ಕೋಲ್ಕತ್ತಾ(ಪಶ್ಚಿಮ ಬಂಗಾಳ): ಅಲಿಪುರ ಮೃಗಾಲಯಕ್ಕೆ ಶೀಘ್ರ ಹೊಸ ಅತಿಥಿ ಬರುತ್ತಿದ್ದಾರೆ. ಈ ಬಗ್ಗೆ ಅರಣ್ಯ ಇಲಾಖೆ, ಕೇಂದ್ರ ಮತ್ತು ರಾಜ್ಯ ಮೃಗಾಲಯದ ಅಧಿಕಾರಿಗಳು ಖಚಿತ ಪಡಿಸಿದ್ದಾರೆ. ಮೂಲಗಳ ಪ್ರಕಾರ ಮೂರು ಜೋಡಿ ಜೀಬ್ರಾಗಳನ್ನು ಅಲಿಪುರ ಮೃಗಾಲಯಕ್ಕೆ ತರಲಾಗುತ್ತಿದೆ. ಮೂರು ಗಂಡು ಮತ್ತು ಮೂರು ಹೆಣ್ಣು ಜೀಬ್ರಾಗಳನ್ನು ದಕ್ಷಿಣ ಆಫ್ರಿಕಾದ ಲಿಂಪೊಪೊ ಮಿಸ್ಟಿಕ್ ಮಂಕೀಸ್ ಮತ್ತು ಫೆದರ್ಸ್ ವೈಲ್ಡ್‌ಲೈಫ್ ಪಾರ್ಕ್‌ನಿಂದ ತರಲಾಗುತ್ತಿದೆ. ಈ ನಿಟ್ಟಿನಲ್ಲಿ ರಾಜ್ಯ ಅರಣ್ಯ ಇಲಾಖೆ ಮತ್ತು ಅಲಿಪುರ ಮೃಗಾಲಯ ಪ್ರಾಧಿಕಾರ ಈಗಾಗಲೇ ಅಧಿಕೃತ ಪ್ರಕ್ರಿಯೆ ಆರಂಭಿಸಿದೆ.
ಇದಕ್ಕಾಗಿ ಟೆಂಡರ್ ಪ್ರಕ್ರಿಯೆ ಕೂಡ ಪೂರ್ಣಗೊಂಡಿದೆ. 37 ಲಕ್ಷ 24 ಸಾವಿರ ದರ ನಿಗದಿಪಡಿಸಲಾಗಿದೆ. ಈ ಜೀಬ್ರಾಗಳನ್ನು 'ಅಂತಾರಾಷ್ಟ್ರೀಯ ಪ್ರಾಣಿ ವಿನಿಮಯ' ಕಾರ್ಯಕ್ರಮದ ಅಡಿ ಕರೆತರುವ ಪ್ರಕ್ರಿಯೆ ಆರಂಭಿಸಲಾಗಿದೆ. ಅಲಿಪುರ ಮೃಗಾಲಯದಲ್ಲಿ ಜೀಬ್ರಾಗಳಿಗಾಗಿ ಪ್ರತ್ಯೇಕ ಆವರಣ ಮತ್ತು ರಾತ್ರಿ ಶೆಲ್ಟರ್‌ಗಳನ್ನು ಸಹ ವ್ಯವಸ್ಥೆ ಮಾಡಲಾಗುತ್ತಿದೆ ಎಂದು ವರದಿಯಾಗಿದೆ.
