ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರ ಇತ್ತೀಚಿನ ಕೇಂದ್ರ ಬಜೆಟ್ ಎರಡು ವಿಷಯಗಳಿಗೆ ಸಂಬಂಧಿಸಿದ ಸಮಸ್ಯೆಗಳನ್ನು ಪರಿಹರಿಸುವ ನಿರೀಕ್ಷೆ ಹೊಂದಿತ್ತು. ಒಂದು, ಬೆಳವಣಿಗೆ ಹಾಗೂ ಇನ್ನೊಂದು ಉದ್ಯೋಗ ಸೃಷ್ಟಿ. ಬಜೆಟ್‌ನಲ್ಲಿ ಉತ್ತಮವಾಗಿದ್ದ ಅಂಶಗಳು ಯಾವುವು? ಮೊದಲನೆಯದಾಗಿ, ಹಿಂದಿನ ಬಜೆಟ್‌ಗೆ ಹೋಲಿಸಿದರೆ, ಅದರಲ್ಲಿಯೂ ವಿಶೇಷವಾಗಿ ಭಾರತದ ಆಹಾರ ನಿಗಮದ ಸಾಲ ನೀಡಿಕೆಗೆ ಸಂಬಂಧಿಸಿದ ವಿತ್ತೀಯ ಕೊರತೆಯ ಅಂಕಿಸಂಖ್ಯೆಗಳ ದೃಷ್ಟಿಯಿಂದ ಇದು ಪಾರದರ್ಶಕವಾಗಿದೆ.
ಈ ಹಣಕಾಸು ವರ್ಷದ ಬಜೆಟ್ ಅಂದಾಜುಗಳಿಗೆ ಹೋಲಿಸಿದರೆ, ಪರಿಷ್ಕೃತ ಅಂದಾಜುಗಳಿಗೆ ಸರ್ಕಾರದ ಆದಾಯದ ಸ್ವೀಕೃತಿಗಳ ಪ್ರಮಾಣ ಶೇಕಡಾ 23ರಷ್ಟು ಕಡಿಮೆಯಾಗಿದೆ. ಹಣಕಾಸಿನ ಕೊರತೆ ಈ ಹಣಕಾಸು ವರ್ಷದಲ್ಲಿ ಶೇಕಡಾ 9.5 ಆಗಿದ್ದು ಮುಂದಿನ ಹಣಕಾಸು ವರ್ಷಕ್ಕೆ ಇದನ್ನು ಶೇಕಡಾ 6.8 ಎಂದು ಅಂದಾಜಿಸಲಾಗಿದೆ. ಎರಡನೆಯದಾಗಿ, ಆಸ್ತಿ ನಗದೀಕರಣ, ಬ್ಯಾಂಕುಗಳ ಖಾಸಗೀಕರಣ, ವಿಮೆಯಲ್ಲಿ ಎಫ್‌ಡಿಐ (ವಿದೇಶಿ ನೇರ ಹೂಡಿಕೆ) ಹೆಚ್ಚಳ, ಆಸ್ತಿ ಪುನರ್ನಿರ್ಮಾಣ ಕಂಪನಿಯ ಸ್ಥಾಪನೆಯಂತಹ ಕ್ಷೇತ್ರಗಳ ಸುಧಾರಣೆಗಳಲ್ಲಿ ಈ ಬಜೆಟ್ ದಿಶಾಂತರ ಬದಲಾವಣೆಯನ್ನೇ ಮಾಡಿದೆ. ಮೂರನೆಯದಾಗಿ, ಬಂಡವಾಳ ವೆಚ್ಚ ಮತ್ತು ಮೂಲಸೌಕರ್ಯಗಳಿಗೆ ಈ ಬಜೆಟ್ ಒತ್ತು ಕೊಟ್ಟಿದೆ.
ಬಂಡವಾಳ ವೆಚ್ಚವು ಈ ವರ್ಷದ ಬಜೆಟ್‌ನಲ್ಲಿ ರೂ. 4.1 ಲಕ್ಷ ಕೋಟಿ ಆಗಿದ್ದು, ಮುಂದಿನ ವರ್ಷದ ಬಜೆಟ್‌ನಲ್ಲಿ ರೂ. 5.5 ಲಕ್ಷ ಕೋಟಿಗೆ ಏರಲಿದೆ (ಅಂದಾಜು ಶೇಕಡಾ 35 ಹೆಚ್ಚಳ). ರೂ. 2 ಲಕ್ಷ ಕೋಟಿ ಹೆಚ್ಚು ಬಂಡವಾಳ ವೆಚ್ಚವನ್ನು ರಾಜ್ಯಗಳು ಮತ್ತು ಸ್ವಾಯತ್ತ ಸಂಸ್ಥೆಗಳಿಗೆ ಬಳಸಿಕೊಳ್ಳಲು ನಿಗದಿಪಡಿಸಲಾಗಿದೆ. ಹೂಡಿಕೆಯನ್ನು ಉತ್ತೇಜಿಸುವ ಉದ್ದೇಶದಿಂದ ಬಜೆಟ್‌ನಲ್ಲಿ ಅಭಿವೃದ್ಧಿ ಹಣಕಾಸು ಸಂಸ್ಥೆ (ಡಿಎಫ್‌ಐ – ಡೆವಲಪ್‌ಮೆಂಟ್ ಫೈನಾನ್ಷಿಯಲ್ ಇನ್‌ಸ್ಟಿಟ್ಯೂಶನ್) ಸ್ಥಾಪನೆಯನ್ನು ಘೋಷಿಸಲಾಗಿದೆ. ವಿತ್ತ ಸಚಿವೆಯ ಪ್ರಕಾರ, ಮೂಲಸೌಕರ್ಯ ಮತ್ತು ಆರೋಗ್ಯಕ್ಕೆ ಉತ್ತೇಜನ ನೀಡುವುದು ಈ ಬಜೆಟ್‌ನ ವಿಶಿಷ್ಟ ಲಕ್ಷಣಗಳಾಗಿವೆ. ನಾಲ್ಕನೆಯದಾಗಿ, ಈ ಸಲದ ಬಜೆಟ್‌ನಲ್ಲಿ ಹೆಚ್ಚುವರಿ ತೆರಿಗೆ ವಿಧಿಸಿಲ್ಲ. ಮಾರುಕಟ್ಟೆಯಿಂದ ಅಥವಾ ಹೂಡಿಕೆ ಮಾಡುವ ಮೂಲಕ ವೆಚ್ಚವನ್ನು ಎರವಲು ಪಡೆಯಲಾಗುತ್ತದೆ.
