ಪಲ್ನಾಡು (ಆಂಧ್ರಪ್ರದೇಶ): ಪಲ್ನಾಡು ಜಿಲ್ಲೆಯ ಯಾದಾದ್ರಿ ಭುವನಗಿರಿಯ ಸರ್ಕಾರಿ ಆಸ್ಪತ್ರೆಯ ಶವಾಗಾರದಲ್ಲಿ ಇರಿಸಲಾಗಿದ್ದ ಮೃತದೇಹಕ್ಕೆ ಇಲಿಗಳು ಕಚ್ಚಿವೆ ಎಂಬ ಆರೋಪ ಕೇಳಿ ಬಂದಿವೆ. ಆಂಧ್ರಪ್ರದೇಶದ ಪಲ್ನಾಡು ಜಿಲ್ಲೆಯ ಯಡ್ಲಪಾಡು ಮಂಡಲದ ಬಮಪಾಲೆಂ ಗ್ರಾಮದ ಪೆರಿಕೇಲ ರವಿಶಂಕರ್ (35) ತನ್ನ ಮಕ್ಕಳು ಮತ್ತು ಪೋಷಕರೊಂದಿಗೆ ಭುವನಗಿರಿ ಪಟ್ಟಣದ ಪ್ರಗತಿನಗರದಲ್ಲಿ ವಾಸವಾಗಿದ್ದ. ಮದ್ಯವ್ಯಸನಿಯಾಗಿದ್ದ ರವಿಶಂಕರ್ ಭಾನುವಾರ ಮಧ್ಯರಾತ್ರಿ ಮನೆಯಲ್ಲಿ ಫ್ಯಾನ್‌ಗೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದರು.
ಈ ಬಗ್ಗೆ ಮಾಹಿತಿ ಪಡೆದ ಪೊಲೀಸರು ಘಟನಾ ಸ್ಥಳಕ್ಕೆ ತರೆಳಿ ಪರಿಶೀಲಿಸಿ ಶವವನ್ನು ಸರ್ಕಾರಿ ಆಸ್ಪತ್ರೆಯ ಶವಗಾರಕ್ಕೆ ಸ್ಥಳಾಂತರಿಸಿದ್ದರು. ಸೋಮವಾರ ಮರಣೋತ್ತರ ಪರೀಕ್ಷೆಗೆ ಸಿದ್ಧತೆ ನಡೆಸುತ್ತಿದ್ದಾಗ ಕುಟುಂಬಸ್ಥರಿಗೆ ಮುಖದ ಮೇಲೆ ಗಾಯದ ಗುರುತು ಕಂಡು ಬಂದಿದೆ. ಶವವನ್ನು ಫ್ರೀಜರ್ನಲ್ಲಿ ಇಡದೇ ಸಿಬ್ಬಂದಿ ನಿರ್ಲಕ್ಷದಿಂದ ಕೊಠಡಿಯಲ್ಲಿಟ್ಟಿದ್ದಾರೆ. ಹಾಗಾಗಿ ಇಲಿಗಳು ಕಡಿದಿವೆ ಎಂದು ಮೃತನ ಕುಟುಂಬಸ್ಥರು ಆರೋಪಿಸಿದ್ದಾರೆ. ಈ ಕುರಿತು ಆಸ್ಪತ್ರೆಯ ಅಧೀಕ್ಷಕ ಚಿನ್ನಯ್ಯ ಪ್ರತಿಕ್ರಿಯೆ ನೀಡಿದ್ದು, ಮೃತ ದೇಹವನ್ನು ಆಸ್ಪತ್ರೆಗೆ ಸಾಗಿಸುವ ಮುನ್ನವೇ ಮುಖದ ಮೇಲೆ ಗಾಯಗಳಾಗಿದ್ದವು. ಮೃತದೇಹವನ್ನು ಸಿಬ್ಬಂದಿ ಫ್ರೀಜರ್‌ನಲ್ಲಿಯೇ ಇಟ್ಟಿದ್ದಾರೆ ಎಂದು ಸ್ಪಷ್ಟನೆ ನೀಡಿದ್ದಾರೆ.
ಐಸಿಯುನಲ್ಲಿದ ವ್ಯಕ್ತಿಗೆ ಇಲಿ ಕಡಿತ: ಕೆಲದಿನಗಳ ಹಿಂದೆ ಉತ್ತರ ಪ್ರದೇಶದ ಬದೌನ್‌ನಲ್ಲಿನ ಸರ್ಕಾರಿ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯ ಐಸಿಯು (ತೀವ್ರ ನಿಗಾ ಘಟಕ)ದಲ್ಲಿ ದಾಖಲಾಗಿದ್ದ ರೋಗಿಯ ಅಂಗಾಂಗಗಳನ್ನು ಇಲಿಗಳು ಕಚ್ಚಿರುವ ಪ್ರಕರಣ ಬೆಳಕಿಗೆ ಬಂದಿತ್ತು.
