ಹೈದರಾಬಾದ್: ದೇಶದಲ್ಲಿ ಕೋವಿಡ್ ಸಂಕಷ್ಟದ ಸಮಯದಲ್ಲಿ ವಿವಿಧ ಕ್ಷೇತ್ರಗಳ ಗಣ್ಯರು ಸಾಕಷ್ಟು ನೆರವು ನೀಡುತ್ತಿದ್ದಾರೆ. ಈ ಸಾಲಿಗೆ ಬಾಲಿವುಡ್ ನಟ ಅಜಯ್ ದೇವಗನ್ ಕೂಡ ಸೇರ್ಪಡೆಯಾಗಿದ್ದಾರೆ.
ಬೃಹನ್ ಮುಂಬೈ ಮುನ್ಸಿಪಲ್ ಕಾರ್ಪೋರೇಷನ್ (ಬಿಎಂಸಿ)ಗೆ 20 ಹಾಸಿಗೆಯ ತಾತ್ಕಾಲಿಕ ಕೋವಿಡ್ ಐಸಿಯು ವಾರ್ಡ್ ನಿರ್ಮಿಸಲು ತನ್ನ ಸ್ನೇಹಿತರು ಮತ್ತು ಚಿತ್ರೋದ್ಯಮದ ಗಣ್ಯರ ನೆರವಿನಿಂದ ಗಮನಾರ್ಹವಾದ ಮೊತ್ತವನ್ನು ದೇಣಿಗೆಯಾಗಿ ನೀಡಿದ್ದಾರೆ.
ವೆಬ್‌ಲಾಯ್ಡ್ ವರದಿಯ ಪ್ರಕಾರ, ತಾತ್ಕಾಲಿಕ ಆಸ್ಪತ್ರೆಯನ್ನು ಮುಂಬೈನ ಶಿವಾಜಿ ಪಾರ್ಕ್ ಪ್ರದೇಶದಲ್ಲಿರುವ ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಹಾಲ್‌ನಲ್ಲಿ ನಿರ್ಮಿಸಲಾಗುತ್ತದೆ. ಅಜಯ್ ದೇವಗನ್ ಅವರ ಸಂಸ್ಥೆಯಾದ ಎನ್.ವೈ. ಫೌಂಡೇಶನ್ ಉದಾತ್ತ ಕೆಲಸಕ್ಕಾಗಿ ಬಿಎಂಸಿಗೆ 1 ಕೋಟಿ ದೇಣಿಗೆ ನೀಡಿದೆ ಎಂದು ವರದಿಯಲ್ಲಿ ಹೇಳಲಾಗಿದೆ.
ಇದನ್ನೂ ಓದಿ: ಭಾರತದಲ್ಲಿ ಕೋವಿಡ್ ಎರಡನೇ ಅಲೆ: ನಾವು ಎಡವಿದ್ದೆಲ್ಲಿ ಗೊತ್ತಾ?
ನೂತನವಾಗಿ ನಿರ್ಮಾಣವಾಗಲಿರುವ ಕೋವಿಡ್ ಐಸಿಯು ವಾರ್ಡ್ ಅಲ್ಲಿಂದ ಸ್ವಲ್ಪ ದೂರವಿರುವ ಪಿ.ಡಿ.ಹಿಂದೂಜಾ ಆಸ್ಪತ್ರೆಯ ವೈದ್ಯರು ನಿರ್ವಹಿಸಲಿದ್ದಾರೆ ಎಂದು ತಿಳಿದು ಬಂದಿದೆ. ಈ ಮಧ್ಯೆ ಕೋವಿಡ್ ಸಾಂಕ್ರಾಮಿಕ ರೋಗದ ವಿರುದ್ಧದ ಹೋರಾಟಕ್ಕೆ ಬಾಲಿವುಡ್ ನಟ ಅಕ್ಷಯ್ ಕುಮಾರ್ ಮತ್ತು ಅವರ ಪತ್ನಿ ಟ್ವಿಂಕಲ್ ಖನ್ನಾ ನೂರು ಆಮ್ಲಜನಕ ಸಾಂದ್ರಕಗಳನ್ನು ಕೊಡುಗೆಯಾಗಿ ನೀಡಿದ್ದಾರೆ.
ಆಯುಷ್ಮಾನ್ ಖುರಾನಾ ಮತ್ತು ಅವರ ಪತ್ನಿ ತಾಹಿರಾ ಕಶ್ಯಪ್ ಕೂಡ ಮಹಾರಾಷ್ಟ್ರ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಅವರ ಪರಿಹಾರ ನಿಧಿಗೆ ನೆರವು ನೀಡಿದ್ದು, ಸಾಂಕ್ರಾಮಿಕ ರೋಗದಿಂದ ಹೊರಬರಲು ವಿಶೇಷ ಚೇತನರಿಗೆ ಸಹಾಯ ಮಾಡಲು ಮುಂದೆ ಬಂದಿದ್ದಾರೆ.