ಮೂಲಸೌಕರ್ಯಗಳಿಗೆ ಸಂಬಂಧಿಸಿದಂತೆ, ಈ ಬಜೆಟ್‌ನಲ್ಲಿ ಕೃಷಿ ಮೂಲಸೌಕರ್ಯಕ್ಕೆ ಹೆಚ್ಚಿನ ಒತ್ತು ನೀಡಲಾಗಿದೆ ಎಂದು ಹಣಕಾಸು ಸಚಿವರು ಉಲ್ಲೇಖಿಸಿದ್ದಾರೆ. ಕೃಷಿ ಆದಾಯವನ್ನು ಹೆಚ್ಚಿಸಬೇಕೆಂದರೆ ಮೂಲಸೌಕರ್ಯಗಳ ಸಮಸ್ಯೆಯನ್ನು ಗಮನಿಸುವುದು ಮುಖ್ಯವಾಗಿದೆ. ಹಾಗೆ ನೋಡಿದರೆ, ಕೃಷಿ ಮತ್ತು ಗ್ರಾಮೀಣ ಪ್ರದೇಶಗಳ ಮೇಲೆ ಕೋವಿಡ್-19ರ ದುಷ್ಪರಿಣಾಮವು ನಗರ ಪ್ರದೇಶಗಳಿಗಿಂತ ಕಡಿಮೆಯಾಗಿದೆ. ಕೋವಿಡ್ ಸಾಂಕ್ರಾಮಿಕದಿಂದ ಉಂಟಾಗಿದ್ದ ಲಾಕ್‌ಡೌನ್ ಪರಿಸ್ಥಿತಿಯು ಕೃಷಿಯೇತರ ವಲಯದ ಕಾರ್ಯಕ್ಷಮತೆಯ ಮೇಲೆ ಪ್ರತಿಕೂಲ ಪರಿಣಾಮ ಬೀರಿದ್ದರೆ, 2020-21ರಲ್ಲಿ ಕೃಷಿ ಕ್ಷೇತ್ರದ ಬೆಳವಣಿಗೆಯ ದರವು ಅಂದಾಜು ಶೇಕಡಾ 3.4ರಷ್ಟಿದೆ.
ಆದಾಗ್ಯೂ, ವ್ಯಾಪಾರದ ನಿಯಮಗಳು ಕೃಷಿ ಕ್ಷೇತ್ರದ ಪರವಾಗಿಲ್ಲದ ಕಾರಣ ಕೃಷಿ ಮತ್ತು ಗ್ರಾಮೀಣ ಆದಾಯ ಈಗಲೂ ಕಡಿಮೆಯಾಗಿಯೇ ಇದೆ. ಕೃಷಿ ಉತ್ಪನ್ನಗಳ ನೇರ ಖರೀದಿ ಬೆಲೆಯೂ ಕಡಿಮೆಯೇ ಇದೆ. ಉಲ್ಟಾ ವಲಸೆ ಹಾಗೂ ಗ್ರಾಮೀಣ ವೇತನ ಪ್ರಮಾಣದ ಕಡಿಮೆ ಬೆಳವಣಿಗೆಯಿಂದಾಗಿ ಹಣ ರವಾನೆಯ ಪ್ರಮಾಣವೂ ಕಡಿಮೆಯಾಗಿದ್ದು ಗ್ರಾಮೀಣ ಪ್ರದೇಶಗಳಲ್ಲಿ ಆದಾಯ ಕಡಿಮೆಯಾಗಲು ಕಾರಣವಾಯಿತು. ಅನೌಪಚಾರಿಕ ವಲಯ ಹಾಗೂ ಕಾರ್ಮಿಕರು ಕೋವಿಡ್ ಅವಧಿಯಲ್ಲಿ ಆದಾಯ ಮತ್ತು ಉದ್ಯೋಗದ ನಷ್ಟದಿಂದ ಸಾಕಷ್ಟು ಹಾನಿ ಅನುಭವಿಸಿದ್ದಾರೆ. ಇನ್ನೊಂದು ರೀತಿಯಲ್ಲಿ ಹೇಳುವುದಾದರೆ, ನಮ್ಮಲ್ಲಿ ‘ಕೆ’ ಆಕಾರದ ಚೇತರಿಕೆ ಇದೆ ಹಾಗೂ ಈ ಅಸಮಾನತೆಗಳು ಕೃಷಿ ಮತ್ತು ಗ್ರಾಮೀಣ ಪ್ರದೇಶಗಳಿಗೂ ಅನ್ವಯಿಸುತ್ತವೆ. ಪರಿಸ್ಥಿತಿ ಚೇತರಿಸಿಕೊಳ್ಳಬೇಕೆಂದರೆ ಹಣಕಾಸಿನ ಬೆಂಬಲ ಬೇಕೆಂದು ಆರ್ಥಿಕ ಸಮೀಕ್ಷೆ ಆಗ್ರಹಿಸುತ್ತದೆ. ಹೀಗಾಗಿ, ಅಭಿವೃದ್ಧಿ ಸಾಧನೆಗೆ ಹಾಗೂ ಉದ್ಯೋಗ ಸೃಷ್ಟಿ ಸುಧಾರಣೆಗೆ ಕೃಷಿ ಯೋಜನೆಗಳು, ಕೃಷಿ ನಿರ್ವಹಣಾ ಪದ್ಧತಿಗಳು ಹಾಗೂ ಗ್ರಾಮೀಣ ಮೂಲಸೌಕರ್ಯ ಕ್ಷೇತ್ರಗಳಲ್ಲಿ ಹೆಚ್ಚಿನ ಹಂಚಿಕೆಗಳನ್ನು ಬಜೆಟ್‌ನಲ್ಲಿ ನಿರೀಕ್ಷಿಸಲಾಗಿತ್ತು.
