ನವದೆಹಲಿ: ಕಳೆದ ವರ್ಷ ಕೋಯಿಕೋಡ್ ವಿಮಾನ ದುರಂತದಲ್ಲಿ ಮೃತಪಟ್ಟ ಕ್ಯಾಪ್ಟನ್ ದೀಪಕ್ ಸಾಠೆ ಅವರ ಕುಟುಂಬಕ್ಕೆ ಸರ್ಕಾರದಿಂದ ಪರಿಹಾರ ದೊರೆತಿಲ್ಲ. ಪರಿಹಾರಕ್ಕಾಗಿ ಅವರ ಕುಟುಂಬ ಇನ್ನೂ ಕಾಯುತ್ತಿದೆ.
ನಮ್ಮ ತಂದೆ ಮೃತಪಟ್ಟು 10 ತಿಂಗಳಾಗಿದೆ. ನೌಕರರ ಪರಿಹಾರ ಆಯುಕ್ತರ ಕಚೇರಿಯಲ್ಲಿ (ಮುಂಬೈ, ಬಿಕೆಸಿ) ಅಧಿಕಾರಿಯೊಬ್ಬರು ಸಾಂಕ್ರಾಮಿಕ ರೋಗದ ಮಧ್ಯದಲ್ಲಿಯೂ ನನ್ನ ತಾಯಿಗೆ ದಾರಿ ತಪ್ಪಿಸುತ್ತಿದ್ದಾರೆ ಎಂದು ದೀಪಕ್ ಸಾಠೆ ಅವರ ಪುತ್ರ ಧನಂಜಯ್ ಗುರುವಾರ ಟ್ವಿಟ್ಟರ್ನಲ್ಲಿ ಬರೆದುಕೊಂಡಿದ್ದಾರೆ.
ಶುಕ್ರವಾರ ಧನಂಜಯ ಸಾಠೆ ಟ್ವೀಟ್‌ಗೆ ಪ್ರತಿಕ್ರಿಯಿಸಿದ ನಾಗರಿಕ ವಿಮಾನಯಾನ ಸಚಿವಾಲಯ, ದಿವಂಗತ ಕ್ಯಾಪ್ಟನ್ ದೀಪಕ್ ಸಾಠೆ ಅವರ ಕುಟುಂಬಕ್ಕೆ ಪರಿಹಾರ ನೀಡುವ ಕುರಿತು ವಾಯುಯಾನ ಕಾರ್ಯದರ್ಶಿ ಮಹಾರಾಷ್ಟ್ರದ ಮುಖ್ಯ ಕಾರ್ಯದರ್ಶಿಯನ್ನು ಸಂಪರ್ಕಿಸಿದ್ದಾರೆ ಎಂದು ಹೇಳಿದ್ದಾರೆ.
ಪರಿಹಾರದ ಮೊತ್ತವನ್ನು ಏರ್ ಇಂಡಿಯಾ ಕೇರಳದ ಪಾಲಕ್ಕಾಡ್ ನೌಕರರ ಪರಿಹಾರ ಆಯುಕ್ತ ಕಚೇರಿಗೆ ಜಮಾ ಮಾಡಿದೆ. ನಂತರ ಅದನ್ನು ನಿಮ್ಮ ಸಂಬಂಧಿಕರ ಕೋರಿಕೆಯ ಮೇರೆಗೆ ಬಾಂದ್ರಾ ನೌಕರರ ಪರಿಹಾರ ಆಯುಕ್ತ ಕಚೇರಿಗೆ ವರ್ಗಾಯಿಸಲಾಯಿತು ಎಂದು ಸಚಿವಾಲಯ ತಿಳಿಸಿದೆ.
ಮರಣಿಸಿದ ನೌಕರನ ಉತ್ತರಾಧಿಕಾರಿಯಿಂದ ಕಾನೂನುಬದ್ಧವಾಗಿ ಪ್ರಾಧಿಕಾರದ ಮುಂದೆ ಹಕ್ಕು ಸಲ್ಲಿಸಿದ ನಂತರ ಪರಿಹಾರ ವಿತರಿಸಬಹುದು. ಇದು ಶಾಸನಬದ್ಧ ನಿಬಂಧನೆಯಾಗಿದ್ದು, ಅದನ್ನು ಅನುಸರಿಸಬೇಕಾಗಿದೆ ಎಂದು ಸಚಿವಾಲಯ ಸ್ಪಷ್ಟನೆ ನೀಡಿದೆ.
