ಶ್ರೀನಗರ (ಜಮ್ಮು ಕಾಶ್ಮೀರ್): ಕಳೆದ ಎರಡು ವರ್ಷಗಳಿಂದ ಕಣಿವೆಯಲ್ಲಿನ ಜನ ಕೊರೊನಾದಿಂದ ಹೆಚ್ಚಾಗಿ ಮನೆಗಳಿಂದ ಹೊರಗೆ ಬರುತ್ತಿರಲಿಲ್ಲ. ಆದರೆ, ಕೆಲವರು ಏನಾದರೂ ವಿಶಿಷ್ಟವಾದದ್ದನ್ನು ಮಾಡಬೇಕು ಅಂದುಕೊಂಡು ಯಶಸ್ಸನ್ನೂ ಕಂಡುಕೊಂಡಿದ್ದಾರೆ. ಅವರಲ್ಲಿ ಒಬ್ಬರು ಶ್ರೀನಗರದ ನವಾಬ್ ಬಜಾರ್ ಪ್ರದೇಶದ ನಿವಾಸಿ 21 ವರ್ಷದ ಅಕ್ಬರ್ ಟ್ಯಾಂಗೋ.
ಮಾಡೆಲ್ ಆಗಿ ಕಾರ್ಯನಿರ್ವಹಿಸುತ್ತಿರುವ ಬಿಬಿಎ ವಿದ್ಯಾರ್ಥಿಯಾಗಿರುವ ಟ್ಯಾಂಗೋ ಕಳೆದ ಎರಡು ವರ್ಷಗಳಲ್ಲಿ ಪೆಟ್ ಸ್ಟೋರ್ ಮತ್ತು ಕ್ಲಿನಿಕ್ ಅನ್ನು ತೆರೆದಿದ್ದಲ್ಲದೆ ವಿದೇಶಿ ಕೋಳಿಗಳಿಗಳ ಫಾರ್ಮ್ ಅನ್ನು ಸಹ ಪ್ರಾರಂಭಿಸಿದ್ದಾರೆ.
ಈ ವಿಶಿಷ್ಟ ಫಾರ್ಮ್‌ನಲ್ಲಿ, ಪ್ರಸ್ತುತ ಜಪಾನೀಸ್ ಬಾಂಟಮ್, ಬ್ರಿಟಿಷ್ ಸೈಬರೈಟ್, ಚೈನೀಸ್ ಸಿಲ್ಕಿ, ಬ್ರಿಟಿಷ್ ಪೆಕಿನ್, ಐರಿಶ್ ಲೆಘೋರ್ನ್, ಆಸ್ಟ್ರೇಲಿಯನ್ ಬ್ಲ್ಯಾಕ್ ಆಸ್ಟ್ರಲೋಪಿಥೆಕಸ್, ಜಪಾನೀಸ್ ಒನಗಡೋರಿ, ಫ್ರೆಂಚ್ ಎಸ್ಟೈರ್ಸ್, ಕೊಲಂಬಿಯನ್ ಬಾಂಟಮ್, ಅಮೆರಿಕನ್ ಬಫ್ ಬ್ರಹ್ಮಾ ಜೊತೆಗೆ ಭಾರತೀಯ ಖಡಕ್ನಾಥ್, ಅಸೀಲ್ ಮುರ್ಗಾ ಮತ್ತು ಇತರ ವಿದೇಶಿ ತಳಿಗಳನ್ನು ಹೊಂದಿದ್ದಾರೆ.