ಕೃಷಿ ಮತ್ತು ಸಂಬಂಧಿತ ಚಟುವಟಿಕೆಗಳಿಗೆ ಹಂಚಿಕೆಯು 2020-21ರಲ್ಲಿ ರೂ.1,45,355 ಕೋಟಿಯಿಂದ 2021-22ರಲ್ಲಿ ರೂ. 1,48,301 ಕೋಟಿಗೆ ಏರಿಕೆಯಾಗಿದ್ದು, ಇದು ಶೇಕಡಾ 2 ರಷ್ಟು ಹೆಚ್ಚಿದೆ. ಕಳೆದ ಎರಡು ವರ್ಷಗಳ ಬಜೆಟ್ ಅನ್ನು ಬಜೆಟ್ ಅಂದಾಜುಗಳಿಗೆ ಹೋಲಿಸಿದರೆ, ಶೇಕಡಾ 4.2 ರಷ್ಟು ಕುಸಿತವಾಗಿರುವುದನ್ನು ನೀವು ಕಾಣಬಹುದು. ಅದಾಗ್ಯೂ, ಗ್ರಾಮೀಣ ಮೂಲಸೌಕರ್ಯ ಅಭಿವೃದ್ಧಿ ನಿಧಿಯನ್ನು (ಆರ್‌ಐಡಿಎಫ್ – ರೂರಲ್ ಇನ್‌ಫ್ರಾಸ್ಟ್ರಕ್ಷರ್ ಡೆವಲಪ್‌ಮೆಂಟ್ ಫಂಡ್) ಈ ಸಲದ ಬಜೆಟ್‌ನಲ್ಲಿ ಈ ಸಲದ ಹಣಕಾಸು ವರ್ಷದ ಅವಧಿಗೆ ರೂ.30,000 ಕೋಟಿ ಇರಿಸಲಾಗಿದ್ದು, ಅದನ್ನು ಮುಂದಿನ ಹಣಕಾಸು ವರ್ಷಕ್ಕೆ ರೂ. 40,000 ಕೋಟಿಗೆ ಏರಿಸಲಾಗಿದೆ.
ಇತ್ತೀಚಿನ ಬಜೆಟ್‌ನಲ್ಲಿ ಕಂಡು ಬಂದ ಒಂದು ಪ್ರಮುಖ ಕ್ರಮವೆಂದರೆ ಕೃಷಿ ಮೂಲಸೌಕರ್ಯ ಮತ್ತು ಅಭಿವೃದ್ಧಿ ಸೆಸ್ (ಎಐಡಿಸಿ) ಘೋಷಣೆ. ಕೃಷಿ ಮೂಲಸೌಕರ್ಯವನ್ನು ಸುಧಾರಿಸುವ ಮೂಲಕ ಕೃಷಿ ಉತ್ಪಾದನೆಯನ್ನು ಸಮರ್ಥವಾಗಿ ಸಂರಕ್ಷಿಸಿಡುತ್ತ ಹಾಗೂ ಸಂಸ್ಕರಿಸುತ್ತಲೇ ಹೆಚ್ಚು ಉತ್ಪಾದನೆಯನ್ನು ಸಾಧ್ಯವಾಗಿಸುವುದು ಈ ಸೆಸ್ ಸ್ಥಾಪನೆಯ ಉದ್ದೇಶ. ನಮ್ಮ ರೈತರಿಗೆ ಆದಾಯ ಹೆಚ್ಚಳವನ್ನು ಇದು ಖಚಿತಪಡಿಸುತ್ತದೆ. ಈ ಉದ್ದೇಶ ಸಾಧಿಸುವುದಕ್ಕಾಗಿ ಸಂಪನ್ಮೂಲಗಳನ್ನು ಮೀಸಲಿಡಲು, ಕಡಿಮೆ ಸಂಖ್ಯೆಯ ವಸ್ತುಗಳ ಮೇಲೆ ಎಐಡಿಸಿ ವಿಧಿಸುವಿಕೆಯನ್ನು ಈ ಸಲದ ಬಜೆಟ್ ಪ್ರಸ್ತಾಪಿಸಿದೆ. ಆದಾಗ್ಯೂ, ಈ ಸೆಸ್ ಅನ್ವಯಿಸುವಾಗ, ಬಹುತೇಕ ವಸ್ತುಗಳಿಗೆ ಸಂಬಂಧಿಸಿದಂತೆ ಗ್ರಾಹಕರ ಮೇಲೆ ಹೆಚ್ಚುವರಿ ಹೊರೆ ಬೀಳದಂತೆ ಸರ್ಕಾರ ಮುತುವರ್ಜಿ ತೋರಿದೆ.
