ಸೂರಿ (ಪಶ್ಚಿಮ ಬಂಗಾಳ): ವಿಶ್ವಭಾರತಿ ತನ್ನನ್ನು ಹೊರಹಾಕಲು ಪ್ರಯತ್ನಿಸುತ್ತಿದೆ ಎಂದು ಆರೋಪಿಸಿ ನೊಬೆಲ್ ಪ್ರಶಸ್ತಿ ಪುರಸ್ಕೃತ ಅರ್ಥಶಾಸ್ತ್ರಜ್ಞ ಅಮರ್ತ್ಯ ಸೇನ್ ಕೊನೆಗೂ ನ್ಯಾಯಾಲಯದ ಬಾಗಿಲು ತಟ್ಟಿದ್ದಾರೆ. ಗುರುವಾರ ಸೂರಿ ಜಿಲ್ಲಾ ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸಲಾಗಿದ್ದು, ಮೇ 15 ರಂದು ವಿಚಾರಣೆಗೆ ಬರಲಿದೆ. ಆದರೆ, ವಿಶ್ವಭಾರತಿ ಅಧಿಕಾರಿಗಳು ಅಮರ್ತ್ಯ ಸೇನ್‌ಗೆ ನೋಟಿಸ್ ಜಾರಿ ಮಾಡಿ 13 ದಶಮಾಂಶ (ಡೆಸಿಮಲ್) ಭೂಮಿಯನ್ನು ತೆರವು ಮಾಡಲು ಮೇ 6ರವರೆಗೆ ಗಡುವು ನೀಡಿರುವುದು ತಿಳಿದು ಬಂದಿದೆ.
ವಿಶ್ವಭಾರತಿ ಪ್ರಕಾರ, ಶಾಂತಿನಿಕೇತನದಲ್ಲಿರುವ ನೊಬೆಲ್ ಪ್ರಶಸ್ತಿ ವಿಜೇತ ಅಮರ್ತ್ಯ ಸೇನ್ ಅವರ 'ಪ್ರತಿಚಿ' ಮನೆಯು ಹೆಚ್ಚುವರಿ ಭೂಮಿಯನ್ನು ಹೊಂದಿದೆ. ಹೀಗಾಗಿ ಅಧಿಕಾರಿಗಳು ಅಮರ್ತ್ಯ ಸೇನ್‌ಗೆ ಹಲವು ಬಾರಿ ಪತ್ರ ಬರೆದು ಭೂಮಿಯನ್ನು ಹಿಂದಿರುಗಿಸುವಂತೆ ಕೇಳಿದ್ದರು ಎಂದು ವಿಶ್ವಭಾರತಿ ಅಧಿಕಾರಿಗಳ ಪ್ರತಿಕ್ರಿಯೆ ನೀಡಿದ್ದಾರೆ.
ವಿಶ್ವಭಾರತಿಯ ಉಪಕುಲಪತಿ ವಿದ್ಯುತ್ ಚಕ್ರವರ್ತಿ ಅವರು ವಿವಿಧ ಕಾರ್ಯಕ್ರಮಗಳಲ್ಲಿ ಮಾತನಾಡುವಾಗ, ಭಾರತ ರತ್ನ ಅಮರ್ತ್ಯ ಸೇನ್ ವಿರುದ್ಧ ವಾಗ್ದಾಳಿ ನಡೆಸಿದ್ದರು. ವಿಶ್ವಭಾರತಿ ಅಧಿಕಾರಿಗಳು ಅಮರ್ತ್ಯ ಸೇನ್ ಅವರ ‘ಪ್ರತಿಚಿ’ ಮನೆಯ ಗೇಟ್ ಮೇಲೆ ನೋಟಿಸ್ ಅಂಟಿಸಿದ್ದಾರೆ. ಮೇ 6 ರೊಳಗೆ ಭೂಮಿಯನ್ನು ಖಾಲಿ ಮಾಡುವಂತೆ ಆದೇಶಿಸಿದ್ದಾರೆ. ಅಗತ್ಯ ಬಿದ್ದರೆ ವಿಶ್ವಭಾರತಿ ಅಧಿಕಾರಿಗಳು ಬಲಪ್ರಯೋಗ ಮಾಡುತ್ತಾರೆ ಎಂದು ಪ್ರೊಫೆಸರ್ ಸೇನ್ ಅವರಿಗೆ ಎಚ್ಚರಿಕೆ ಸೂಚನೆಯನ್ನೂ ನೀಡಿದ್ದರು.
