ಡಾರ್ಜಲಿಂಗ್(ಪಶ್ಚಿಮ ಬಂಗಾಳ): ಮೂರು ಸೇನೆಗಳ ಮುಖಂಡ ಬಿಪಿನ್ ರಾವತ್ ಸೇರಿದಂತೆ ವಿವಿಧ ಭದ್ರತಾ ಸಿಬ್ಬಂದಿ ಪ್ರಯಾಣಿಸುತ್ತಿದ್ದ ಹೆಲಿಕಾಪ್ಟರ್ ತಮಿಳುನಾಡಿನ ಕೂನೂರಿನಲ್ಲಿ ಅಪಘಾತಕ್ಕೀಡಾಗಿ 13 ಮಂದಿ ಸಾವನ್ನಪ್ಪಿದ್ದಾರೆ. ಇದರಲ್ಲಿ ಗೂರ್ಖಾ ರೈಫಲ್ಸ್ನ ಹವಿಲ್ದಾರ್ ಆಗಿದ್ದ ಸತ್ಪಾಲ್ ರಾಯ್ ಕೂಡ ಸೇರಿಕೊಂಡಿದ್ದಾರೆ.
ಪಶ್ಚಿಮ ಬಂಗಾಳದ ಡಾರ್ಜಲಿಂಗ್ನ ತಾಕ್ಡಾದ ಗ್ಲೆನ್ಬರ್ನ್ನಲ್ಲಿರುವ ಮನೇದರಾ ನಿವಾಸಿ ಆಗಿರುವ ಸತ್ಪಾಲ್ ರಾಯ್ ಸಾವನ್ನಪ್ಪಿರುವ ಸುದ್ದಿ ಹೊರ ಬರುತ್ತಿದ್ದಂತೆ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ. ಈ ವೇಳೆ ಮಾತನಾಡಿರುವ ಸತ್ಪಾಲ್ ರಾಯ್ ಪತ್ನಿ ಗಂಡನ ಬಗ್ಗೆ ಹೆಮ್ಮೆ ಇದೆ ಎಂದಿದ್ದು, ದೇಶಕ್ಕಾಗಿ ಅವರು ಪ್ರಾಣ ತ್ಯಾಗ ಮಾಡಿದ್ದಾರೆ ಎಂದು ತಿಳಿಸಿದ್ದಾರೆ.
ಪ್ರಯಾಣಿಸುವ ಮೊದಲು ಪತ್ನಿ ಜೊತೆ ಮಾತು
ತಮಿಳುನಾಡಿಗೆ ತೆರಳಲು ಹೆಲಿಕಾಪ್ಟರ್ ಏರುವ ಮೊದಲು ಸತ್ಪಾಲ್ ರಾಯ್ ಮನೆಗೆ ಫೋನ್ ಮಾಡಿ ಪತ್ನಿ ಜೊತೆ ಮಾತನಾಡಿದ್ದರು. ಈ ವೇಳೆ, ತಾವು ಸಿಡಿಎಸ್ ಬಿಪಿನ್ ರಾವತ್ ಅವರೊಂದಿಗೆ ತಮಿಳುನಾಡಿಗೆ ತೆರಳುತ್ತಿರುವುದಾಗಿ ತಿಳಿಸಿದ್ದರು. ಇದಾದ ಕೆಲ ಹೊತ್ತಿನ ಬಳಿಕ ಪುನಃ ಕರೆ ಮಾಡುವ ಪ್ರಯತ್ನ ಮಾಡಿದ್ರೂ ನಂಬರ್ ವ್ಯಾಪ್ತಿ ಪ್ರದೇಶದ ಹೊರಗಿದೆ ಎಂಬ ಸಂದೇಶ ಬಂದಿದೆ. ಇದರ ಬೆನ್ನಲ್ಲೇ ಹೆಲಿಕಾಪ್ಟರ್ ಅಪಘಾತಕ್ಕೀಡಾದ ಸುದ್ದಿ ಹರಿದಾಡಲು ಶುರುವಾಯ್ತು. ಜೊತೆಗೆ ಗಂಡನ ಸಾವಿನ ಸುದ್ದಿ ಬಂದಿದೆ ಎಂಬ ಮಾಹಿತಿ ಹಂಚಿಕೊಂಡಿದ್ದಾರೆ.
ಇದನ್ನೂ ಓದಿರಿ: 15 ತಿಂಗಳ ಹೋರಾಟ ಹಿಂಪಡೆದುಕೊಂಡ ರೈತ ಸಂಘಟನೆಗಳು... ಡಿ. 11ರಿಂದ ಊರಿನತ್ತ ಪ್ರಯಾಣ
ಹೆಲಿಕಾಪ್ಟರ್ ಅಪಘಾತದಲ್ಲಿ ಸಾವನ್ನಪ್ಪಿರುವ ಬಿಪಿನ್ ರಾವತ್ ಸೇರಿದಂತೆ ಎಲ್ಲರ ಮೃತದೇಹಗಳು ಈಗಾಗಲೇ ಸಲೂರು ಏರ್ಬೇಸ್ ತಲುಪಿದ್ದು, ಅಲ್ಲಿಂದ ದೆಹಲಿಗೆ ರವಾನೆಯಾಗಲಿವೆ. ರಾಷ್ಟ್ರ ರಾಜಧಾನಿಯಲ್ಲಿ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದೆ. ಇದಾದ ಬಳಿಕ ಎಲ್ಲರ ಮೃತದೇಹಗಳು ಆಯಾ ರಾಜ್ಯಗಳಿಗೆ ರವಾನೆಯಾಗಲಿವೆ.