ಗ್ರಾಹಕರ ಮೇಲೆ ಹೆಚ್ಚುವರಿ ಹೊರೆ ಬೀಳದಂತೆ ಹಣಕಾಸು ಸಚಿವರು ಹೇಗೆ ನಿಭಾಯಿಸಿದ್ದಾರೆ? ಹಲವಾರು ವಸ್ತುಗಳ ಮೇಲಿನ ಮೂಲ ಆಮದು ಸುಂಕವನ್ನು ಕಡಿಮೆಗೊಳಿಸಲಾಗಿದ್ದರೂ, ಬಂಗಾರ ಮತ್ತು ಬೆಳ್ಳಿಗೆ ಸಂಬಂಧಿಸಿದಿಂತೆ ಶೇಕಡಾ 2.5 ರಿಂದ ಹಿಡಿದು ಕಡಲೆಗೆ ಸಂಬಂಧಿಸಿದಂತೆ ಶೇಕಡಾ 50ರವರೆಗಿನ ದರದಲ್ಲಿ ವಿಧಿಸಲಾಗುವ ತೆರಿಗೆಯಿಂದ ಹೆಚ್ಚುವರಿ ಹೊರೆಯನ್ನು ನಿಭಾಯಿಸಲಾಗಿದೆ ಎಂಬುದನ್ನು ಬಜೆಟ್‌ನ ದಾಖಲೆಗಳು ತೋರಿಸುತ್ತವೆ. ಸೋಯಾಬೀನ್ ಎಣ್ಣೆಯ ವಿಷಯವನ್ನೇ ನೋಡುವುದಾದರೆ ಬಜೆಟ್ ಪೂರ್ವದ ಮೂಲ ಆಮದು ಸುಂಕದ ಪ್ರಮಾಣ ಶೇಕಡಾ 35 ರಷ್ಟಿದ್ದು, ಈಗ ಅದರ ಮೇಲೆ ಶೇ 10 ರಷ್ಟು ಸಮಾಜ ಕಲ್ಯಾಣ ತೆರಿಗೆಯನ್ನು ವಿಧಿಸಲಾಗಿದೆ.
ಆದ್ದರಿಂದ, ಬಜೆಟ್‌ಗೆ ಮೊದಲು ಕಚ್ಚಾ ಸೋಯಾಬೀನ್ ಮೇಲಿನ ಪರಿಣಾಮಕಾರಿ ಸೀಮಾ ಸುಂಕವು ಶೇಕಡಾ 38.50ರಷ್ಟಿತ್ತು. ಆದಾಗ್ಯೂ, ಬಜೆಟ್ ನಂತರ, ಕಚ್ಚಾ ಸೋಯಾಬೀನ್ ತೈಲದ ಮೇಲಿನ ಸೀಮಾ ಸುಂಕವನ್ನು ಮುಂಚೆ ಇದ್ದ ಶೇಕಡಾ 35ರಿಂದ ಶೇಕಡಾ 15ಕ್ಕೆ ಇಳಿಸಲಾಯಿತಾದರೂ ಹೆಚ್ಚುವರಿ ಶೇಕಡಾ 20 ಎಐಡಿಸಿ ತೆರಿಗೆಯನ್ನು ವಿಧಿಸಲಾಗಿದೆ. ಶೇಕಡಾ 10ರಷ್ಟು ಸಾಮಾಜಿಕ ಕಲ್ಯಾಣ ತೆರಿಗೆಯ ಜೊತೆಗೆ ಒಟ್ಟು ಪರಿಣಾಮಕಾರಿ ಸೀಮಾ ಸುಂಕದ ಪ್ರಮಾಣ ಮತ್ತೆ ಶೇಕಡಾ 38.50 ಆಗುತ್ತದೆ. ಆದ್ದರಿಂದ ತೆರಿಗೆ ದರದಲ್ಲಿ ಇಲ್ಲಿ ಯಾವುದೇ ಬದಲಾವಣೆ ಕಂಡುಬಂದಿಲ್ಲ. ಅಂತೆಯೇ, ಬಜೆಟ್‌ಗೆ ಮುಂಚಿತವಾಗಿ ಕಡಲೆಯ ಮೇಲೆ ಶೇಕಡಾ 60ರಷ್ಟು ಬಿಸಿಡಿ ವಿಧಿಸಲಾಗಿತ್ತು. ಆದರೆ ಫೆಬ್ರವರಿ 1ರಂದು ಅದನ್ನು ಶೇಕಡಾ 10ಕ್ಕೆ ಇಳಿಸಲಾಯಿತು ಹಾಗೂ ದ್ವಿದಳ ಧಾನ್ಯಗಳ ಮೇಲೆ 50 ಶೇಕಡಾ ಎಐಡಿಸಿ ವಿಧಿಸುವ ಮೂಲಕ ಪರಿಣಾಮಕಾರಿ ಸೀಮಾ ಸುಂಕ ಶೇಕಡಾ 60ರಂತೆ ಅಥವಾ ಮುಂಚಿನಂತೆಯೇ ಇರುವಂತೆ ನೋಡಿಕೊಳ್ಳಲಾಯಿತು.