ರಾಜ್ಯ ಅರಣ್ಯ ಸಚಿವೆ ಜ್ಯೋತಿಪ್ರಿಯಾ ಮಲ್ಲಿಕ್ ಮಾತನಾಡಿ, "ಆರು ಜೀಬ್ರಾಗಳನ್ನು ತರಲಾಗುತ್ತಿದೆ. ಇದಕ್ಕೂ ಮೊದಲು ಹಿಪಪೊಟಮಸ್(ನೀರಾನೆ) ಅನ್ನು ಅಲಿಪುರ ಮೃಗಾಲಯಕ್ಕೆ ತರಲಾಗಿತ್ತು. ಇನ್ನೂ ಹಲವಾರು ಪ್ರಾಣಿಗಳನ್ನು ತರಲಾಗುವುದು. ಅಲಿಪುರ ಮೃಗಾಲಯದ ಜತೆಗೆ ಸಿಲಿಗುರಿಯ ಬೆಂಗಾಲ್ ಸಫಾರಿ ಪಾರ್ಕ್ ಕೂಡ ಪ್ರವಾಸಿಗರನ್ನು ಆಕರ್ಷಿಸಲು ಸಿಂಹ ಹಾಗೂ ಘೇಂಡಾಮೃಗಗಳನ್ನು ತರಲು ಪ್ರಯತ್ನಿಸಲಾಗುತ್ತಿದೆ" ಎಂದು ತಿಳಿಸಿದ್ದಾರೆ.
"ಇತ್ತೀಚೆಗೆ ಈಶಾನ್ಯ ಭಾರತದ ಹಿಪಪೊಟಮಸ್ ಅನ್ನು ಅಲಿಪುರ ಮೃಗಾಲಯಕ್ಕೆ ತರಲಾಗಿತ್ತು. ಅದು ಇಲ್ಲಿನ ಪರಿಸರಕ್ಕೆ ಹೊಂದಿಕೊಳ್ಳುವ ಪ್ರಯತ್ನ ನಡೆಯುತ್ತಿದೆ. ಜಿರಾಫೆಯನ್ನು ನ್ಯೂ ಟೌನ್‌ನ ಹುಲ್ಲೆಗೆ ತರಲಾಗಿದೆ. ಅದೇ ಈಗ ಪ್ರಮುಖ ಆಕರ್ಷಣೆ. ಮತ್ತೊಂದೆಡೆ ಬೆಂಗಾಲ್ ಸಫಾರಿ ಪಾರ್ಕ್‌ನಲ್ಲಿರುವ ಏಕೈಕ ಘೇಂಡಾಮೃಗ ಭೀಮ್‌ಗೆ ಸಂಗಾತಿಗಾಗಿ ಅರಣ್ಯ ಇಲಾಖೆ ಹುಡುಕಾಟ ಆರಂಭಿಸಿದೆ. ಸಫಾರಿ ಪಾರ್ಕ್‌ಗೆ ಶೀಘ್ರದಲ್ಲೇ ಮತ್ತೊಂದು ಘೇಂಡಾಮೃಗವನ್ನು ತರಲಾಗುವುದು" ಎಂದರು.
"ದಕ್ಷಿಣ ಆಫ್ರಿಕಾದಿಂದ ವಿಮಾನದ ಮೂಲಕ ಜೀಬ್ರಾಗಳು ಭಾರತಕ್ಕೆ ಆಗಮಿಸಲಿವೆ. ವಿಮಾನ ಹಾರಾಟದ ಸಮಯದಲ್ಲಿ ಪ್ರಾಣಿಗಳಿಗೆ ಯಾವುದೇ ತೊಂದರೆಯಾಗದಂತೆ ನೋಡಿಕೊಳ್ಳಲು ಪಶುವೈದ್ಯರು, ನುರಿತ ಅರಣ್ಯ ಕಾರ್ಯಕರ್ತರೊಂದಿಗೆ ವಿಶೇಷ ತಾಂತ್ರಿಕ ಸಮಿತಿಯನ್ನು ರಚಿಸಲಾಗುವುದು. ನಗರದ ಮೃಗಾಲಯದಲ್ಲಿ ಜೀಬ್ರಾಗಳಿಗೆ ಸ್ಥಳಾವಕಾಶ ಕಲ್ಪಿಸಲು