ನವದೆಹಲಿ: ವ್ಯಕ್ತಿಯೊಬ್ಬರ ಬೆನ್ನಿಗೆ ಹೊಕ್ಕಿದ್ದ ಆರು ಇಂಚು ಉದ್ದದ ಚಾಕುವನ್ನು ದೆಹಲಿ ಅಖಿಲ ಭಾರತ ವೈದ್ಯಕೀಯ ವಿಜ್ಞಾನಗಳ ಸಂಸ್ಥೆ (ಏಮ್ಸ್) ವೈದ್ಯರು ಶಸ್ತ್ರಚಿಕಿತ್ಸೆ ಮೂಲಕ ಯಶಸ್ವಿಯಾಗಿ ಹೊರತೆಗೆದಿದ್ದಾರೆ. ಘಟನೆಯೊಂದರಲ್ಲಿ ಚಾಕು ಇರಿತಕ್ಕೊಳಗಾಗಿ ಈ ವ್ಯಕ್ತಿ ತನ್ನ ಬೆನ್ನಿಗೆ ಹೊಕ್ಕಿದ್ದ ಚಾಕುವಿನ ಸಮೇತವಾಗಿ ಆಸ್ಪತ್ರೆಗೆ ಸೇರಿದ್ದ. ಅತ್ಯಂತ ಕಠಿಣ ಹಾಗೂ ಸಂಕೀರ್ಣವಾದ ಶಸ್ತ್ರಚಿಕಿತ್ಸೆ ನಡೆಸುವ ಮೂಲಕ ಅದನ್ನು ಹೊರತೆಗೆಯುವಲ್ಲಿ ವೈದ್ಯರು ಯಶಸ್ವಿಯಾಗಿದ್ದಾರೆ.
ಹರಿಯಾಣದ ಕರ್ನಾಲ್ ಜಿಲ್ಲೆಯ ಮೂಲದ 30 ವರ್ಷದ ರೋಗಿಯು ಆಭರಣ ಅಂಗಡಿ ಹೊಂದಿದ್ದ. ಜುಲೈ 12ರಂದು ಆಭರಣ ಅಂಗಡಿಯ ದರೋಡೆಗೆ ದುಷ್ಕರ್ಮಿಗಳು ಯತ್ನಿಸಿದ್ದರು. ಈ ಸಂದರ್ಭದಲ್ಲಿ ಚಾಕು ಇರಿತಕ್ಕೊಳಗಾಗಿ ಗಾಯಗೊಂಡಿದ್ದ ಎಂದು ಹೇಳಲಾಗಿದೆ. ಈ ಘಟನೆ ದಿನದ ತಡರಾತ್ರಿಯ ಈ ರೋಗಿಯು ತನ್ನ ಬೆನ್ನಿನಲ್ಲಿ ಚಾಕು ಇಟ್ಟುಕೊಂಡೇ ಆಸ್ಪತ್ರೆಗೆ ದಾಖಲಾಗಿದ್ದ. ಜುಲೈ 13ರಂದು ಚಾಕು ಮತ್ತು ಬೆನ್ನುಮೂಳೆಯ ಸ್ಥಿರೀಕರಣವನ್ನು ತೆಗೆದು ಹಾಕುವುದರೊಂದಿಗೆ ಡಿಕಂಪ್ರೆಷನ್ ಸರ್ಜರಿಯನ್ನು ನೆರವೇರಿಸಲಾಗಿದೆ ಎಂದು ಏಮ್ಸ್ನ ಟ್ರಾಮಾ ಸೆಂಟರ್ ಮುಖ್ಯಸ್ಥ ಡಾ.ಕಮ್ರಾನ್ ಫಾರೂಕ್ ತಿಳಿಸಿದ್ದಾರೆ.
