ಚೆನ್ನೈ: ತಮಿಳುನಾಡಿನಲ್ಲಿ ನಡೆಯುವ ರಾಜಕೀಯ ಏರಿಳಿತಗಳು ಇಡೀ ದೇಶವನ್ನು ದಕ್ಷಿಣ ಭಾರತದ ಕಡೆ ತಿರುಗಿ ನೋಡುವಂತೆ ಮಾಡುತ್ತವೆ. ಅಷ್ಟರಮಟ್ಟಿಗೆ ರಾಜ್ಯದ ರಾಜಕೀಯ ಬೆಳವಣಿಗೆಗಳು ಸದ್ದು ಮಾಡುತ್ತವೆ. ಇದರ ನಡುವೆ ಇದೀಗ ಎಐಎಡಿಎಂಕೆಯು 50ನೇ ವಾರ್ಷಿಕೋತ್ಸವವನ್ನು ವಿಜೃಂಭಣೆಯಿಂದ ಆಚರಿಸುತ್ತಿದೆ.
ಎಐಎಡಿಎಂಕೆ ಸಂಯೋಜಕ ಪನ್ನೀರ್‌ಸೆಲ್ವಂ ಮತ್ತು ಉಪ ಸಂಯೋಜಕ ಎಡಪ್ಪಾಡಿ ಕೆ.ಪಳನಿಸ್ವಾಮಿ ಅವರು ಈ ಸಮಾರಂಭದ ಸಂಬಂಧ ಶುಕ್ರವಾರ ಜಂಟಿ ಹೇಳಿಕೆ ಬಿಡುಗಡೆ ಮಾಡಿದ್ದರು. ರಾಯ್‌ಪೇಟೆಯಲ್ಲಿರುವ ಎಐಎಡಿಎಂಕೆ ಪಕ್ಷದ ಪ್ರಧಾನ ಕಚೇರಿಯನ್ನು ಸುವರ್ಣ ಮಹೋತ್ಸವದ ಸಂದರ್ಭದಲ್ಲಿ 'ಎಂಜಿಆರ್ ಮಾಲಿಗೈ' ಎಂದು ಮರುನಾಮಕರಣ ಮಾಡಲಾಗುವುದು ಎಂದು ತಿಳಿಸಿದ್ದರು.
ಹೂಮಾಲೆಗಳಿಂದ ಅಲಂಕರಿಸಲ್ಪಟ್ಟ ಪಕ್ಷದ ಪ್ರಧಾನ ಕಚೇರಿಯಲ್ಲಿ ಪಕ್ಷದ ನೂರಾರು ಕಾರ್ಯಕರ್ತರು ಜಮಾಯಿಸಿದ್ದರು. ಎಐಎಡಿಎಂಕೆ ಸಂಸ್ಥಾಪಕ ದಿ.ಎಂ.ಜಿ.ರಾಮಚಂದ್ರನ್ ಮತ್ತು ನಾಯಕಿ ದಿ.ಜೆ.ಜಯಲಲಿತಾ ಅವರ ದೊಡ್ಡ ಪೋಸ್ಟರ್‌ಗಳು ಮತ್ತು ಬ್ಯಾನರ್‌ಗಳು ಕಣ್ಮನೆ ಸೆಳೆಯುವಂತಿದ್ದವು.
ಪಕ್ಷದ ಹಿರಿಯ ನಾಯಕರಾದ ಎಡಪ್ಪಾಡಿ ಕೆ. ಪಳನಿಸ್ವಾಮಿ ಮತ್ತು ಓ. ಪನ್ನೀರಸೆಲ್ವಂ ಅವರು ರಾಮಚಂದ್ರನ್ ಮತ್ತು ಜಯಲಲಿತಾ ಪ್ರತಿಮೆಗೆ ಮಾಲಾರ್ಪಣೆ ಮಾಡಿ ವಂದಿಸಿದರು.
ಇದರ ನಡುವೆ ಉಚ್ಛಾಟಿತ ಎಐಎಡಿಎಂಕೆ ನಾಯಕಿ ವಿ.ಕೆ.ಶಶಿಕಲಾ ಅವರು ಪಕ್ಷದ ಧ್ವಜವನ್ನು ಹಾರಿಸಿದರು ಮತ್ತು ತ್ಯಾಗರಾಯ ನಗರದ ಎಂಜಿಆರ್ ಸ್ಮಾರಕದ ಹೊರಗೆ ಸಿಹಿ ಹಂಚಿ ಸಂಭ್ರಮಿಸಿದರು.