ವಿಶ್ವಭಾರತಿ ವಿಶ್ವವಿದ್ಯಾಲಯದ ಕ್ಯಾಂಪಸ್‌ನಲ್ಲಿ ನಡೆಯುತ್ತಿರುವ ಅಮರ್ತ್ಯ ಸೇನ್‌ಗೆ ಸಂಬಂಧಿಸಿದ ಭೂ ವಿವಾದದ ಬಗ್ಗೆ ಹಳೆ ವಿದ್ಯಾರ್ಥಿನಿ ತ್ರಿಷಾ ರಾಣಿ ಭಟ್ಟಾಚಾರ್ಯ ಎಂಬುವರು ಉಪಕುಲಪತಿ ವಿದ್ಯುತ್ ಚಕ್ರವರ್ತಿ ಮತ್ತು ಇತರ ಇಬ್ಬರು ಅಧಿಕಾರಿಗಳ ವಿರುದ್ಧ ಶಾಂತಿನಿಕೇತನ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ನೊಬೆಲ್ ಪ್ರಶಸ್ತಿ ಪುರಸ್ಕೃತ ಅಮರ್ತ್ಯ ಸೇನ್ ಅವರಿಗೆ ಉಪಕುಲಪತಿ ಮಾನಸಿಕ ಹಿಂಸೆ ನೀಡುತ್ತಿದ್ದಾರೆ ಎಂದು ದೂರಿನಲ್ಲಿ ಹಳೆಯ ವಿದ್ಯಾರ್ಥಿನಿ ಆರೋಪಿಸಿದ್ದಾರೆ. ಅಮರ್ತ್ಯ ಸೇನ್ ಅವರ ಮನೆಯನ್ನು ಕೆಡವಿದರೆ ಧರಣಿ ನಡೆಸುವುದಾಗಿ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿಗೆ ಎಚ್ಚರಿಕೆ ಸಹ ನೀಡಿದ್ದಾರೆ.
ಈಗ ನೊಬೆಲ್ ಪ್ರಶಸ್ತಿ ವಿಜೇತ ಅರ್ಥಶಾಸ್ತ್ರಜ್ಞ ಅಮರ್ತ್ಯ ಸೇನ್ ಅವರು, ವಿಶ್ವಭಾರತಿ ಅಧಿಕಾರಿಗಳು ಉದ್ದೇಶಪೂರ್ವಕವಾಗಿ ನಮ್ಮನ್ನು ಹೊರಹಾಕಲು ಪ್ರಯತ್ನಿಸುತ್ತಿದ್ದಾರೆ ಎಂದು ದೂರಿ ಭೂ ಸಮಸ್ಯೆಗಳ ಕುರಿತು ನ್ಯಾಯಾಲಯದ ಮೆಟ್ಟಿಲೇರಿದ್ದಾರೆ. ಈ ಸಂಬಂಧ ಗುರುವಾರ ಸೂರಿ ಜಿಲ್ಲಾ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದರು. ಅಮರ್ತ್ಯ ಸೇನ್ ಪರವಾಗಿ ವಕೀಲರಾದ ಸೌಮೆನ್ ಮುಖರ್ಜಿ ಮತ್ತು ಗೊಚ್ಚಂದ್ ಚಕ್ರವರ್ತಿ ಅವರು ಮೊಕದ್ದಮೆ ಹೂಡಿದರು.
ಏನಿದು ಪ್ರಕರಣ: ಅಮರ್ತ್ಯ ಸೇನ್ ವಿಶ್ವಭಾರತಿ ವಿಶ್ವವಿದ್ಯಾಲಯದ ಕ್ಯಾಂಪಸ್‌ನಲ್ಲಿ 1.38 ಎಕರೆ ಭೂಮಿಯನ್ನು ಹೊಂದಿದ್ದಾರೆ. ಅಲ್ಲಿ ಅವರು ಮನೆಯನ್ನು ಕಟ್ಟಿದ್ದು, ಆ ಮನೆಗೆ ಪ್ರತಿಚಿ ಎಂಬ ಹೆಸರಿಟ್ಟಿದ್ದಾರೆ. ಆದ್ರೆ ವಿಶ್ವವಿದ್ಯಾಲಯದ ಆಡಳಿತವು ಸೇನ್ ವಾಸ್ತವವಾಗಿ ಕೇವಲ 1.25 ಎಕರೆ ಭೂಮಿಯ ಮಾಲೀಕತ್ವವನ್ನು ಹೊಂದಿದ್ದಾರೆ ಎಂದು ಆರೋಪಿಸಿದ್ದು, ಈಗ ಹೆಚ್ಚುವರಿ ಭೂಮಿಯನ್ನು ಹಿಂದುರಿಗಿಸುವಂತೆ ನೋಟಿಸ್ ಜಾರಿ ಮಾಡಿದ್ದಾರೆ. ಇದರ ವಿರುದ್ಧ ಈಗ ಅಮರ್ತ್ಯ ಸೇನ್ ಕಾನೂನು ಸಮರ ಆರಂಭಿಸಿದ್ದಾರೆ.
ಓದಿ: ನೊಬೆಲ್ ಪ್ರಶಸ್ತಿ ಪುರಸ್ಕೃತ ಅಮರ್ತ್ಯ ಸೇನ್‌ಗೆ ವಿಶ್ವಭಾರತಿ ವಿಶ್ವವಿದ್ಯಾಲಯದಿಂದ ಶೋಕಾಸ್ ನೋಟಿಸ್ ಜಾರಿ