ಇದನ್ನೂ ಓದಿ: ಸಹೋದರನ ಜತೆಗಿನ ಜಗಳದಲ್ಲಿ ಮೊಬೈಲ್ ನುಂಗಿದ ಹುಡುಗಿ; ಶಸ್ತ್ರಚಿಕಿತ್ಸೆ ಮೂಲಕ ಹೊರಕ್ಕೆ
ಈ ರೋಗಿಗೆ ಮಧ್ಯಾಹ್ನ 2 ಗಂಟೆ ಸುಮಾರಿಗೆ ಚಾಕು ಇರಿದಿದೆ. ರಾತ್ರಿ 10 ಗಂಟೆಗೆ ಏಮ್ಸ್ನ ಟ್ರಾಮಾ ಸೆಂಟರ್ ಬಂದಿದ್ದ. ಇದಕ್ಕೂ ಮೊದಲು ಇತರ ಎರಡು ಆಸ್ಪತ್ರೆಗಳಿಗೆ ಹೋಗಿದ್ದರು. ರೋಗಿಯ ಸ್ಥಿತಿ ಮತ್ತು ಪ್ರಕರಣದ ಸಂಕೀರ್ಣತೆ ಪರಿಗಣಿಸಿ ಅವರನ್ನು ರೆಫರ್ ಮಾಡಲಾಗಿತ್ತು. ಇಲ್ಲಿಗೆ ಬಂದಾಗ ರೋಗಿಯು ಪ್ರಜ್ಞೆಯಲ್ಲಿದ್ದ. ಆತ ಬೆನ್ನಿಗೆ ಚಾಕು ಇರಿದಿದ್ದರಿಂದ ಇದು ಸವಾಲಿನ ಪ್ರಕರಣವಾಗಿತ್ತು ಎಂದು ಮಾಹಿತಿ ನೀಡಿದರು.
ಚಾಕುವಿನ ಯಾವುದೇ ಚಲನೆಯು ಬೆನ್ನುಹುರಿಗೆ ಮತ್ತಷ್ಟು ಗಾಯವನ್ನು ಉಂಟು ಮಾಡಬಹುದು. ಚಾಕುವಿನ ಬ್ಲೇಡ್ ಹೃದಯದಿಂದ ರಕ್ತವನ್ನು ಸಾಗಿಸುವ ಮಹಾಪಧಮನಿಯ ಮಹಾಪಧಮನಿಯಿಂದ ಕೇವಲ 2 ಅಥವಾ 3 ಮಿಲಿಮೀಟರ್ ದೂರದಲ್ಲಿತ್ತು. ಇದು ಕನಿಷ್ಠ ಆರು ಇಂಚು ಚಾಕು ಒಳಗಡೆ ಹೋಗಿತ್ತು. ಚಾಕು ಬೆನ್ನುಮೂಳೆಯ ಕಾಲಮ್ ಮೂಲಕ ಮೂಳೆ ಮುರಿದಿದೆ ಎಂದು ಸಿಟಿ ಸ್ಕ್ಯಾನ್ನಲ್ಲಿ ಪತ್ತೆಯಾಗಿತ್ತು. ಬೆನ್ನುಹುರಿಯ ಸುತ್ತಲೂ ಬಹಳ ಎಚ್ಚರಿಕೆಯಿಂದ ಛೇದಿಸಿ ಚಾಕುವನ್ನು ಹೊರತೆಗೆಯಲಾಗಿದೆ ಎಂದು ಶಸ್ತ್ರಚಿಕಿತ್ಸಕ ವಿಭಾಗದ ವೈದ್ಯ ಅಮಿತ್ ಗುಪ್ತಾ ಹೇಳಿದ್ದಾರೆ. ಚಾಕು ಹೊರತೆಗೆದ ನಂತರ ಬೆನ್ನುಹುರಿಯ ಹೊದಿಕೆಯನ್ನು ಸರಿಪಡಿಸಲಾಗಿದೆ. ರಾಡ್‌ಗಳ ಮೂಲಕ ಬೆನ್ನುಮೂಳೆಯ ಕಾಲಮ್ಅನ್ನು ಸ್ಥಿರಗೊಳಿಸಲಾಗಿದೆ. ಸದ್ಯ ರೋಗಿಯು ಚೇತರಿಸಿಕೊಳ್ಳುತ್ತಿದ್ದಾನೆ ಎಂದು ವೈದ್ಯರು ವಿವರಿಸಿದ್ದಾರೆ.
ಇದನ್ನೂ ಓದಿ: ಹೊಸ ತಂತ್ರಜ್ಞಾನದ ಮೂಲಕ ಪಿತ್ತಕೋಶದಲ್ಲಿದ್ದ 630 ಕಲ್ಲುಗಳನ್ನ ಶಸ್ತ್ರಚಿಕಿತ್ಸೆ ಮೂಲಕ ಹೊರ ತೆಗೆದ ವೈದ್ಯರು!