'ನನಗೆ ಬಾಲ್ಯದಿಂದಲೂ ಪ್ರಾಣಿ-ಪಕ್ಷಿಗಳೆಂದರೆ ಒಲವು. ಆದರೆ, ಸಾಂಕ್ರಾಮಿಕ ಸಮಯದಲ್ಲಿ ನನ್ನ ಉತ್ಸಾಹವನ್ನು ಪೂರೈಸಲು ನನಗೆ ಅವಕಾಶ ಸಿಕ್ಕಿತು. ದಕ್ಷಿಣ ಭಾರತದಲ್ಲಿ ವಿದೇಶಿ ತಳಿಗಳು ಲಭ್ಯವಿವೆ ಎಂದು ನಾನು ಕಂಡುಕೊಂಡಿದ್ದೆ. ನಾನು ಬೆಂಗಳೂರಿನಲ್ಲಿ ಮಾಡೆಲಿಂಗ್ ಮಾಡಿದ್ದರಿಂದ ಅಲ್ಲಿಯೂ ಒಂದು ಮನೆ ಇದೆ. ನಾನು ಅಲ್ಲಿಯೇ ಇದ್ದುಕೊಂಡು ಒಂದು ಯೋಚನೆಯಿಂದ ಈ ಫಾರ್ಮ್ ಅನ್ನು ಪ್ರಾರಂಭಿಸಿದೆ. ಆದರೆ, ಕಾಶ್ಮೀರದಲ್ಲಿ ಈ ಕೋಳಿಗಳನ್ನು ಪಡೆಯಲು ನಾನು ಸಾಕಷ್ಟು ಕಷ್ಟಗಳನ್ನು ಎದುರಿಸಿದೆ' ಎಂದು ಟ್ಯಾಂಗೋ 'ಈಟಿವಿ ಭಾರತ'ಕ್ಕೆ ತಿಳಿಸಿದ್ದಾರೆ.
ಪ್ರತಿ ಕೋಳಿಗೂ ವಿಭಿನ್ನ ಆವಾಸ ಸ್ಥಾನವಿದೆ, ಆದ್ದರಿಂದ ನೀವು ಅವುಗಳನ್ನು ವಿಭಿನ್ನವಾಗಿಯೇ ಪರಿಗಣಿಸಬೇಕು, ಈ ಕಾರಣಕ್ಕೆ ಪ್ರತಿ ತಳಿಗೂ ವಿಭಿನ್ನವಾದ ಗೂಡುಗಳನ್ನು ನಿರ್ಮಾಣ ಮಾಡಲಾಗಿದೆ ಎಂದಿದ್ದಾರೆ.
ಬೇಸಿಗೆ ಮತ್ತು ಚಳಿಗಾಲದ ತಿಂಗಳುಗಳನ್ನು ಪರಿಗಣಿಸಿ ಕೋಪ್ ಅನ್ನು ಸಿದ್ಧಪಡಿಸಲಾಗಿದೆ. ಅವುಗಳಿಗೆ ನೀಡುವ ಆಹಾರವೆಲ್ಲ ಸಾವಯವ. ನನ್ನ ಮೆಚ್ಚಿನ ಕೋಳಿ ಎಂದರೆ ಕೊಲಂಬಿಯನ್ ಬ್ರಹ್ಮ ಮತ್ತು ಜಪಾನೀಸ್ ಬಾಂಟಮ್ ಆಗಿದ್ದು, ಇವೆರಡೂ ಸ್ನೇಹಪರವಾಗಿವೆ ಎಂದು ವಿವರಿಸಿದರು.
ಬೆಲೆಗಳ ಬಗ್ಗೆ ಮಾತನಾಡುವಾಗ, ಈ ಪಕ್ಷಿಗಳ ಬೆಲೆಗಳು ಅವುಗಳ ವಯಸ್ಸನ್ನು ಆಧರಿಸಿವೆ. ನಮ್ಮಲ್ಲಿರುವ ಅಗ್ಗದ ತಳಿಯು ಪ್ರತಿ ಜೋಡಿಗೆ 3,000 ರೂ. ಮತ್ತು ಅತ್ಯಂತ ದುಬಾರಿ ತಳಿ ಎಂದರೆ ಅವು 18,000 ರೂ., ವನರಾಜ ಮುರ್ಗ್ ಮತ್ತು ಖಡಕ್ನಾಥ್ ತಳಿಗಳಂತೆ ಈ ಪಕ್ಷಿಗಳ ಬಗ್ಗೆಯೂ ಸ್ಥಳೀಯ ಆಡಳಿತ ಆಸಕ್ತಿ ವಹಿಸಬೇಕು. ಇದು ನಮ್ಮ ಆರ್ಥಿಕತೆಯ ಮೇಲೂ ಉತ್ತಮ ಪರಿಣಾಮ ಬೀರುತ್ತದೆ ಎಂದು ಅಕ್ಬರ್ ಟ್ಯಾಂಗೋ ಹೇಳಿದ್ದಾರೆ.
ಇದನ್ನೂ ಓದಿ : ಗಂಗೋತ್ರಿ ಧಾಮದಿಂದ ದಂಡವತ್ ಯಾತ್ರೆ ಆರಂಭಿಸಿದ ಮೂವರು ಸಾಧುಗಳು!