ವಿಮಾನ ದುರಂತ ತನಿಖೆಗಾಗಿ ಕಳೆದ ವರ್ಷ ಆಗಸ್ಟ್ 13 ರಂದು ಐವರು ಸದಸ್ಯರ ಸಮಿತಿಯೊನ್ನಳಗೊಂಡ ವಿಮಾನ ಅಪಘಾತ ತನಿಖಾ ಮಂಡಳಿ (ಎಎಐಬಿ) ರಚಿಸಲಾಗಿತ್ತು. ಆದ್ರೆ ಈ ದುರಂತದ ತನಿಖೆ ಮುಂದುವರಿದಿದ್ದು, ಇನ್ನೂ ತನ್ನ ವರದಿಯನ್ನು ಸಲ್ಲಿಸಿಲ್ಲ. ಈ ಸಮಿತಿಗೆ ಮಾಜಿ ಡಿಜಿಸಿಎ ಕ್ಯಾಪ್ಟನ್ ಎಸ್.ಎಸ್ ಚಹರ್ ತನಿಖಾಧಿಕಾರಿಯಾಗಿದ್ದಾರೆ.
ಹಿನ್ನೆಲೆ...
2020ರ ಆಗಸ್ಟ್ 7 ರಂದು ಕೋಯಿಕೋಡ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಇಳಿಯುವಾಗ ದುಬೈನಿಂದ ಬಂದ ಏರ್ ಇಂಡಿಯಾ ಎಕ್ಸ್‌ಪ್ರೆಸ್ ವಿಮಾನ ರನ್ವೇನಲ್ಲಿ ಅಪಘಾತಕ್ಕೀಡಾಗಿ ಎರಡು ಭಾಗವಾಗಿತ್ತು. ಈ ದುರ್ಘಟನೆಯಲ್ಲಿ ಇಬ್ಬರು ಪೈಲಟ್ ಮೃತಪಟ್ಟಿದ್ದಾರೆ ಎಂದು ಏರ್ ಇಂಡಿಯಾ ಎಕ್ಸ್‌ಪ್ರೆಸ್ ದೃಢಪಡಿಸಿತ್ತು. ಮೃತರನ್ನು ಏರ್ ಇಂಡಿಯಾ ಕ್ಯಾಪ್ಟನ್ ದೀಪಕ್ ವಸಂತ್ ಸಾಠೆ ಮತ್ತು ಸಹ ಪೈಲಟ್ ಅಖಿಲೇಶ್ ಕುಮಾರ್ ಎಂದು ಗುರುತಿಸಲಾಗಿತ್ತು.
ಪೈಲಟ್ ಮತ್ತು ಸಹ ಪೈಲಟ್ ಸಾಂಕ್ರಾಮಿಕ ರೋಗದಿಂದಾಗಿ ವಿದೇಶದಲ್ಲಿ ಸಿಲುಕಿದ್ದ ಭಾರತೀಯರನ್ನು ವಾಪಸ್ ಕರೆತರುವ ವಂದೇ ಭಾರತ ಮಿಷನ್‌ನ ಭಾಗವಾಗಿ ವಿಮಾನ ಹಾರಾಟ ಸೇವೆಯಲ್ಲಿ ನಿರತರಾಗಿದ್ದರು.
