ನವದೆಹಲಿ: ಕೇಂದ್ರ ಸರ್ಕಾರ ಜಾರಿಗೆ ತಂದಿರುವ ಮೂರು ಕೃಷಿ ಕಾಯ್ದೆಗಳನ್ನು ರದ್ದು ಪಡಿಸುವ ಪ್ರಸ್ತಾಪವನ್ನು ಕೇಂದ್ರ ಕೃಷಿ ಸಚಿವರು ಮತ್ತೊಮ್ಮೆ ತಳ್ಳಿಹಾಕಿದ್ದಾರೆ. ಆದರೆ ಕಾಯ್ದೆಗಳಲ್ಲಿನ ನಿಬಂಧನಗಳ ಬಗ್ಗೆ ಪ್ರತಿಭಟನೆ ನಿರತ ರೈತ ಸಂಘದ ನಾಯಕರೊಂದಿಗೆ ಮಾತುಕತೆಗೆ ಸರ್ಕಾರ ಸಿದ್ಧವಾಗಿದೆ ಎಂದು ಕೇಂದ್ರ ಕೃಷಿ ಸಚಿವ ನರೇಂದ್ರ ಸಿಂಗ್ ತೋಮರ್ ಹೇಳಿದ್ದಾರೆ.
ಸರ್ಕಾರ ರೈತರೊಂದಿಗೆ ಮಾತುಕತೆಗೆ ಸಿದ್ಧವಾಗಿದೆ. ಕಾಯ್ದೆಗಳನ್ನು ರದ್ದುಪಡಿಸುವುದನ್ನು ಹೊರತುಪಡಿಸಿ, ಯಾವುದೇ ರೈತ ಸಂಘವು ಮಧ್ಯರಾತ್ರಿಯಲ್ಲಿ ಕಾಯಿದೆ ನಿಬಂಧನೆಗಳ ಬಗ್ಗೆ ಮಾತನಾಡಲು ಬಯಸಿದರೆ ಅದನ್ನು ಸ್ವಾಗತಿಸುವುದಾಗಿ ತೋಮರ್ ಟ್ವೀಟ್ ಮಾಡಿದ್ದಾರೆ.
ಸರ್ಕಾರ ಕೃಷಿ ಕಾಯ್ದೆಗಳ ಸಂಬಂಧ ಈವರೆಗೆ ರೈತ ಸಂಘಟನೆಗಳ ಜೊತೆ 11 ಸುತ್ತಿನ ಮಾತುಕತೆ ನಡೆಸಿದೆ. ಜನವರಿ 22 ರಂದು ಕೊನೆಯ ಬಾರಿಗೆ ಮಾತುಕತೆ ನಡೆಸಿತ್ತು. ಜನವರಿ 26 ರಂದು ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ರೈತರು ನಡೆಸದ ಟ್ರ್ಯಾಕ್ಟರ್ ರಾಲಿ ಹಿಂಸಾಚಾರಕ್ಕೆ ತಿರುಗಿತ್ತು. ಅಂದಿನಿಂದ ರೈತ ಮುಖಂಡರ ಜೊತೆ ಸರ್ಕಾರ ಯಾವುದೇ ಮಾತುಕತೆ ಆರಂಭಿಸಿಲ್ಲ.
ಇದನ್ನೂ ಓದಿ: LJPಯಲ್ಲಿ ಬಿರುಗಾಳಿ ; ಸೈಲೆಂಟಾಗೇ ಚಿರಾಗ್ ಪಾಸ್ವಾನ್ ಸೈಡ್‌ಲೈನ್ ಮಾಡಿಸಿದ್ರಾ ಬಿಹಾರದ ರಾಜಕೀಯ 'ಚಾಣಕ್ಯ'
ಪಂಜಾಬ್, ಹರಿಯಾಣ ಮತ್ತು ಉತ್ತರ ಪ್ರದೇಶದ ಸಾವಿರಾರು ರೈತರು ದೆಹಲಿಯ ಗಡಿಯಲ್ಲಿ ಆರು ತಿಂಗಳಿಗೂ ಹೆಚ್ಚು ಕಾಲ ಶಿಬಿರಗಳನ್ನು ಹಾಕಿಕೊಂಡು ಕೃಷಿ ಕಾಯ್ದೆಗಳ ವಿರುದ್ಧ ಪ್ರತಿಭಟನೆ ನಡೆಸುತ್ತಿದ್ದಾರೆ. ಇದೇ ವಿಚಾರ ಕೋರ್ಟ್ ಮೆಟ್ಟಿಲೇರಿದ್ದು, ಮುಂದಿನ ಆದೇಶಗಳವರೆಗೆ ಸುಪ್ರೀಂಕೋರ್ಟ್ ಮೂರು ಕಾನೂನುಗಳ ಅನುಷ್ಠಾನವನ್ನು ತಡೆಹಿಡಿದಿದೆ. ಜೊತೆಗೆ ಪರಿಹಾರಗಳನ್ನು ಕಂಡು ಹಿಡಿಯಲು ಸಮಿತಿಯನ್ನು ರಚಿಸಿದೆ.