ಹೈದರಾಬಾದ್: ಅಂತಾರಾಷ್ಟ್ರೀಯ ಕ್ರೀಡಾಪಟುವಾಗಿ ಮಿಂಚಿದ ನಂತರ ಪೊಲೀಸ್ ನೌಕರಿ ಮಾಡಿದ ಮಹಿಳೆಯೋರ್ವಳು ಇದೀಗ ರಾಜಕೀಯದಲ್ಲಿ ತಮ್ಮ ಭವಿಷ್ಯ ರೂಪಿಸಿಕೊಳ್ಳಲು ಮುಂದಾಗಿ ಅದರಲ್ಲಿ ಯಶಸ್ವಿಯಾಗಿದ್ದಾರೆ.
ಹೈದರಾಬಾದ್ನ ಥೋಟಾ ಅನುಷಾ ರೋಲರ್ ಹಾಕಿಯಲ್ಲಿ ದಕ್ಷಿಣ ಭಾರತದ ಏಕೈಕ ಮಹಿಳಾ ಕ್ರೀಡಾಪಟು ಆಗಿದ್ದು, ಇದರಲ್ಲಿ ಅಪರೂಪದ ದಾಖಲೆ ನಿರ್ಮಾಣ ಮಾಡಿದ್ದಾರೆ. ಜತೆಗೆ 14ಕ್ಕೂ ಹೆಚ್ಚು ಪದಕ ಹಾಗೂ ಬಹುಮಾನ ಗೆದ್ದಿದ್ದಾರೆ. ಇದಾದ ಬಳಿಕ ಲಂಡನ್ನಲ್ಲಿ ಸಾಫ್ಟವೇರ್ ಇಂಜಿನಿಯರ್ ಕೆಲಸ ಬಿಟ್ಟು ಭಾರತಕ್ಕೆ ಬಂದ ಅವರು, ಇದೀಗ ಆಂಧ್ರಪ್ರದೇಶದ ಕರ್ನೂಲ್ ಜಿಲ್ಲೆಯ ಓರ್ವಕಲ್ಲು ಗ್ರಾಮದ ಸರಪಂಚ್ ಆಗಿ ಆಯ್ಕೆಯಾಗಿದ್ದಾರೆ.
ಇದಕ್ಕೂ ಮೊದಲು ಅವರು ಕೆಲ ವರ್ಷಗಳ ಕಾಲ ಪೊಲೀಸ್ ಇಲಾಖೆಯಲ್ಲೂ ಸೇವೆ ಸಲ್ಲಿಸಿದ್ದಾರೆ. ಅನುಷಾ ಬಿ-ಟೆಕ್ ವ್ಯಾಸಂಗ ಮಾಡಿದ್ದು, ಒಸ್ಮಾನಿಯಾ ವಿಶ್ವವಿದ್ಯಾಲಯದಿಂದ ಸೋಷಿಯಲ್ ವರ್ಕ್ನಲ್ಲಿ ಮಾಸ್ಟರ್ ಡಿಗ್ರಿ ಪಡೆದುಕೊಂಡಿದ್ದಾರೆ.