ರಸ್ತೆ ಅಪಘಾತದಲ್ಲಿ ಗಂಭೀರವಾಗಿ ಗಾಯಗೊಂಡ ರಾಮ್ ಸೇವಕ್ ಎಂಬವರನ್ನು ಚಿಕಿತ್ಸೆಗಾಗಿ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಗೆ ದಾಖಲಿಸಲಾಗಿತ್ತು. ವ್ಯಕ್ತಿಯ ಗಂಭೀರ ಸ್ಥಿತಿ ನೋಡಿದ ವೈದ್ಯರು ತಕ್ಷಣ ಐಸಿಯು ವಾರ್ಡ್‌ನಲ್ಲಿ ವೆಂಟಿಲೇಟರ್ ಸಪೋರ್ಟ್‌ನಲ್ಲಿ ಇರಿಸಿ ಚಿಕಿತ್ಸೆ ನೀಡಲು ಇತರ ವೈದ್ಯರಿಗೆ ಸೂಚಿಸಿದ್ದರು. ರಾತ್ರಿ ವೇಳೆ ನಿಯೋಜನೆಗೊಂಡಿರುವ ಸಿಬ್ಬಂದಿ ನಿರ್ಲಕ್ಷ್ಯದಿಂದ ವಾರ್ಡ್‌ನಲ್ಲಿರುವ ಇಲಿಗಳು ರಾಮ್ಸೇವಕ್ ಅವರ ಹಣೆ, ಕಿವಿ, ಕಾಲ್ಬೆರಳು ಸೇರಿದಂತೆ ದೇಹದ ಹಲವೆಡೆ ಕಚ್ಚಿವೆ ಎಂದು ಅವರ ಸಹೋದರ ರಾಮ್ ಪ್ರಕಾಶ್ ಹೇಳಿದ್ದರು.
ರೋಗಿಯ ಪತ್ನಿ ತನ್ನ ಪತಿಯನ್ನು ನೋಡಲು ಐಸಿಯು ವಾರ್ಡ್‌ಗೆ ಹೋದಾಗ ಗಂಡನ ಕಾಲಿಗೆ ಇಲಿ ಕಚ್ಚಿ ರಕ್ತ ಬರುತ್ತಿರುವುದನ್ನು ಗಮನಿಸಿದ್ದರು. ಈ ಸಂಗತಿಯನ್ನು ಮರೆಮಾಚುತ್ತಲೇ ವೈದ್ಯಕೀಯ ಕಾಲೇಜಿನ ಸಿಬ್ಬಂದಿ ರೋಗಿಗೆ ಬ್ಯಾಂಡೇಜ್ ಹಾಕಿದ್ದರು ಎಂದು ರಾಮಸೇವಕ್ ಅವರ ಸಹೋದರ ರಾಮ್ ಗುಪ್ತಾ ಆರೋಪಿಸಿದ್ದರು.
ಈ ಬಗ್ಗೆ ತನಿಖೆ ನಡೆಸಿ ನಿರ್ಲಕ್ಷ್ಯ ತೋರಿದವರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ವೈದ್ಯಕೀಯ ಕಾಲೇಜಿನ ಪ್ರಾಂಶುಪಾಲರು ಪ್ರತಿಕ್ರಿಯೆ ನೀಡಿ ಗಾಯಾಳುವಿಗೆ ಇಲಿ ಕಡಿದಿರುವುದು ಖಚಿತ ಪಡಿಸಿದ್ದರು. ಬಳಿಕ ಇಲಿಗಳು ವಾರ್ಡ್‌ಗಳಿಗೆ ಹಾಗೂ ರೋಗಿಗಳ ಸುತ್ತಮುತ್ತ ಬರದಂತೆ 'ರ್ಯಾಟ್ ಟ್ರ್ಯಾಪ್'ಗಳನ್ನು ಅಳವಡಿಸಲಾಗುವುದಾಗಿ ಹೇಳಿದ್ದರು.
ಇದನ್ನೂ ಓದಿ: ಐಸಿಯು ವಾರ್ಡ್‌ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ವ್ಯಕ್ತಿಯ ದೇಹದ ಅಂಗಾಂಗ ಕಚ್ಚಿದ ಇಲಿ!