ಪೆಟ್ರೋಲ್ ಮತ್ತು ಡೀಸೆಲ್ ವಿಷಯದಲ್ಲಿ ಪೆಟ್ರೋಲ್‌ಗೆ ರೂ. 2.5 ಮತ್ತು ಡೀಸೆಲ್‌ಗೆ ಲೀಟರ್‌ಗೆ 4 ರೂ. ಎಐಡಿಸಿ ಹಾಗೂ ಪೆಟ್ರೋಲ್ ಮತ್ತು ಡೀಸೆಲ್ ಮೇಲೆ ಕೃಷಿ ಮೂಲಸೌಕರ್ಯ ಮತ್ತು ಅಭಿವೃದ್ಧಿ ತೆರಿಗೆ (ಎಐಡಿಸಿ) ಹೇರಿದ ಪರಿಣಾಮವಾಗಿ, ಮೂಲ ಅಬಕಾರಿ ಸುಂಕ (ಬಿಇಡಿ) ಮತ್ತು ವಿಶೇಷ ಹೆಚ್ಚುವರಿ ಅಬಕಾರಿ ಸುಂಕ (ಎಸ್‌ಎಇಡಿ) ದರಗಳನ್ನು ಅವುಗಳ ಮೇಲೆ ಕಡಿಮೆ ಮಾಡಲಾಗಿದೆ. ಇದರಿಂದಾಗಿ ಗ್ರಾಹಕರ ಮೇಲೆ ಒಟ್ಟಾರೆ ಯಾವುದೇ ಹೆಚ್ಚುವರಿ ಹೊರೆ ಹೊರಿಸಿದಂತೆ ಆಗುವುದಿಲ್ಲ. ಇದರ ಪರಿಣಾಮವಾಗಿ, ಬ್ರ್ಯಾಂಡ್ ಮಾಡಿರದ ಪೆಟ್ರೋಲ್ ಮತ್ತು ಡೀಸೆಲ್ ಮೇಲೆ ಮೂಲ ಅಬಕಾರಿ ಸುಂಕವನ್ನು ಕ್ರಮವಾಗಿ 1.4 ರೂ., ಮತ್ತು ಪ್ರತಿ ಲೀಟರ್‌ಗೆ 1.8 ರೂ. ವಿಧಿಸಿದಂತಾಗಿದೆ.
ಕೃಷಿ ಮೂಲಸೌಕರ್ಯ ಮತ್ತು ಅಭಿವೃದ್ಧಿ ತೆರಿಗೆಗಳು ಗ್ರಾಹಕರ ಯಾವುದೇ ಹೆಚ್ಚುವರಿ ಹೊರೆಗಳನ್ನು ಹೊಂದುವುದಿಲ್ಲವಾದರೂ, ಸೆಸ್‌ಗೆ ಸಂಬಂಧಿಸಿದ ಹಲವಾರು ಇತರ ಸಮಸ್ಯೆಗಳಿದ್ದು ಅದು ಕೆಲವು ಧಾವಂತಗಳನ್ನು ಹುಟ್ಟುಹಾಕುವಂತಿವೆ.
ತೆರಿಗೆಯ ಆದಾಯದಲ್ಲಿ ರಾಜ್ಯಗಳ ಪಾಲನ್ನು ಪರಿಣಾಮಕಾರಿಯಾಗಿ ಕತ್ತರಿಸುವ ವ್ಯವಸ್ಥೆ ರೂಪಿಸುವುದು ದೊಡ್ಡ ಸಮಸ್ಯೆಯಾಗಿದೆ. ಏಕೆಂದರೆ ಈ ಸುಂಕವು ಕೇಂದ್ರ ಪಾಲಿನ ತೆರಿಗೆಗಳ ಭಾಗವಾಗುವುದಿಲ್ಲ ಮತ್ತು ಹಣಕಾಸು ಆಯೋಗದ ಶಿಫಾರಸುಗಳ ಪ್ರಕಾರ ಇದನ್ನು ರಾಜ್ಯಗಳೊಂದಿಗೆ ಹಂಚಿಕೊಳ್ಳುವುದಿಲ್ಲ. ಈ ಮೊದಲು, ಈ ವಸ್ತುಗಳ ಮೇಲೆ ಸೀಮಾ ಸುಂಕದ ರೂಪದಲ್ಲಿ ಸಂಗ್ರಹಿಸಲಾಗುತ್ತಿದ್ದ ಪಾಲು ಕೇಂದ್ರದ ಬೊಕ್ಕಸಕ್ಕೆ ಬರುತ್ತಿತ್ತು ಮತ್ತು ಅದನ್ನು ಕೇಂದ್ರ ಮತ್ತು ರಾಜ್ಯಗಳ ನಡುವೆ ಹಂಚಿಕೊಳ್ಳಲಾಗುತ್ತಿತ್ತು. ಆದರೆ ಇನ್ನು ಮುಂದೆ, ಎಐಡಿಸಿಯನ್ನು ಸಂಪೂರ್ಣವಾಗಿ ಕೇಂದ್ರಕ್ಕೆ ವಹಿಸಿಕೊಡಲಾಗಿದೆ. ಇಳಿಕೆಯಾದ ಬಿಸಿಡಿ ಮಾತ್ರ ಈ ಪ್ರದೇಶಕ್ಕೆ ಪ್ರವೇಶಿಸಿದರೆ, ಆ ಪಾಲು ಕಡಿಮೆಯಾಗುತ್ತದೆ.
