ರಾಜಸ್ಥಾನ (ಪಾಲಿ): ಸ್ವಾತಂತ್ರ್ಯ ಬಂದು ದಶಕಗಳೇ ಕಳೆದರೂ ಇಂದಿಗೂ ನಮ್ಮ ಹಳ್ಳಿಯ ಪರಿಸ್ಥಿತಿ ಸುಧಾರಿಸಿಲ್ಲ. ಇದಕ್ಕೆ ಜೀವಂತ ಸಾಕ್ಷಿಯಾಗಿ ರಾಜಸ್ಥಾನದ ಪಾಲಿ ಜಿಲ್ಲೆಯ ಸಟ್ರುಂಗಿಯಾ ಗ್ರಾಮ ಇಂದಿಗೂ ಮೂಲ ಸೌಕರ್ಯದಿಂದ ವಂಚಿತವಾಗಿದೆ.
ಈ ಹಳ್ಳಿ ಅದೆಷ್ಟು ಹಿಂದೆ ಉಳಿದಿದೆ ಎಂದರೆ ವಾಹನಗಳು ಓಡಾಡಲು ಈಗಲೂ ರಸ್ತೆಯೇ ಇಲ್ಲ. ಕಾಲು ದಾರಿಯಲ್ಲಿ ಅದು ಸಹ ಒಂಟೆಗಳ ಸಹಾಯದಲ್ಲೇ ತೆರಳಬೇಕಾಗಿದೆ.
ಇದೀಗ ಈ ಹಳ್ಳಿಗೆ ಸ್ವಾತಂತ್ರ್ಯ ಬಂದ ಬಳಿಕ ಇದೇ ಮೊದಲ ಬಾರಿಗೆ ಅಧಿಕಾರಿಗಳು ಭೇಟಿ ನೀಡಿದ್ದು, ಅವರೂ ಸಹ ಒಂಟೆಗಳ ಸಹಾಯದಿಂದಲೇ ಊರಿನೊಳಗೆ ಆಗಮಿಸಿದರು.
ಕೋವಿಡ್ ಜಾಗೃತಿ ಅಭಿಯಾನದ ಅಂಗವಾಗಿ ಪಾಲಿ ಜಿಲ್ಲೆಯ ರಾಯ್ಪುರ್ ಉಪವಿಭಾಗದಲ್ಲಿರುವ ಗ್ರಾಮಕ್ಕೆ ಜಿಲ್ಲಾಧಿಕಾರಿ ಅನ್ಷ್ಯದೀಪ್ ಮತ್ತು ಪೊಲೀಸ್ ವರಿಷ್ಠಾಧಿಕಾರಿ ಕಲುರಾಮ್ ರಾವತ್ ಭೇಟಿ ನೀಡಿ ಗ್ರಾಮಸ್ಥರ ಸಮಸ್ಯೆಗಳ ಕುರಿತು ಚರ್ಚಿಸಿದರು.
ಆದರೆ, ಗ್ರಾಮಕ್ಕೆ ಮೂಲಸೌಕರ್ಯವೇ ದೊರೆತಿಲ್ಲ ಎಂಬುದು ಯಾರೊಬ್ಬರು ದೂರು ನೀಡಿ ಹೇಳಬೇಕಾದ ಅನಿವಾರ್ಯತೆಯೇ ಬರಲಿಲ್ಲ. ಏಕೆಂದರೆ, ಅಧಿಕಾರಿಗಳೇ ಒಂಟೆಗಳ ಮೇಲೆ ಕಾಲುದಾರಿಯಲ್ಲಿ ಸವಾರಿ ಮಾಡಿ ಬರಬೇಕಾಯಿತು.
ಇತ್ತ ಗ್ರಾಮಕ್ಕಾಮಿಸಿದ ಅಧಿಕಾರಿಗಳಿಗೆ ಹೂವಿನ ಮಳೆಗರೆದು ಸ್ವಾಗತ ಕೋರಲಾಯಿತು. ಬಳಿಕ ಅಲಂಕಾರಿಕ ಒಂಟೆಗಳ ಮೇಲೆ ಇಡೀ ಹಳ್ಳಿ ಸುತ್ತ ಸವಾರಿ ಮಾಡಿ ಬಳಿಕ ಜನರ ಸಂಕಷ್ಟ ಆಲಿಸಿದರು.