ಕೋಲ್ಕತಾ: ಇಂದು ಕೋಲ್ಕತ್ತಾದಲ್ಲಿ ಎಐಎಂಐಎಂ ಮುಖ್ಯಸ್ಥ ಅಸಾದುದ್ದೀನ್ ಓವೈಸಿ ನೇತೃತ್ವದಲ್ಲಿ ನಡೆಯಲಿರುವ ರ‍್ಯಾಲಿಗೆ ನಗರ ಪೊಲೀಸರು ಅನುಮತಿ ನಿರಾಕರಿಸಿದ ಹಿನ್ನೆಲೆ ರ‍್ಯಾಲಿ ರದ್ದುಗೊಳಿಸಲಾಗಿದೆ ಎಂದು ಪಕ್ಷದ ಮೂಲಗಳು ತಿಳಿಸಿವೆ.
ಪಶ್ಚಿಮ ಬಂಗಾಳ ವಿಧಾನಸಭೆ ಚುನಾವಣೆಯಲ್ಲಿ ಸ್ಪರ್ಧಿಸುವ ಘೋಷಣೆ ಮಾಡಿರುವ ಎಐಎಂಐಎಂ ಮುಖ್ಯಸ್ಥ ಅಸಾದುದ್ದೀನ್ ಓವೈಸಿ, ಈಗಿನಿಂದಲೇ ಮತಬೇಟೆಗೆ ಮುಂದಾಗಿದ್ದಾರೆ. ಈ ಹಿನ್ನೆಲೆ ಹೆಚ್ಚು ಅಲ್ಪಸಂಖ್ಯಾತರಿರುವ ಮೆಟಿಯಾಬ್ರೂಜ್ ಪ್ರದೇಶದಲ್ಲಿ ರ‍್ಯಾಲಿ ನಡೆಸುವ ಮೂಲಕ ತಮ್ಮ ಪಕ್ಷದ ಪ್ರಚಾರವನ್ನು ಪ್ರಾರಂಭಿಸಲು ನಿರ್ಧರಿಸಿದ್ದರು. ಆದರೆ ರ‍್ಯಾಲಿಗೆ ಪೊಲೀಸರು ಅನುಮತಿ ನೀಡಿಲ್ಲ ಎಂದು ಎಐಎಂಐಎಂ ರಾಜ್ಯ ಕಾರ್ಯದರ್ಶಿ ಜಮೀರುಲ್ ಹಸನ್ ತಿಳಿಸಿದ್ದಾರೆ.
ನಾವು 10 ದಿನಗಳ ಹಿಂದೆಯೇ ಅನುಮತಿಗಾಗಿ ಅರ್ಜಿ ಸಲ್ಲಿಸಿದ್ದೆವು. ಆದರೆ ರ‍್ಯಾಲಿ ನಡೆಸಲು ಅನುಮತಿ ನೀಡುವುದಿಲ್ಲ ಎಂದು ಬುಧವಾರ ನಮಗೆ ಪೊಲೀಸರು ತಿಳಿಸಿದ್ದಾರೆ. ಇದರಲ್ಲಿ ಟಿಎಂಸಿ ಪಕ್ಷದ ಕೈವಾಡವಿದೆ. ನಾವು ಟಿಎಂಸಿಯ ಇಂತಹ ತಂತ್ರಗಳಿಗೆ ಬಗ್ಗುವುದಿಲ್ಲ. ಈ ಕುರಿತು ಚರ್ಚಿಸಿ, ಶೀಘ್ರವೇ ರ‍್ಯಾಲಿ ನಡೆಸುವ ದಿನಾಂಕವನ್ನು ಪ್ರಕಟಿಸುತ್ತೇವೆ ಎಂದು ಹೇಳಿದ್ದಾರೆ.
ಪಶ್ಚಿಮ ಬಂಗಾಳ ವಿಧಾನಸಭೆ ಚುನಾವಣೆಯಲ್ಲಿ ಎಐಎಂಐಎಂ ಹಾಗೂ ಐಎಸ್‌ಎಫ್ ಪಕ್ಷಗಳು ಮೈತ್ರಿ ಮಾಡಿಕೊಂಡು ಸ್ಪರ್ಧೆಗಿಳಿಯುವುದು ಖಚಿತವಾಗಿದ್ದು, ಅಲ್ಪಸಂಖ್ಯಾತ ಮತಗಳು ವಿಭಜನೆಯಾಗುವ ಸಾಧ್ಯತೆ ಇರುವುದರಿಂದ ಮಮತಾ ಅವರ ಚಿಂತೆ ಮತ್ತಷ್ಟು ಹೆಚ್ಚಿದೆ.