ಬಜೆಟ್‌ಗೆ ಮುಂಚಿತವಾಗಿ ಉದಾಹರಣೆಗೆ, ಉತ್ಪನ್ನವೊಂದು ಶೇಕಡಾ 100ರಷ್ಟು ತೆರಿಗೆ ಹೊಂದುತ್ತದೆ ಎಂದು ಭಾವಿಸೋಣ. ಅದರಲ್ಲಿ ಬಿಸಿಡಿ ಶೇಕಡಾ 95 ಮತ್ತು ತೆರಿಗೆ 5 ಶೇಕಡಾ ಎಂದು ಊಹಿಸೋಣ. ಈ ಪೈಕಿ ಶೇಕಡಾ 5ರಷ್ಟು ತೆರಿಗೆ ಪಾಲು ಕೇಂದ್ರ ಸರ್ಕಾರದ ಬೊಕ್ಕಸಕ್ಕೆ ಹೋದರೆ, ಉಳಿದ ಶೇಕಡಾ 95 ಪಾಲನ್ನು ಕೇಂದ್ರ ಸರ್ಕಾರ ಮತ್ತು ರಾಜ್ಯಗಳ ನಡುವೆ ಹಂಚಿಕೊಳ್ಳಲಾಗಿತ್ತು. ಈಗ, ಆ ಶೇಕಡಾ 95ರಷ್ಟು ಬಿಸಿಡಿಯನ್ನು ಶೇಕಡಾ 93ಕ್ಕೆ ಇಳಿಸಿದರೆ, ತೆರಿಗೆ ವಲಯವು ಶೇಕಡಾ 7ಕ್ಕೆ ಹೆಚ್ಚಾದರೆ, ಹೆಚ್ಚುವರಿ ಶೇಕಡಾ 2ರಷ್ಟು ತೆರಿಗೆಯು ಕೇಂದ್ರ ಸರ್ಕಾರದ ಖಾತೆಗಳಿಗೆ ವರ್ಗಾಯಿಸಲ್ಪಡುತ್ತದೆ ಹಾಗೂ ರಾಜ್ಯಗಳು ಈ ಘಟಕದಿಂದ ಏನನ್ನೂ ಪಡೆಯುವುದಿಲ್ಲ.
ಕಚ್ಚಾ ತಾಳೆ ಎಣ್ಣೆಗೆ ಸಂಬಂಧಿಸಿದಂತೆ ಈ ಮೊದಲು, ಬಿಸಿಡಿಯಿಂದ ಗಳಿಸಿದ ಆದಾಯವನ್ನು ಕೇಂದ್ರ ಮತ್ತು ರಾಜ್ಯಗಳ ನಡುವೆ ಹಂಚಿಕೊಳ್ಳಲಾಗುತ್ತಿತ್ತು. ಹೊಸ ಆಡಳಿತದಲ್ಲಿ, ಕೇವಲ ಶೇಕಡಾ 15ನ್ನು ಮಾತ್ರ ಇವೆರಡರ ನಡುವೆ ಹಂಚಿಕೊಳ್ಳಲಾಗುವುದು. ಆದರೆ ಶೇಕಡಾ 37.75 ತೆರಿಗೆ ಪೈಕಿ ಕೇವಲ ಶೇಕಡಾ 27.5ರಷ್ಟು ತೆರಿಗೆ ಪಾಲು ಮಾತ್ರ ಸಂಪೂರ್ಣವಾಗಿ ಕೇಂದ್ರ ಸರ್ಕಾರದೊಂದಿಗೆ ಇರುತ್ತದೆ.
