ಅಲಹಾಬಾದ್ (ಉತ್ತರ ಪ್ರದೇಶ): ಜಾತಿ - ಧರ್ಮ ಪರಿಗಣನೆಗೆ ತೆಗೆದುಕೊಳ್ಳದೇ 18 ವರ್ಷ ಮೇಲ್ಪಟ್ಟವರಿಗೆ ತಮ್ಮ ಜೀವನ ಸಂಗಾತಿಯನ್ನು ಆಯ್ಕೆ ಮಾಡಿಕೊಳ್ಳುವ ಹಕ್ಕಿದೆ ಎಂದು ಉತ್ತರ ಪ್ರದೇಶದ ಅಲಹಾಬಾದ್ ಹೈಕೋರ್ಟ್ ಅಭಿಪ್ರಾಯಪಟ್ಟಿದೆ.
ಅಷ್ಟೇ ಅಲ್ಲ ಮದುವೆಯಾದ ಮೇಲೆ ದಂಪತಿ ವಿಶೇಷವಾಗಿ ಅಂತರ್ ಧರ್ಮೀಯ ದಂಪತಿಯ ವೈವಾಹಿಕ ಜೀವನದಲ್ಲಿ ಅವರ ಪೋಷಕರು, ಸಂಬಂಧಿಕರು ಸೇರಿದಂತೆ ಯಾರೊಬ್ಬರೂ ಹಸ್ತಕ್ಷೇಪ ಮಾಡುವಂತಿಲ್ಲ, ಇದನ್ನು ವಿರೋಧಿಸುವಂತಿಲ್ಲ ಎಂದು ನ್ಯಾಯಾಲಯ ಸೂಚನೆ ನೀಡಿದೆ.
ಉತ್ತರ ಪ್ರದೇಶದ ನಿವಾಸಿಗಳಾದ ಓರ್ವ ಯುವಕ ಹಾಗೂ ಯುವತಿ ನ್ಯಾಯಾಲಯಕ್ಕೆ ತಮಗೆ ರಕ್ಷಣೆ ನೀಡುವಂತೆ ಕೋರಿ ಅರ್ಜಿ ಸಲ್ಲಿಸಿದ್ದರು. ತಾವಿಬ್ಬರೂ ಪರಸ್ಪರ ಪ್ರೀತಿಸುತ್ತಿದ್ದು, ಸ್ವ - ಇಚ್ಛೆಯಂತೆ ಒಟ್ಟಿಗೆ ವಾಸಿಸುತ್ತಿದ್ದೇವೆ. ಮದುವೆಗೆ ಪೋಷಕರ ವಿರೋಧವಿದ್ದು, ಜೀವ ಬೆದರಿಕೆಯಿದೆ. ಮುಸ್ಲಿಂ ಧರ್ಮದಿಂದ ಹಿಂದೂ ಧರ್ಮಕ್ಕೆ ಯುವಕ ಮತಾಂತರಗೊಳ್ಳಲು ಜಿಲ್ಲಾ ಮ್ಯಾಜಿಸ್ಟ್ರೇಟ್ಗೆ ಅರ್ಜಿ ಸಲ್ಲಿಸಲಾಗಿದೆ. ಆದರೆ, ಅವರು ಸಂಬಂಧಪಟ್ಟ ಪೊಲೀಸ್ ಠಾಣೆಯಿಂದ ವರದಿ ತೆಗೆದುಕೊಂಡು ಬರುವಂತೆ ಸೂಚಿಸಿದ್ದಾರೆ ಎಂದು ಅರ್ಜಿಯಲ್ಲಿ ಉಲ್ಲೇಖಿಸಲಾಗಿದೆ.
ಇದನ್ನೂ ಓದಿ: ಗೋವನ್ನು ರಾಷ್ಟ್ರೀಯ ಪ್ರಾಣಿಯನ್ನಾಗಿ ಘೋಷಿಸಿ: ಅಲಹಾಬಾದ್ ಹೈಕೋರ್ಟ್ ಸಲಹೆ
ಈ ಅರ್ಜಿಯ ವಿಚಾರಣೆ ಮಾಡಿದ ನ್ಯಾಯಾಧೀಶರಾದ ಮನೋಜ್ ಕುಮಾರ್ ಗುಪ್ತಾ ಮತ್ತು ದೀಪಕ್ ವರ್ಮಾ ಅವರ ವಿಭಾಗೀಯ ಪೀಠವು, ವಯಸ್ಕರಿಗೆ ತಮ್ಮ ಜೀವನ ಸಂಗಾತಿಯನ್ನು ಆಯ್ಕೆ ಮಾಡುವ ಹಕ್ಕಿದೆ. ಇದನ್ನು ಯಾರೊಬ್ಬರೂ ತಡೆಯುವಂತಿಲ್ಲ, ಹಸ್ತಕ್ಷೇಪ ಮಾಡುವಂತಿಲ್ಲ ಎಂದು ತಿಳಿಸಿದೆ.