಾಗದಿಂದ ಚೀನಾ ಮತ್ತು ಭಾರತದ ಸೇನೆ ಹಿಂತೆಗೆತ ಪ್ರಕ್ರಿಯೆ ಪೂರ್ಣಗೊಂಡಿದ್ದು, ಉಭಯ ರಾಷ್ಟ್ರಗಳ ಮಧ್ಯೆ ಇಂದು 10ನೇ ಸುತ್ತಿನ ಮಾತುಕತೆ ನಡೆಯಲಿದೆ. ಈ ಮಧ್ಯೆ ಚೀನಾ ಅಧಿಕೃತ ಮಾಧ್ಯಮ ಗಲ್ವಾನ್ ಸಂಘರ್ಷದ ವಿಡಿಯೋವೊಂದನ್ನು ಟ್ವೀಟ್ ಮಾಡಿದೆ.
ಕಳೆದ ವರ್ಷ ಜುಲೈನಲ್ಲಿ ಗಲ್ವಾನ್ ಕಣಿವೆಯಲ್ಲಿ ಉಭಯ ದೇಶಗಳ ಸೈನಿಕರು ಮುಖಾಮುಖಿಯಾಗಿರುವುದು ವಿಡಿಯೋದಲ್ಲಿದೆ. ಜೊತೆಗೆ ಭಾರತದ ಸೈನಿಕರು ಚೀನಾ ಅತಿಕ್ರಮಿಸುತ್ತಿದ್ದಾರೆ ಎಂದು ಟ್ವಿಟ್ನಲ್ಲಿ ಚೀನಾ ಅಧಿಕೃತ ಮಾಧ್ಯಮ ವಿಶ್ಲೇಷಕ ಶೇನ್ ಆರೋಪಿಸಿದ್ದಾರೆ.
ಇನ್ನು ಗಲ್ವಾನ್ ಸಂಘರ್ಷದಲ್ಲಿ ನಮ್ಮ ನಾಲ್ವರು ಸೈನಿಕರು ಮೃತಪಟ್ಟಿದ್ದಾರೆ ಎಂದು ಚೀನಾ ಒಪ್ಪಿಕೊಂಡು, ಅವರ ಹೆಸರು ಬಹಿರಂಗಪಡಿಸಿದ ಬಳಿಕ ಈ ವಿಡಿಯೋ ಬೆಳಕಿಗೆ ಬಂದಿದೆ. ಆದ್ರೆ 30 ಚೀನಿ ಸೈನಿಕರು ಮೃತಪಟ್ಟಿದ್ದಾರೆ ಎಂದು ಭಾರತ ಹೇಳಿಕೊಂಡಿತ್ತು. ಇದೇ ಸಂಘರ್ಷದಲ್ಲಿ ಭಾರತದ 20 ಸೈನಿಕರು ಹುತಾತ್ಮರಾಗಿದ್ದರು. ಇನ್ನು ವಿಡಿಯೋ ಬಗ್ಗೆ ಭಾರತೀಯ ಸೇನೆ ಯಾವುದೇ ಹೇಳಿಕೆ ನೀಡಿಲ್ಲ.
ಇನ್ನು ಇಂದು ಶನಿವಾರ ಬೆಳಗ್ಗೆ 10 ಗಂಟೆಗೆ ಮೋಲ್ಡೋದಲ್ಲಿ ಮಾತುಕತೆ ನಡೆಯಲಿದ್ದು, ಮೊದಲ ಮಾತುಕತೆಿಗಿಂತ ತುಂಬಾ ಕಡಿಮೆ ಸಮಯದಲ್ಲಿ ಮುಗಿಯುವ ಸಾಧ್ಯತೆಯಿದೆ ಎಂದು ಈಟಿವಿ ಭಾರತ್ಕ್ಕೆ ಸೇನಾಮೂಲಗಳು ಮಾಹಿತಿ ನೀಡಿವೆ.