ನವದೆಹಲಿ: ಬಜೆಟ್ ಅಧಿವೇಶನದ ಎರಡನೇ ಹಂತದಲ್ಲಿ ರಾಜ್ಯಸಭೆಯ ಪ್ರಕ್ರಿಯೆಗಳು ಪ್ರಾರಂಭವಾಗಿದ್ದು, ಎಲ್ಲ ಪಕ್ಷಗಳ ಸದಸ್ಯರು ಸಂಸತ್ ಅಧಿವೇಶನ ಮುಂದೂಡಲು ಯೋಚಿಸಿದ್ದಾರೆ ಎನ್ನಲಾಗ್ತಿದೆ.
ಈ ಅಧಿವೇಶನ ಏಪ್ರಿಲ್ 8 ರಂದು ಕೊನೆಗೊಳ್ಳಲಿದೆ. ಆದ್ರೆ ತಮಿಳುನಾಡು, ಪಶ್ಚಿಮ ಬಂಗಾಳ, ಕೇರಳ, ಅಸ್ಸೋಂ ಮತ್ತು ಪುದುಚೇರಿ ವಿಧಾನಸಭಾ ಚುನಾವಣೆಯ ದೃಷ್ಟಿಯಿಂದ, ಎಲ್ಲಾ ಪಕ್ಷಗಳು ಅಧಿವೇಶನದ ಅವಧಿಯನ್ನು ಮುಂದೂಡಲು ಆಗ್ರಹಿಸಿವೆ ಎಂದು ಮೂಲಗಳು ತಿಳಿಸಿವೆ. ಈ ನಿಟ್ಟಿನಲ್ಲಿ ಇನ್ನೂ ಅಧಿಕೃತ ನಿರ್ಧಾರ ತೆಗೆದುಕೊಳ್ಳಲಾಗಿಲ್ಲ.
ಅಧಿವೇಶನದ ಎರಡನೇ ಹಂತದಲ್ಲಿ ಸರ್ಕಾರದ ಗಮನವು ಮುಖ್ಯವಾಗಿ ಹಣಕಾಸು ಮಸೂದೆ ಮತ್ತು 2021-22ರ ಆರ್ಥಿಕ ವರ್ಷಕ್ಕೆ ಅನುದಾನಕ್ಕಾಗಿ ಪೂರಕ ಬೇಡಿಕೆಗಳನ್ನು ಅಂಗೀಕರಿಸುವುದಾಗಿದೆ. ಈ ಕಡ್ಡಾಯ ಕಾರ್ಯಸೂಚಿಗಳ ಹೊರತಾಗಿ ಈ ಅಧಿವೇಶನದಲ್ಲಿ ಅಂಗೀಕರಿಸಬೇಕಾದ ಹಲವಾರು ಮಸೂದೆಗಳನ್ನು ಸರ್ಕಾರ ಪಟ್ಟಿ ಮಾಡಿದೆ.
ಸರ್ಕಾರ ಪಟ್ಟಿ ಮಾಡಿದ ಮಸೂದೆಗಳಲ್ಲಿ ಪಿಂಚಣಿ ನಿಧಿ ನಿಯಂತ್ರಣ ಮತ್ತು ಅಭಿವೃದ್ಧಿ ಪ್ರಾಧಿಕಾರ (ತಿದ್ದುಪಡಿ) ಮಸೂದೆ, ರಾಷ್ಟ್ರೀಯ ಧನಸಹಾಯ ಮೂಲಸೌಕರ್ಯ ಮತ್ತು ಅಭಿವೃದ್ಧಿ ಬ್ಯಾಂಕ್ ಮಸೂದೆ, ವಿದ್ಯುತ್ (ತಿದ್ದುಪಡಿ) ಮಸೂದೆ, ಕ್ರಿಪ್ಟೋ ಕರೆನ್ಸಿ ಮತ್ತು ಅಧಿಕೃತ ಡಿಜಿಟಲ್ ಕರೆನ್ಸಿ ನಿಯಂತ್ರಣ ಮಸೂದೆ ಸೇರಿವೆ.
ಪಶ್ಚಿಮ ಬಂಗಾಳ, ತಮಿಳುನಾಡು, ಅಸ್ಸೋಂ, ಕೇರಳ ಮತ್ತು ಪುದುಚೇರಿಯಲ್ಲಿ ನಡೆಯಲಿರುವ ವಿಧಾನಸಭಾ ಚುನಾವಣೆಗಳ ಮೇಲೆ ಎಲ್ಲಾ ರಾಜಕೀಯ ಪಕ್ಷಗಳನ್ನು ಗಮನದಲ್ಲಿಟ್ಟುಕೊಂಡು ಬಜೆಟ್ ಅಧಿವೇಶನದ ಎರಡನೇ ಹಂತ ನಡೆಯುತ್ತಿದೆ. ಆದ್ರೆ ಮಾರ್ಚ್ನಿಂದ ಏಪ್ರಿಲ್‌ವರೆಗೂ ಈ ರಾಜ್ಯಗಳಲ್ಲಿ ಚುನಾವಣೆ ನಡೆಯಲಿದ್ದು, ರಾಜಕೀಯ ಪಕ್ಷಗಳು ಇಕ್ಕಟ್ಟಿಗೆ ಸಿಲುಕಿಕೊಂಡಂತಾಗಿವೆ.
ಬಜೆಟ್ ಅಧಿವೇಶನದ ಮೊದಲ ಹಂತವು ಜನವರಿ 29 ರಂದು ಪ್ರಾರಂಭವಾಗಿತ್ತು. ಇದರ ಅಡಿಯಲ್ಲಿ ಕೇಂದ್ರ ಬಜೆಟ್ನ್ನು ಫೆಬ್ರವರಿ 1 ರಂದು ಮಂಡಿಸಲಾಗಿತ್ತು.