ಪ್ರತ್ಯೇಕ ಆವರಣ ಮತ್ತು ರಾತ್ರಿ ಶೆಲ್ಟರ್‌ಗಳನ್ನು ವ್ಯವಸ್ಥೆ ಮಾಡಲಾಗಿದೆ. ಕೆಲವು ಅರಣ್ಯ ಸಿಬ್ಬಂದಿಗೆ ಪ್ರಾಣಿಗಳನ್ನು ನೋಡಿಕೊಳ್ಳಲು ವಿಶೇಷ ತರಬೇತಿ ನೀಡಲಾಗಿದ್ದು, ಅವುಗಳಿಗೆ ಆಹಾರದ ಪಟ್ಟಿಯನ್ನು ಸಹ ಸಿದ್ಧಪಡಿಸಲಾಗಿದೆ. ಹೊಸ ಪರಿಸರಕ್ಕೆ ಹೊಂದಿಕೊಂಡ ನಂತರ, ಜೀಬ್ರಾಗಳನ್ನು ರಾಜ್ಯದ ಬೇರೆ ಸ್ಥಳಕ್ಕೆ ಸ್ಥಳಾಂತರಿಸಬಹುದು" ಎಂದು ಮೃಗಾಲಯದ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಇದನ್ನೂ ಓದಿ: ಆಫ್ರಿಕಾದಿಂದ 12 ಚಿರತೆಗಳು ಭಾರತಕ್ಕೆ ಆಗಮನ: ಚೀತಾಗಳ ಕುರಿತು ಪ್ರಮುಖ ಅಂಶಗಳಿವು..
12 ಚೀತಾಗಳು ಭಾರತಕ್ಕೆ: ಇನ್ನು ಕಳೆದ ಸೆ.17 ರಂದು ಪ್ರಧಾನಿ ನರೇಂದ್ರ ಮೋದಿ ಅವರ 72 ನೇ ಹುಟ್ಟುಹಬ್ಬದ ಸಂದರ್ಭದಲ್ಲಿ, ನಮೀಬಿಯಾದಿಂದ 8 ಚಿರತೆಗಳನ್ನು ತರಲಾಗಿತ್ತು. ಕುನೋದಲ್ಲಿ ಪ್ರಧಾನಿ ಮೋದಿ ಅವರೇ ಅಭಯಾರಣ್ಯಕ್ಕೆ ಬಿಟ್ಟಿದ್ದರು. ಬಳಿಕ ಫೆ.18ರಂದು ಭಾರತೀಯ ವಾಯುಪಡೆಯ ಸಿ-17 ಗ್ಲೋಬ್ ಮಾಸ್ಟರ್ ಕಾರ್ಗೋ ವಿಮಾನದ ಮೂಲಕ ದಕ್ಷಿಣ ಆಫ್ರಿಕಾದಿಂದ 12 ಚೀತಾಗಳನ್ನು ಭಾರತಕ್ಕೆ ತರಲಾಗಿತ್ತು. ಚಿರತೆಗಳನ್ನು ಭಾರತಕ್ಕೆ ಮರು ಪರಿಚಯಿಸುವ 'ಅಂತರ್ ಸರ್ಕಾರಿ ಒಪ್ಪಂದ'ದ ಭಾಗವಾಗಿ 12 ದಕ್ಷಿಣ ಆಫ್ರಿಕಾದ ಚಿರತೆಗಳು ಮಧ್ಯಪ್ರದೇಶದ ಗ್ವಾಲಿಯರ್‌ಗೆ ಆಗಮಿಸಿದ್ದವು.
ಇದನ್ನೂ ಓದಿ: ಆಫ್ರಿಕನ್ ಚೀತಾಗಳನ್ನು ಅಭಯಾರಣ್ಯಕ್ಕೆ ಬಿಟ್ಟ ನಮೋ.. ದೇಶದ ಚರಿತ್ರೆಯಲ್ಲಿ ಐತಿಹಾಸಿಕ ದಿನ ಎಂದ ಪಿಎಂ