ಕ್ಯಾಪ್ಟನ್ ದೀಪಕ್ ವಸಂತ್ ಸಾಠೆ ಅವರು ಭಾರತೀಯ ವಾಯುಪಡೆಯ ಮಾಜಿ ಅಧಿಕಾರಿಯಾಗಿದ್ದು, ಅಂಬಾಲಾದಲ್ಲಿ ಮಿಗ್ -21 ಯುದ್ಧ ವಿಮಾನವನ್ನು 17 ಸ್ಕ್ವಾಡ್ರನ್ನೊಂದಿಗೆ ಹಾರಿಸಿದ್ದರು. 1999ರ ಕಾರ್ಗಿಲ್ ಯುದ್ಧದಲ್ಲಿ ಸ್ಕ್ವಾಡ್ರನ್ ಪಾಲ್ಗೊಂಡಿತ್ತು. 1981ರಲ್ಲಿ ಸೇವೆಗೆ ಸೇರಿದ್ದರು. 22 ವರ್ಷಗಳ ಕಾಲ ವಾಯುಪಡೆಯಲ್ಲಿ ಸೇವೆ ಸಲ್ಲಿಸಿ 2003ರಲ್ಲಿ ಸ್ಕ್ವಾಡ್ರನ್ನ ಕ್ಯಾಪ್ಟನ್ ಆಗಿ ನಿವೃತ್ತರಾದರು. ವಾಯುಪಡೆಯ ತರಬೇತಿ ಅಕಾಡೆಮಿಯಲ್ಲಿ ಬೋಧಕನಾಗಿಯೂ ಸೇವೆ ಸಲ್ಲಿಸಿದ್ದ ಸಾಠೆ, ಐಎಎಫ್‌ನಿಂದ ನಿವೃತ್ತಿ ಹೊಂದಿದ ಬಳಿಕ ನಾಗರಿಕ ವಿಮಾನ ಹಾರಾಟದಲ್ಲಿ ಸೇವೆ ಸಲ್ಲಿಸಲು ಏರ್ ಇಂಡಿಯಾಕ್ಕೆ ಸೇರಿದರು.
ಸಾಠೆ ಅವರು ನ್ಯಾಷನಲ್ ಡಿಫೆನ್ಸ್ ಅಕಾಡೆಮಿಯಲ್ಲಿ (ಎನ್‌ಡಿಎ) 58ನೇ ರಾಷ್ಟ್ರಪತಿ ಚಿನ್ನದ ಪದಕ ಪಡೆದಿದ್ದರು. 127 ಪೈಲಟ್‌ಗಳ ಕೋರ್ಸ್‌ನಲ್ಲಿ ಸ್ವೋರ್ಡ್ ಆಫ್ ಆನರ್ ಆಗಿದ್ದರು. ಭಾರತೀಯ ವಾಯುಸೇನೆಯಲ್ಲಿ ಟೆಸ್ಟ್ ಪೈಲಟ್ ಆಗಿದ್ದರೂ ಬೋಯಿಂಗ್ 737 ವಾಣಿಜ್ಯ ವಿಮಾನಗಳನ್ನು ನಿರ್ವಹಿಸುವಲ್ಲಿ ಪರಿಣಿತರಾಗಿದ್ದರು.
ವಿಮಾನ ದುರಂತದಲ್ಲಿ ಮೃತಪಟ್ಟವರ ಕುಟುಂಬಗಳಿಗೆ ನಾಗರಿಕ ವಿಮಾನಯಾನ ಸಚಿವ ಹರ್ದೀಪ್ ಸಿಂಗ್ ಪುರಿ ತಲಾ 10 ಲಕ್ಷ ರೂ. ಮಧ್ಯಂತರ ಪರಿಹಾರ ಘೋಷಣೆ ಮಾಡಿದ್ದರು.
ಸಾಠೆ ಅವರಿಗೆ ವಿಮಾನ ಅಪಘಾತದ ಸುಳಿವು ಸಿಕ್ಕ ತಕ್ಷಣವೇ ಮೊದಲು ಪ್ರಯಾಣಿಕರನ್ನು ಸುರಕ್ಷಿತವಾಗಿ ತಲುಪಿಸಲು ಮುಂದಾಗಿದ್ದರು. ಮುನ್ನೆಚ್ಚರಿಕೆಯಿಂದ ವಿಮಾನವನ್ನು ಲ್ಯಾಂಡ್ ಮಾಡಿದ್ದರಿಂದ ನೂರಾರು ಜನರ ಪ್ರಾಣ ಉಳಿದಿತ್ತು. ದುರಾದೃಷ್ಟವಶಾತ್ ಪೈಲಟ್ ಸಾಠೆ ಮತ್ತು ಇನ್ನೋರ್ವ ಪೈಲಟ್ ಸಾವನ್ನಪ್ಪಿದ್ದರು.