ಎಐಡಿಸಿಯೊಂದಿಗಿನ ಎರಡನೇ ಅಂಶವೆಂದರೆ ಅದರ ಭೇದಾತ್ಮಕ ದರ ರಚನೆ. ಇಲ್ಲಿಯವರೆಗೆ, ಸೆಸ್ ಅನ್ನು ಸಾಮಾನ್ಯವಾಗಿ ಏಕರೂಪದ ದರದಲ್ಲಿ ವಿಧಿಸಲಾಗುತ್ತಿತ್ತು. ಆದರೆ ವಿಭಿನ್ನ ಉತ್ಪನ್ನಗಳ ಮೇಲೆ ಶೇಕಡಾ 2.5ರಿಂದ 50ರವರೆಗಿನ ಭೇದಾತ್ಮಕ ಸೆಸ್ ದರವನ್ನು ವಿಧಿಸುತ್ತಿರುವುದು ಇದೇ ಮೊದಲು. ಮೂರನೆಯದಾಗಿ, ಎಐಡಿಸಿಯಿಂದ ಒಟ್ಟು ಸಂಗ್ರಹವು ಸ್ಪಷ್ಟವಾಗಿಲ್ಲವಾದರೂ, ಅದು ವಾರ್ಷಿಕವಾಗಿ ರೂ. 30,000 ಕೋಟಿ ಇರಬಹುದು ಎಂದು ಹೇಳಲಾಗುತ್ತಿದೆ.
ಅಲ್ಲದೆ, ಎಐಡಿಸಿ ಸಂಗ್ರಹಣೆಯನ್ನು ಎಲ್ಲಿ ಬಳಸಲಾಗುವುದು ಎಂಬ ಕುರಿತೂ ಹಲವಾರು ಪ್ರಶ್ನೆಗಳಿವೆ. ಏಕೆಂದರೆ ಈ ಹಿಂದೆ ಸಹ, ತೆರಿಗೆ ಹಣವನ್ನು ಯಾವ ಉದ್ದೇಶಕ್ಕಾಗಿ ಸಂಗ್ರಹಿಸಲಾಗಿದೆ ಎಂಬ ಪ್ರಶ್ನೆಗಳಿದ್ದವು. ಉದಾಹರಣೆಗೆ, 2018-19ರಲ್ಲಿ, ಭಾರತದ ಮಹಾಲೆಕ್ಕಪರಿಶೋಧಕರ (ಕಂಪ್ಟ್ಟ್ರೋಲರ್ ಮತ್ತು ಆಡಿಟರ್ ಜನರಲ್) ವರದಿಯ ಪ್ರಕಾರ, 2018-19ರಲ್ಲಿ ರೂ. 274592 ಕೋಟಿ ಮೊತ್ತವನ್ನು ಶೇಕಡಾ 35ರಷ್ಟು ಪ್ರಮಾಣವನ್ನು ತೆರಿಗೆ ಮತ್ತು ಇತರ ಶುಲ್ಕಗಳಿಂದ ಹಾಗೂ ಕೇವಲ ರೂ. 1.64,322 ಕೋಟಿ ಮೊತ್ತವನ್ನು ಆಯಾ ನಿಧಿಗಳು / ಮಂಡಳಿಗಳಿಗೆ ವರ್ಗಾಯಿಸಲಾಗಿದ್ದು, ಉಳಿದ ಹಣವನ್ನು ಭಾರತದ ಒಟ್ಟಾರೆ ನಿಧಿಯಲ್ಲಿ ಇಡಲಾಗಿತ್ತು. ಒಂದೊಮ್ಮೆ ಈ ತೆರಿಗೆ ಹಣವನ್ನು ಕೃಷಿ ಮೂಲಸೌಕರ್ಯಗಳ ಅಭಿವೃದ್ಧಿಗೆ ಬಳಸಲಾಗಿದ್ದರೂ ಸಹ, ನೀರಿನ ವಿತರಣೆ ಅಥವಾ ಬೆಳೆ ವೈವಿಧ್ಯೀಕರಣಕ್ಕೆ ಅಥವಾ ಕೃಷಿ ಮಾರುಕಟ್ಟೆಗಳನ್ನು ಅಭಿವೃದ್ಧಿಪಡಿಸುವಲ್ಲಿ ಇದರ ಪಾತ್ರವೇನು ಎಂಬುದು ಇನ್ನೂ ಸ್ಪಷ್ಟವಾಗಿಲ್ಲ.
