ಸವಾಯ್ ಮಾಧೋಪುರ್ (ರಾಜಸ್ಥಾನ): ಹುಲಿಯೊಂದರ ಕೊರಳಿಗೆ ವೈರ್ ಸುತ್ತಿಕೊಂಡಿರುವುದು ಕ್ಯಾಮರಾದಲ್ಲಿ ಸೆರೆಯಾಗುತ್ತಿದ್ದಂತೆ ರಾಜಸ್ಥಾನದ ರಣತಂಬೂರ್ ನ್ಯಾಷನಲ್ ಪಾರ್ಕ್ನ ಅರಣ್ಯಾಧಿಕಾರಿಗೆ ನೋಟಿಸ್ ನೀಡಲಾಗಿದ್ದು, ಬೇಟೆಗಾರರ ವಿರುದ್ಧ ರೆಡ್ ಅಲರ್ಟ್ ಘೋಷಣೆ ಮಾಡಲಾಗಿದೆ.
ಟಿ-108 ಹೆಸರಿನ ಹುಲಿಯ ಕೊರಳಿಗೆ ತಂತಿ ಸುತ್ತಿಕೊಂಡಿದ್ದು, ಇದು ತಿಳಿದು ಬಂದ ನಂತರ ಎಲ್ಲಾ ಅರಣ್ಯ ಸಿಬ್ಬಂದಿ ಹುಲಿಯನ್ನು ಹುಡುಕುವ ಸಲುವಾಗಿ ತಮ್ಮ ಎಲ್ಲಾ ರಜೆಗಳನ್ನು ರದ್ದು ಮಾಡಿ, ಕಾರ್ಯಾಚರಣೆ ಆರಂಭಿಸಿದ್ದರು.
ಹುಲಿಯನ್ನು ಪತ್ತೆ ಹಚ್ಚಿ ಅದರ ಕುತ್ತಿಗೆಯಲ್ಲಿದ್ದ ವೈರ್ ಅನ್ನು ಸುರಕ್ಷಾ ಕ್ರಮಗಳನ್ನು ಅನುಸರಿಸಿ ತೆಗೆಯಲಾಗಿದ್ದು, ಹುಲಿಯ ದೇಹದ ಮೇಲೆ ಯಾವುದೇ ಗಾಯದ ಗುರುತುಗಳು ಕಂಡು ಬಂದಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಓದಿ : ಬಂಡೀಪುರದ ರಾಷ್ಟ್ರೀಯ ಹುಲಿ ಸಂರಕ್ಷಿತ ಪ್ರದೇಶದಲ್ಲಿ ಚಿರತೆ ಸಾವು
ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿಯಾದ ಶೃತಿ ಶರ್ಮಾ ಪ್ರಾದೇಶಿಕ ಅರಣ್ಯಾಧಿಕಾರಿಯಾದ ಅನಿಲ್ ಕುಮಾರ್ಗೆ ನೋಟಿಸ್ ನೀಡಿದ್ದು ಅವರ ವಿರುದ್ಧ ಅವೇಟಿಂಗ್ ಪೋಸ್ಟಿಂಗ್ ಆರ್ಡರ್ (ಎಪಿಒ ) ಅನ್ನು ಹೊರಡಿಸಲಾಗಿದೆ.
ಇದಾದ ನಂತರ ರಣತಂಬೂರ್ ನ್ಯಾಷನಲ್ ಪಾರ್ಕ್ ಸುತ್ತಲೂ ನಿಗಾ ವಹಿಸಲಾಗಿದ್ದು, ಬೇಟೆಗಾರರ ವಿರುದ್ಧ ರೆಡ್ ಅಲರ್ಟ್ ಘೋಷಣೆ ಮಾಡಲಾಗಿದೆ. ಎಲ್ಲಾ ಪ್ರದೇಶಗಳಲ್ಲಿ ಅಧಿಕಾರಿಗಳನ್ನು ಗಸ್ತು ತಿರುಗಲು ಸೂಚನೆ ನೀಡಲಾಗಿದೆ. ಈ ಸದ್ಯಕ್ಕೆ ಪ್ರಕರಣದ ತನಿಖೆ ನಡೆಸಲಾಗುತ್ತಿದೆ.
2018ರಲ್ಲಿ ರಣತಂಬೂರ್ ನ್ಯಾಷನಲ್ ಪಾರ್ಕ್ನಲ್ಲಿ ಎರಡು ಹುಲಿಗಳು ಸಾವನ್ನಪ್ಪಿ, ವಿಷಾಹಾರ ಸೇವನೆಯಿಂದ ಮೃತಪಟ್ಟಿವೆ ಎಂದು ವರದಿಯಾಗಿತ್ತು. ಈಗ ಹುಲಿಗಳ ಸಂಖ್ಯೆ ಕಡಿಮೆಯಾಗುತ್ತಿದ್ದು, ಅವುಗಳ ಸಂರಕ್ಷಣೆಗಾಗಿ ಅನೇಕ ಕ್ರಮಗಳನ್ನು ಕೈಗೊಳ್ಳಲಾಗಿದೆ.