ಗಾಂಧಿನಗರ : ಭಾರತೀಯ ಬುಡಕಟ್ಟು ಪಕ್ಷ (ಬಿಟಿಪಿ) ಮತ್ತು ಅಖಿಲ ಭಾರತ ಮಜ್ಲಿಸ್-ಎ-ಇಟ್ಟೇಹಾದ್-ಉಲ್-ಮುಸ್ಲೀಮೀನ್ (ಎಐಎಂಐಎಂ) ಮುಂಬರುವ ಸ್ಥಳೀಯ ಸಂಸ್ಥೆ ಚುನಾವಣೆಗಳಲ್ಲಿ ಗುಜರಾತ್ನಲ್ಲಿ ಒಟ್ಟಾಗಿ ಸ್ಪರ್ಧಿಸುವುದಾಗಿ ಘೋಷಿಸಿವೆ.
ಗುಜರಾತ್ನ ಸ್ಥಳೀಯ ಸಂಸ್ಥೆ ಚುನಾವಣೆಗಳಲ್ಲಿ ಎಂಐಎಂ ಪಕ್ಷವು ಭಾರತೀಯ ಬುಡಕಟ್ಟು ಪಕ್ಷ (ಬಿಟಿಪಿ) ಜೊತೆಗೆ ಮೈತ್ರಿ ಮಾಡಿಕೊಂಡಿದ್ದು ಈ ಕುರಿತು ಬಿಟಿಪಿ ನಾಯಕ ಛೋಟು ವಸವಾ ಅಧಿಕೃತ ಮಾಹಿತಿ ನೀಡಿದ್ದಾರೆ. ಎಐಎಂಐಎಂ ಸಂಸದ ಇಮ್ತಿಯಾಜ್ ಜಲೀಲ್, ಬಹ್ರೂಚ್ ಜಿಲ್ಲೆಯಲ್ಲಿರುವ ಬಿಟಿಪಿ ನಾಯಕರ ನಿವಾಸದಲ್ಲಿ ಸಭೆ ನಡೆಸಿದ್ದರು.
ಈ ವೇಳೆ ವಸವಾ ಅವರು ಎರಡು ಜಿಲ್ಲಾ ಪಂಚಾಯತ್ಗಳಲ್ಲಿ (ನರ್ಮದಾ ಮತ್ತು ಬಹ್ರೂಚ್) ಕಾಂಗ್ರೆಸ್ ಜೊತೆಗಿನ ಮೈತ್ರಿ ಸಂಬಂಧವನ್ನು ತೊರೆಯುವುದಾಗಿ ಘೋಷಿಸಿದ್ದರು. ಈ ಕುರಿತು ಪ್ರತಿಕ್ರಿಯೆ ನೀಡಿರುವ ಬಿಟಿಪಿ ಛೋಟು ವಸವಾ, ಅಸಾದುದ್ದೀನ್ ಓವೈಸಿ ಭಾರತೀಯ ಸಂವಿಧಾನಕ್ಕಾಗಿ ಹೋರಾಡುತ್ತಿರುವ ಜನರೊಟ್ಟಿಗೆ ಇದ್ದಾರೆ. ನರೇಂದ್ರ ಮೋದಿ ಸರ್ಕಾರ ಬಡವರಿಗಾಗಿ ಏನನ್ನೂ ಮಾಡುತ್ತಿಲ್ಲ. ನಮ್ಮ ಹಕ್ಕುಗಳನ್ನು ಕಸಿಯುತ್ತಿರುವ ಈ ಸರ್ಕಾರದ ವಿರುದ್ಧ ನಾವು ಹೋರಾಟ ಮಾಡುತ್ತೇವೆ. ಗುಜರಾತ್ನಲ್ಲಿ ಎಐಎಂಐಎಂ ಜೊತೆ ಸ್ಥಳೀಯ ಸಂಸ್ಥೆ ಚುನಾವಣೆಗೆ ಸ್ಪರ್ಧಿಸಲಿದ್ದೇವೆ ಎಂದು ತಿಳಿಸಿದ್ದಾರೆ.
ಇನ್ನು, ಅಹಮದಾಬಾದ್ನ 55 ಪುರಸಭೆಗಳು, 31 ಜಿಲ್ಲಾ ಪಂಚಾಯತ್ಗಳು ಮತ್ತು 231 ತಾಲೂಕು ಪಂಚಾಯತ್ಗಳು ಸೇರಿ ಆರು ಮುನಿಸಿಪಲ್ ಕಾರ್ಪೊರೇಷನ್ಗಳಿಗೆ 2019ರ ನವೆಂಬರ್ನಲ್ಲಿ ಚುನಾವಣೆ ನಡೆಯಬೇಕಿತ್ತು. ಆದರೆ, ಐದು ವರ್ಷಗಳ ಅವಧಿ ಮುಗಿಯುವ ಒಂದು ತಿಂಗಳ ಮುನ್ನವೇ ಚುನಾವಣೆಯನ್ನು ಮೂರು ತಿಂಗಳು ಮುಂದೂಡಲಾಯಿತು. ನಂತರ ಮತ್ತೆ ಕೊರೊನಾ ವೈರಸ್ ಭೀತಿ ಹಿನ್ನೆಲೆ ಸ್ಥಳೀಯ ಸಂಸ್ಥೆ ಚುನಾವಣೆ ಮುಂದೂಡಲಾಯಿತು.