ನಿನ್ನೆ ಅಮ್ಮನ ಸ್ಮಾರಕದಲ್ಲಿ ಶಶಿಕಲಾ:
ಅಕ್ರಮ ಆಸ್ತಿಗಳಿಕೆ ಪ್ರಕರಣದಲ್ಲಿ ಬೆಂಗಳೂರಿನ ಪರಪ್ಪನ ಅಗ್ರಹಾರ ಕಾರಾಗೃಹದಲ್ಲಿ ಜೈಲು ಶಿಕ್ಷೆ ಅನುಭವಿಸಿದ ನಂತರ ಶಶಿಕಲಾ ಅವರು ಮೊದಲು ಜಯಲಲಿತಾ ಸ್ಮಾರಕಕ್ಕೆ ಭೇಟಿ ನೀಡಿ ಸ್ಮರಿಸಿದ್ದರು.
ಮಾಜಿ ಮುಖ್ಯಮಂತ್ರಿ ಜಯಲಲಿತಾ ಅವರ ಆಪ್ತರಾದ ಶಶಿಕಲಾ, ಎಐಎಡಿಎಂಕೆಯ 50 ನೇ ವಾರ್ಷಿಕೋತ್ಸವದ ಉದ್ಘಾಟನೆಯ ಮುನ್ನಾದಿನದಂದು ಅಂದರೆ ನಿನ್ನೆ ಮರೀನಾ ಬೀಚ್‌ನಲ್ಲಿರುವ ತನ್ನ ನಾಯಕಿಯ ಸ್ಮಾರಕಕ್ಕೆ ಭೇಟಿ ನೀಡಿದ್ದರು. ಶಶಿಕಲಾ ಅವರು ಟಿ.ನಗರದಲ್ಲಿರುವ ತಮ್ಮ ನಿವಾಸದಿಂದ ಬೆಳಿಗ್ಗೆ 10.30 ರ ಸುಮಾರಿಗೆ ಎಐಎಡಿಎಂಕೆ ಪಕ್ಷದ ಧ್ವಜ ಅಳವಡಿಸಿದ್ದ ಕಾರಿನಲ್ಲಿ ಹೊರಟ ಅವರು, ಒಂದು ಗಂಟೆಯ ನಂತರ ಸ್ಮಾರಕವನ್ನು ತಲುಪಿದರು. ಅವರ ಬೆಂಬಲಿಗರು ಎಐಎಡಿಎಂಕೆಯ ಧ್ವಜಗಳೊಂದಿಗೆ ಹಿಂದೆಯೇ ಆಗಮಿಸಿ ಅಮ್ಮನಿಗೆ ನಮಸ್ಕರಿಸಿದರು.
ಆ ವೇಳೆ ಮಾತನಾಡಿದ್ದ ಅವರು, ಅಮ್ಮ ಮತ್ತು ನಾನು ಬೇರ್ಪಡಿಸಲಾಗದವರು. ಕಳೆದ ಐದು ವರ್ಷಗಳ ನನ್ನ ಅಂತರಾಳದ ನೋವನ್ನು ಇಂದು ಆಕೆಯ ಸ್ಮಾರಕದಲ್ಲಿ ಇರಿಸಿದ್ದೇನೆ. ಇಲ್ಲಿಯವರೆಗೆ ಏನಾಯಿತು ಎಂಬುದರ ಬಗ್ಗೆ ನಾನು ಅವಳಿಗೆ ಹೇಳಿದ್ದೇನೆ ಮತ್ತು ಪಕ್ಷಕ್ಕೆ ಉತ್ತಮ ದಿನಗಳಿವೆ ಎಂದು ಅವಳಿಗೆ ಭರವಸೆ ನೀಡಿದ್ದೇನೆ ಎಂದು ಪ್ರತಿಕಿಯಿಸಿದ್ದರು. ನಂತರ ಅವರು ಎಂಜಿಆರ್ ಮತ್ತು ಅಣ್ಣ ಸ್ಮಾರಕಗಳಿಗೆ ಭೇಟಿ ನೀಡಿ ವಂದನೆ ಅರ್ಪಿಸಿದ್ದರು.
50 ವರ್ಷ ಪೂರೈಸಿದ AIADMK ನಡೆದು ಬಂದ ಹಾದಿ..