ರೂ. 1 ಲಕ್ಷ ಕೋಟಿ ಕೃಷಿ ಮೂಲಸೌಕರ್ಯ ನಿಧಿಯನ್ನು (ಎಐಎಫ್) ಎಪಿಎಂಸಿಗಳು (ಕೃಷಿ ಉತ್ಪಾದನಾ ಮಾರುಕಟ್ಟೆ ಸಮಿತಿಗಳು) ತಮ್ಮ ಮೂಲಸೌಕರ್ಯ ಸೌಲಭ್ಯಗಳನ್ನು ಹೆಚ್ಚಿಸಲು ಬಳಸಿಕೊಳ್ಳಬಹುದು ಎಂದು ಬಜೆಟ್ ಪ್ರಕಟಿಸಿದೆ. ಉತ್ತಮ ಮೂಲಸೌಕರ್ಯದೊಂದಿಗೆ ಎಪಿಎಂಸಿಗಳನ್ನು ಬಲಪಡಿಸಬೇಕಿದೆ. ಕೃಷಿ ಮೂಲಸೌಕರ್ಯ ನಿಧಿಯನ್ನು ತ್ವರಿತಗತಿಯಲ್ಲಿ ಬಳಸಿಕೊಳ್ಳಲು ಪ್ರೋತ್ಸಾಹಿಸಬೇಕಿದೆ. ಅಂತೆಯೇ, ಸಣ್ಣ ಮತ್ತು ಅಂಚಿನಲ್ಲಿರುವ ರೈತರಿಗೆ ನೆರವಾಗಲು ಕೃಷಿ ಉತ್ಪಾದಕ ಸಂಸ್ಥೆಗಳ ಹೆಚ್ಚಳವನ್ನು ವೇಗವಾಗಿ ಕೈಗೊಳ್ಳಬೇಕು. ಸುಮಾರು ಶೇಕಡಾ 51ರಷ್ಟು ಎಂಎಸ್‌ಎಂಇಗಳು ಗ್ರಾಮೀಣ ಪ್ರದೇಶಗಳಲ್ಲಿದ್ದು, ಅವುಗಳನ್ನು ಪುನಃಶ್ಚೇತನಗೊಳಿಸಬೇಕಾಗಿದೆ. ಕೋವಿಡ್-19 ಸಾಂಕ್ರಾಮಿಕವು ಎಂಎಸ್‌ಎಂಇಗಳಿಗೆ ದೊಡ್ಡ ಆಘಾತ ಉಂಟು ಮಾಡಿದೆ. ಕೃಷಿ ಮೂಲಸೌಕರ್ಯ ನಿಧಿಯನ್ನು ಸಹ ಈ ಉದ್ದೇಶಕ್ಕಾಗಿ ಬಳಸಬೇಕು. ಕ್ರಿಯಾತ್ಮಕ ಎಂಎಸ್‌ಎಂಇಗಳಿಲ್ಲದೆ ಭಾರತವು ಸ್ವಾವಲಂಬಿ (ಆತ್ಮನಿರ್ಭರ್) ಆಗಲು ಸಾಧ್ಯವಿಲ್ಲ.
ಘೋಷಿತ ಕ್ರಮಗಳ ಪ್ರಭಾವವು ಯಶಸ್ವಿ ಜಾರಿಗೊಳಿಸುವಿಕೆಯನ್ನು ಅವಲಂಬಿಸಿರುತ್ತದೆ. ಕೃಷಿ ಮತ್ತು ಕೃಷಿ ನಿರ್ವಹಣೆ ಪದ್ಧತಿ; ಒಟ್ಟಾರೆ ಆರ್ಥಿಕತೆಗೆ ಬೇಡಿಕೆ ಸೃಷ್ಟಿಸಲು ಗ್ರಾಮೀಣ ಪುನರುಜ್ಜೀವನಗೊಳಿಸುವಿಕೆಯೂ ಮುಖ್ಯವಾಗಿದೆ. ಕೃಷಿ ಒಂದು ರಾಜ್ಯ ವಿಷಯವಾಗಿದೆ ಮತ್ತು ಕೇಂದ್ರವು ಸಹಕಾರಿ ಒಕ್ಕೂಟದ ಚೌಕಟ್ಟಿನಲ್ಲಿ ಕೆಲಸ ಮಾಡಬೇಕಾಗಿದೆ. ಎಐಡಿಸಿಯ ವಿನ್ಯಾಸವನ್ನು ರಾಜ್ಯಗಳೊಂದಿಗೆ ಸಮಾಲೋಚಿಸಿ ಅಂತಿಮಗೊಳಿಸಬೇಕಾಗಿದೆ.
ಕೃಷಿ ಹಾಗೂ ಕೃಷಿ ನಿರ್ವಹಣೆ ಪದ್ಧತಿಯನ್ನು ಪರಿವರ್ತಿಸುವಲ್ಲಿ ಗ್ರಾಮೀಣ ಮೂಲಸೌಕರ್ಯವು ಬೆಳವಣಿಗೆ, ಇಕ್ವಿಟಿ ಮತ್ತು ಸುಸ್ಥಿರತೆಯ ಗುರಿಗಳನ್ನು ಗಮನದಲ್ಲಿರಿಸಿಕೊಂಡು ಕೇಂದ್ರ ಸರ್ಕಾರವು ರಾಜ್ಯಗಳೊಂದಿಗೆ ನಿಕಟವಾಗಿ ಕೆಲಸ ಮಾಡಬೇಕಾಗುತ್ತದೆ. ಕೃಷಿ ಮೂಲಸೌಕರ್ಯ ಮತ್ತು ಅಭಿವೃದ್ಧಿ ತೆರಿಗೆ ನಿಧಿಯು ರೈತರ ಆದಾಯವನ್ನು ಹೆಚ್ಚಿಸುವ ಅಪೇಕ್ಷಿತ ಫಲಿತಾಂಶವನ್ನು ಈಡೇರಿಸುತ್ತದೆಯೇ ಎಂಬುದನ್ನೂ ನೋಡಬೇಕು. ಪ್ರಗತಿ ಸಾಧಿಸಬೇಕೆಂದರೆ, ಈ ನಿಧಿಯನ್ನು ಹೇಗೆ ಬಳಸಲಾಗಿದೆ ಎನ್ನುವುದು ಬಹಳ ಮುಖ್ಯವಾದ ಸಮಸ್ಯೆಯಾಗಿದ್ದು, ಅದರ ಮೇಲೆ ನಿಗಾ ವಹಿಸಬೇಕಾದ ಅವಶ್ಯಕತೆ ಇದೆ.
ಎಸ್.ಮಹೇಂದ್ರ ದೇವ್ ಉಪಕುಲಪತಿ, ಐಜಿಐಡಿಆರ್, ಮುಂಬೈ