ಬೆಂಗಳೂರು: ಅಗ್ನಿಪಥ್ ಯೋಜನೆಯಡಿ ಸೇನಾಪಡೆ ಸೇರುವುದಕ್ಕಾಗಿ ಭಾರತೀಯ ವಾಯುಪಡೆಗೆ ಕೇವಲ ಆರು ದಿನಗಳಲ್ಲಿ 2 ಲಕ್ಷಕ್ಕೂ ಅಧಿಕ ಸೇವಾಕಾಂಕ್ಷಿಗಳು ಅರ್ಜಿ ಸಲ್ಲಿಸಿದ್ದಾರೆ ಎಂದು ರಕ್ಷಣಾ ಸಚಿವಾಲಯ ತಿಳಿಸಿದೆ. ಜೂನ್ 24 ರಿಂದ ಅಗ್ನಿಪಥ್ ಯೋಜನೆಯ ನೋಂದಣಿ ಆರಂಭವಾಗಿದ್ದು, ಸೋಮವಾರದವರೆಗೆ 94,281 ಹಾಗೂ ರವಿವಾರದವರೆಗೆ 56,960 ಅರ್ಜಿಗಳು ಬಂದಿದ್ದವು.
ಜೂನ್ 14 ರಂದು ಈ ಯೋಜನೆಯ ಘೋಷಣೆಯ ನಂತರ ದೇಶಾದ್ಯಂತ ಹಿಂಸಾತ್ಮಕ ಪ್ರತಿಭಟನೆಗಳು ಭುಗಿಲೆದ್ದಿದ್ದವು. ಸುಮಾರು ಒಂದು ವಾರದ ಕಾಲ ಪ್ರತಿಭಟನೆಗಳು ನಡೆದು, ಪ್ರತಿಪಕ್ಷಗಳು ಸತತವಾಗಿ ಕೇಂದ್ರ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದವು.
ರಕ್ಷಣಾ ಸಚಿವಾಲಯದ ವಕ್ತಾರ ಎ. ಭಾರತ್ ಭೂಷಣ್ ಇಂದು ಟ್ವೀಟ್ ಮಾಡಿದ್ದು, "2,01,000+ ಆಕಾಂಕ್ಷಿಗಳು ಅಗ್ನಿವೀರ್ ವಾಯು ಆಗಲು ಅರ್ಜಿ ಸಲ್ಲಿಸಿದ್ದಾರೆ. ಜುಲೈ 5, 2022 ಕೊನೆಯ ದಿನಾಂಕವಾಗಿದೆ." ಎಂದು ತಿಳಿಸಿದ್ದಾರೆ.
ಭಾರತೀಯ ವಾಯುಪಡೆ ಸಹ ಈ ಕುರಿತು ಟ್ವೀಟ್ ಮಾಡಿ, "ಈವರೆಗೆ 1,83,634 ಭವಿಷ್ಯದ ಅಗ್ನಿವೀರರು ವೆಬ್ಸೈಟ್ನಲ್ಲಿ ನೋಂದಣಿ ಮಾಡಿಕೊಂಡಿದ್ದಾರೆ. ಜುಲೈ 5, 2022ಕ್ಕೆ ನೋಂದಣಿ ಮುಕ್ತಾಯವಾಗುತ್ತದೆ." ಎಂದು ಹೇಳಿದೆ.
ಅಗ್ನಿಪಥ್ ಯೋಜನೆಯಡಿ ನಿಗದಿಪಡಿಸಲಾಗಿದ್ದ ಕನಿಷ್ಠ ವಯೋಮಿತಿಯನ್ನು 2022ರ ವರ್ಷಕ್ಕೆ ಸೀಮಿತವಾದಂತೆ 21 ರಿಂದ 23ಕ್ಕೆ ಏರಿಸಲಾಗಿದೆ. ಅಲ್ಲದೆ ಕೇಂದ್ರದ ಪ್ಯಾರಾಮಿಲಿಟರಿ ಪಡೆಗಳು ಮತ್ತು ರಕ್ಷಣಾ ಕ್ಷೇತ್ರದ ಸಾರ್ವಜನಿಕ ವಲಯದ ಕಂಪನಿಗಳಲ್ಲಿ ಅಗ್ನಿವೀರರಿಗೆ ಹೆಚ್ಚಿನ ಪ್ರಾಮುಖ್ಯತೆ ನೀಡುವುದಾಗಿ ಕೇಂದ್ರ ಸರ್ಕಾರ ಘೋಷಿಸಿದೆ.
ರಾಜ್ಯಗಳ ಪೊಲೀಸ್ ಪಡೆಗಳಲ್ಲಿ ಕೂಡ ಅಗ್ನಿವೀರರನ್ನು ನೇಮಕ ಮಾಡಿಕೊಳ್ಳುವುದಾಗಿ ಅನೇಕ ಬಿಜೆಪಿ ಆಡಳಿತದ ರಾಜ್ಯ ಸರ್ಕಾರಗಳು ಘೋಷಿಸಿದ್ದವು. ಯೋಜನೆಯ ವಿರುದ್ಧ ಹಿಂಸಾತ್ಮಕ ಪ್ರತಿಭಟನೆಗಳಲ್ಲಿ ಭಾಗಿಯಾದವರನ್ನು ಸೈನ್ಯಕ್ಕೆ ಸೇರಿಸಿಕೊಳ್ಳಲಾಗುವುದಿಲ್ಲವೆಂದು ಸೇನಾಪಡೆ ತಿಳಿಸಿದೆ.