ಎಂಜಿಆರ್ ಅವರು 1972 ರಲ್ಲಿ ಪಕ್ಷವನ್ನು ಆರಂಭಿಸಿ 1977 ರಲ್ಲಿ ಆಡಳಿತವನ್ನು ತಮ್ಮ ವಶಕ್ಕೆ ಪಡೆದುಕೊಂಡರು. ಅಂದಿನಿಂದ ಇಂದಿನವರೆಗೂ ತಮಿಳಿನಲ್ಲಿ ಈ ಪಕ್ಷ ತನ್ನದೇ ಆದ ಚಾಪು ಮೂಡಿಸಿಕೊಂಡು ಮುನ್ನುಗ್ಗುತ್ತಿದೆ. ಇಂದು 50 ವರ್ಷ ಪೂರೈಸಿದ ಹಿನ್ನೆಲೆಯಲ್ಲಿ ಕಾರ್ಯಕರ್ತರಲ್ಲಿ ಸಂಭ್ರಮ ಮನೆ ಮಾಡಿದೆ.
ಅಖಿಲ ಭಾರತ ಅಣ್ಣಾ ದ್ರಾವಿಡ ಮುನ್ನೇತ್ರ ಕಳಗಂ ಒಂದು ಭಾರತೀಯ ಪ್ರಾದೇಶಿಕ ರಾಜಕೀಯ ಪಕ್ಷವಾಗಿದ್ದು, ಇದು ತಮಿಳುನಾಡು ರಾಜ್ಯ ಮತ್ತು ಪುದುಚೇರಿಯ ಕೇಂದ್ರಾಡಳಿತ ಪ್ರದೇಶದಲ್ಲಿ ಪ್ರಮುಖ ಪ್ರಭಾವ ಹೊಂದಿದೆ. ಪ್ರಸ್ತುತ ತಮಿಳುನಾಡು ಶಾಸಕಾಂಗ ಸಭೆಯಲ್ಲಿ ಮುಖ್ಯ ವಿರೋಧ ಪಕ್ಷವಾಗಿ ಕೆಲಸ ಮಾಡುತ್ತಿದೆ. ಹಾಗೆ ರಾಷ್ಟ್ರೀಯ ಪ್ರಜಾಪ್ರಭುತ್ವ ಒಕ್ಕೂಟದ ಭಾಗವಾಗಿದೆ.
ಎಐಎಡಿಎಂಕೆ ದ್ರಾವಿಡ ಪಕ್ಷವಾಗಿದ್ದು, ಎಂ.ಜಿ.ರಾಮಚಂದ್ರನ್ (ಎಂ.ಜಿ.ಆರ್.) ಅವರು 1972 ಅಕ್ಟೋಬರ್ 17 ರಂದು ಮಧುರೈನಲ್ಲಿ ಸ್ಥಾಪನೆ ಮಾಡಿದರು. ಪಕ್ಷವು ಸಾಮಾಜಿಕ ಪ್ರಜಾಪ್ರಭುತ್ವ ಮತ್ತು ಸಾಮಾಜಿಕ ನ್ಯಾಯದ ತತ್ವಗಳಿಗೆ ಬದ್ಧವಾಗಿದೆ ಎಂದು ಹೇಳಿಕೊಳ್ಳುತ್ತಿದೆ.
9 ಫೆಬ್ರವರಿ 1989 ರಿಂದ 5 ಡಿಸೆಂಬರ್ 2016 ರವರೆಗೆ ಎಐಎಡಿಎಂಕೆ ನೇತೃತ್ವವನ್ನು ಜೆ.ಜಯಲಲಿತಾ ವಹಿಸಿದ್ದರು. ಅವರು ಹಲವಾರು ಬಾರಿ ತಮಿಳುನಾಡಿನ ಮುಖ್ಯಮಂತ್ರಿಯಾಗಿ 6 ಬಾರಿ ಸೇವೆ ಸಲ್ಲಿಸಿ ಮಹತ್ವದ ಬೆಳವಣಿಗೆಗೆ ಸಾಕ್ಷಿಯಾದರು. ಪಕ್ಷವು ತಮಿಳುನಾಡು ವಿಧಾನಸಭೆಯಲ್ಲಿ ಏಳು ಬಾರಿ ಬಹುಮತಗಳನ್ನು ಗೆದ್ದಿದೆ.
ಪಕ್ಷದ ಪ್ರಧಾನ ಕಚೇರಿ ರಾಯಪೀಠ, ಚೆನ್ನೈನಲ್ಲಿದೆ. ಈ ಕಟ್ಟಡವನ್ನು 1986ರಲ್ಲಿ ಎಂ.ಜಿ.ಆರ್ ಅವರ ಪತ್ನಿ ವಿ.ಎನ್.ಜಾನಕಿ ರಾಮಚಂದ್ರನ್ ಅವರು ಪಕ್ಷಕ್ಕೆ ದಾನ ಮಾಡಿದ್ದರು.